ಸಾರಾಂಶ
ಶಿವಮೊಗ್ಗ : ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಸೊರಬ ಹಾಗೂ ಭದ್ರಾವತಿ ತಾಲೂಕಿನಲ್ಲಿ ನೂತನ ನೀರಾವರಿ ಯೋಜನೆ ಮಂಜೂರು ಮಾಡಲಾಗಿದ್ದು, ಒಟ್ಟಾರೆ 307.80 ಕೋಟಿ ರು. ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿದ್ದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಶಿರಾಳಕೊಪ್ಪ, ಅಮೃತ್ ಯೋಜನೆಯಡಿ ಶಿಕಾರಿಪುರ, ಹೊಳೆಹೊನ್ನೂರು, ಜೋಗ-ಕಾರ್ಗಲ್, ಹೊಸನಗರ, ತೀರ್ಥಹಳ್ಳಿ, ಆನವಟ್ಟಿ ಪಟ್ಟಣ ಪಂಚಾಯಿತಿ, ಪುರಸಭೆಗೆ ನೀರು ಸರಬರಾಜು ಕಲ್ಪಿಸುವ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ಕುಂಸಿ - ಗಾಜನೂರು ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ 125 ಕೋಟಿ ರು. ಅನುಮೊದನೆ ದೊರಕಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ ಎಂದರು.
ಮೆಗ್ಗಾನ್ ಆಸ್ಪತ್ರೆಯನ್ನು ಉನ್ನತೀಕರಿಸುವುದಲ್ಲದೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿಯು ಪ್ರಗತಿಯಲ್ಲಿದೆ.೫೦ ಹಾಸಿಗೆಗಳ ಕ್ರಿಟಿಕಲ್ ಕೇರ್ ಯುನಿಟ್ ಮತ್ತು ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಕಟ್ಟಡ ಕಾಮಗಾರಿಗೆ ಶೀಘ್ರದಲಿ ಚಾಲನೆ ಎಂದರು.
ಜಿಲ್ಲೆಗೆ ನೂತನವಾಗಿ 5 ಪಶು ಚಿಕಿತ್ಸಾಲಯ ಕಟ್ಟಡಗಳನ್ನು ಮಂಜೂರು ಮಾಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.ಮತ್ಸ್ಯ ಸಂಜೀವಿನಿ ಯೋಜನೆಯಡಿಯಲ್ಲಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ಮೀನುಗಾರರ ಕುಟುಂಬಗಳಿಗೆ 25 ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದರು.
ವಿಧಾನಸಭಾ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಬಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ, ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಜನಪ್ರತಿನಿಧಿಗಳು ಇತರರು ಇದ್ದರು.
ಬಾಲ್ಯ ವಿವಾಹ ತಡೆ ಕುರಿತು ಪ್ರತಿಜ್ಞಾ ವಿಧಿ
ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿದ್ದ ಸ್ವಾತಂತ್ರ್ಯ ದಿನದಲ್ಲಿ ಬಾಲ್ಯ ವಿವಾಹ ಕಾಯ್ದೆ ಕುರಿತಾದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. 29 ಕವಾಯತು ತುಕಡಿಗಳು ಶಿಸ್ತು ಮತ್ತು ಆಕರ್ಷಕ ಪಥ ಸಂಚಲನ ನಡೆಸಿದರು.
ವಿದ್ಯಾರ್ಥಿಗಳು ನಡೆಸಿಕೊಟ್ಟ ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮುಜರಾಯಿ ಇಲಾಖೆಯಿಂದ ಸಾಂಕೇತಿಕವಾಗಿ 5 ಜನ ಅರ್ಚಕರಿಗೆ ತತ್ಸಿಕ್ ಹಣವನ್ನು ನೀಡಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕ ಗಳಿಸಿದ 6 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
8 ಜನ ಸರ್ಕಾರಿ ನೌಕಕರಿಗೆ ಸರ್ವೋತ್ತಮ ಪ್ರಶಸ್ತಿ ನೀಡಲಾಯಿತು. ಗೃಹ ಇಲಾಖೆಯಿಂದ ಸಿಎಂ ಪದಕ ಪಡೆದ ಗೃಹರಕ್ಷಕ ಎಸ್.ಟಿ.ಆನಂದ್ ಅವರನ್ನು ಸನ್ಮಾನಿಸಲಾಯಿತು.
ಶಿಸ್ತಿನ ಕವಾಯತು ಪ್ರದರ್ಶಿಸಿದ ತುಕುಡಿಗಳಾದ ಎನ್‌ಸಿಸಿ ಕಸ್ತೂರಬಾ ಬಾಲಿಕಾ ಪ್ರೌಢಶಾಲೆ ಪ್ರಥಮ, ಮೊರಾರ್ಜಿ ದೇಸಾಯಿ ಬಾಲಕರ ವಸತಿ ಶಾಲೆ ಗಾಜನೂರು ದ್ವಿತೀಯ, ಕಸ್ತೂರಬಾ ಬಾಲಕಿಯರ ಪ್ರೌಢಶಾಲೆ ವಿಭಾಗದ ಭಾರತ ಸೇವಾದಳಕ್ಕೆ ತೃತೀಯ ಬಹುಮಾನ ಪಡೆಯಿತು.
ಅತ್ಯುತ್ತಮ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದ ಮಾಚೇನಹಳ್ಳಿಯ ಪೊಲೀಸ್ ಪಬ್ಲಿಕ್ ಶಾಲೆಗೆ ಪ್ರಥಮ, ಗೋಪಾಳದ ನಂದನ ವಿದ್ಯಾ ಸಂಸ್ಥೆಗೆ ದ್ವಿತೀಯ, ಗೋಪಾಳದ ಅನನ್ಯ ಪ್ರೌಢಶಾಲೆಗೆ ತೃತೀಯ ಸ್ಥಾನ ನೀಡಲಾಯಿತು.