ಹೋರಾಟ ವೇದಿಕೆಯಲ್ಲಿ ಆದರಳ್ಳಿ ಗವಿಮಠದ ಡಾ. ಕುಮಾರ ಮಹಾರಾಜರು ಮಾತನಾಡಿ, ಕಳೆದ ೧೬ ದಿನಗಳಿಂದ ಅಹೋರಾತ್ರಿ ಧರಣಿ ಮಾಡುವ ಮೂಲಕ ರೈತರು ತಮ್ಮ ಹಕ್ಕನ್ನು ಪಡೆದುಕೊಂಡಿದ್ದಾರೆ. ಇದು ಯಾರ ವೈಯಕ್ತಿಯ ಜಯವಲ್ಲ. ಇದು ಸಮಸ್ತ ರೈತರ ಜಯವಾಗಿದೆ ಎಂದರು.

ಲಕ್ಷ್ಮೇಶ್ವರ: ಕಳೆದ ೧೬ ದಿನಗಳಿಂದ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಸಮಗ್ರ ರೈತರ ಒಕ್ಕೂಟ ಮತ್ತು ರೈತ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಬಹುದೊಡ್ಡ ಜಯ ದೊರೆತಿದ್ದು, ಸೋಮವಾರ ಬೆಂಬಲ ಬೆಲೆಯಡಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದು, ಖರೀದಿ ಕೇಂದ್ರ ಪ್ರಾರಂಭವಾದ ಬಳಿಕವೇ ಸತ್ಯಾಗ್ರಹ ಕೈಬಿಡುವುದಾಗಿ ಹೋರಾಟಗಾರರು ಎಚ್ಚರಿಸಿದ್ದಾರೆ.ಭಾನುವಾರ ಹೋರಾಟ ವೇದಿಕೆಯಲ್ಲಿ ಆದರಳ್ಳಿ ಗವಿಮಠದ ಡಾ. ಕುಮಾರ ಮಹಾರಾಜರು ಮಾತನಾಡಿ, ಕಳೆದ ೧೬ ದಿನಗಳಿಂದ ಅಹೋರಾತ್ರಿ ಧರಣಿ ಮಾಡುವ ಮೂಲಕ ರೈತರು ತಮ್ಮ ಹಕ್ಕನ್ನು ಪಡೆದುಕೊಂಡಿದ್ದಾರೆ. ಇದು ಯಾರ ವೈಯಕ್ತಿಯ ಜಯವಲ್ಲ. ಇದು ಸಮಸ್ತ ರೈತರ ಜಯವಾಗಿದೆ ಎಂದರು.

ಸರ್ಕಾರ ಆದೇಶ ನೀಡಿ ೧೦ ದಿನಗಳಾಗಿದ್ದರೂ ಖರೀದಿ ಕೇಂದ್ರ ಪ್ರಾರಂಭ ಮಾಡಿರಲಿಲ್ಲ. ಇದರಿಂದ ಸರ್ಕಾರದ ಮತ್ತು ಜಿಲ್ಲಾಡಳಿತದ ಮೇಲೆ ರೈತರ ಸಂಪೂರ್ಣ ವಿಶ್ವಾಸ ಕುಂದಿಹೋಗಿತ್ತು. ಮುಂದೆ ಹೇಗೆ ಎನ್ನುವ ಚಿಂತೆ ಹೊಂದಿದ್ದ ರೈತರು ಹೋರಾಟ ಮುಂದುವರಿಸಿದ್ದರು. ರೈತರು ಬೆಳೆಗೆ ಬೆಂಬಲ ಬೆಲೆ ಕೊಡಿ ಎಂದು ಬೇಡಿಕೊಂಡಿದ್ದರೂ ಸರ್ಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿರಲಿಲ್ಲ. ಕೊನೆಗೂ ರೈತರು ರಸ್ತೆಗಿಳಿದು ಹೋರಾಟ ಪ್ರಾರಂಭಿಸುವ ಮೂಲಕ ಅಂತಿಮ ಎಚ್ಚರಿಕೆ ನೀಡಿದಾಗ, ಜಿಲ್ಲಾಡಳಿತ ಖರೀದಿ ಕೇಂದ್ರ ಪ್ರಾರಂಭಿಸುವ ಆದೇಶ ನೀಡುವ ನಿರ್ಧಾರ ಮಾಡಿರುವುದು ಸ್ವಾಗತಾರ್ಹ ಎಂದರು.

ಸೋಮವಾರ ಖರೀದಿ ಕೇಂದ್ರ ಪ್ರಾರಂಭವಾಗಲಿದ್ದು, ವೇದಿಕೆಯಲ್ಲಿ ಸಾಂಕೇತಿಕವಾಗಿ ಖರೀದಿ ಕೇಂದ್ರ ಪ್ರಾರಂಭಿಸಿ ತೂಕ ಪ್ರಾರಂಭಿಸಿದ ಬಳಿಕ ಹೋರಾಟ ಕೊನೆಗೊಳ್ಳಲಿದೆ. ಅಲ್ಲದೆ ಸರದಿ ಉಪವಾಸವನ್ನು ಕೈಬಿಡಲಿದ್ದೇವೆ ಎಂದರು.

ಹೋರಾಟದ ರೂವಾರಿ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ ಮಾತನಾಡಿ, ರೈತರ ಹೋರಾಟಕ್ಕೆ ಸರ್ಕಾರ ಕೊನೆಗೂ ಮಣಿದಿರುವುದು ರೈತ ಶಕ್ತಿಗೆ ಸಂದ ಜಯವಾಗಿದೆ. ಶನಿವಾರ ರಾತ್ರಿಯವರೆಗೂ ಶಾಂತಿಯುತವಾಗಿ ನಡೆದಿದ್ದ ನಮ್ಮ ಚಳವಳಿಯಲ್ಲಿ ಆದೇಶ ಪತ್ರ ತಂದಿರುವುದಾಗಿ ಹೇಳಿದ ಅಧಿಕಾರಿಗಳು ಅದರಲ್ಲಿ ಲಕ್ಷ್ಮೇಶ್ವರ ಖರೀದಿ ಕೇಂದ್ರ ಇರದಿರುವುದು ಹೆಚ್ಚು ಆಕ್ರೋಶವನ್ನು ತಂದಿತ್ತು. ತಕ್ಷಣದಲ್ಲಿಯೇ ಕೊರೆಯುವ ಚಳಿಯಲ್ಲಿ ಮಠಾಧೀಶರೊಂದಿಗೆ ರೈತರು ರಸ್ತೆಗಿಳಿದು ರಸ್ತೆತಡೆ ನಡೆಸಿ ಹೋರಾಟವನ್ನು ತೀವ್ರಗೊಳಿಸಲಾಗಿತ್ತು. ಅಧಿಕಾರಿಗಳು ಇದರಲ್ಲಿ ಮತ್ತೆ ತಾರತಮ್ಯ ನೀತಿ ಎಸಗಿರುವ ಸಂಶಯ ಎದ್ದು ಕಾಣುತ್ತಿತ್ತು. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೋರಾಟವನ್ನು ನಿಲ್ಲಿಸಲು ಮನವಿ ಮಾಡಿದ್ದು, ಕೊನೆಗೆ ಭಾನುವಾರ ನಸುಕಿನ ಜಾವ ೫ ಗಂಟೆಗೆ ಅಪರ ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು, ಡಿವೈಎಸ್‌ಪಿ ಅವರು ಆದೇಶ ಪತ್ರವನ್ನು ತಂದು ರೈತರಿಗೆ ತಲುಪಿಸಿದರು. ಸೋಮವಾರ ಬೆಳಗ್ಗೆ ೧೧ ಗಂಟೆಗೆ ಶಿಗ್ಲಿ ನಾಕಾ ಬಳಿ ಇರುವ ಹೋರಾಟ ವೇದಿಕೆಯಲ್ಲಿ ಸೇರಿ ವಿಜಯೋತ್ಸವವನ್ನು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪೂರ್ಣಾಜಿ ಖರಾಟೆ, ರಾಮಣ್ಣ ಉಮ್ಮೊಜಿ, ದಾದಾಪೀರ ಮುಚ್ಚಾಲೆ, ನೀಲಪ್ಪ ಶರಸೂರಿ, ಬಸವರಾಜ ಹಿರೇಮನಿ, ಹೊನ್ನಪ್ಪ ಒಡ್ಡರ, ಮಲ್ಲೇಶಪ್ಪ ಒಡ್ಡರ, ನಾಗರಾಜ ಚಿಂಚಲಿ, ಮಹೇಶ ಹೊಗೆಸೊಪ್ಪಿನ, ಸುರೇಶ ಹಟ್ಟಿ, ಕಾಶಪ್ಪ ಮುಳಗುಂದ, ಸುಭಾನ ಹೊಂಬಳ, ಮಂಜುನಾಥ ಶರಸೂರಿ, ಜ್ಞಾನೋಬಾ ಬೋಮಲೆ, ಮಂಜುನಾಥ ಕೊಡಳ್ಳಿ, ಮಂಜುನಾಥ ಬನ್ನಿಕೊಪ್ಪ ಮುಂತಾದವರಿದ್ದರು.