ಸಾರಾಂಶ
ತೊಕ್ಕೊಟ್ಟು ರೈಲ್ವೇ ಟ್ರ‍್ಯಾಕ್‌ಗೆ ಅಂಡರ್‌ಪಾಸ್ ಕಾಮಗಾರಿ ನಡೆಸಲು ರೈಲ್ವೇ ಇಲಾಖೆ ಒಪ್ಪಿಗೆ ನೀಡಿದ್ದು, ೨ ಕೋಟಿ ರು. ವೆಚ್ಚದಲ್ಲಿ ಅಂಡರ್‌ಪಾಸ್ ಕಾಮಗಾರಿ ನಡೆಯಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಳ್ಳಾಲತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲ ಬೈಲ್‌ತನಕ ಅಗಲೀಕರಣ ಕಾಮಗಾರಿ ೩೮ ಕೋಟಿ ರು. ವೆಚ್ಚದಲ್ಲಿ ಶೀಘ್ರದಲ್ಲೇ ನಡೆಯಲಿದೆ. ಕಳೆದ ೭೫ ವರ್ಷಗಳಿಂದ ಬೇಡಿಕೆಯಲ್ಲಿದ್ದ ಒಳಪೇಟೆ ಸಂಪರ್ಕಿಸುವ ರೈಲ್ವೇ ಟ್ರ‍್ಯಾಕ್‌ಗೆ ಅಂಡರ್‌ಪಾಸ್ ಕಾಮಗಾರಿ ನಡೆಸಲು ರೈಲ್ವೇ ಇಲಾಖೆ ಒಪ್ಪಿಗೆ ನೀಡಿದ್ದು, ೨ ಕೋಟಿ ರು. ವೆಚ್ಚದಲ್ಲಿ ಅಂಡರ್‌ಪಾಸ್ ಕಾಮಗಾರಿ ನಡೆಯಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ತೊಕ್ಕೊಟ್ಟು ಒಳಪೇಟೆಯಲ್ಲಿ ರೈಲ್ವೇ ಹಳಿಗೆ ಅಂಡರ್‌ಪಾಸ್ ನಿರ್ಮಾಣ ಮತ್ತು ರೈಲ್ವೇ ಓವರ್‌ಬ್ರಿಡ್ಜ್ ಅಗಲೀಕರಣಕ್ಕೆ ಸಂಬಂಧಿಸಿ ರೈಲ್ವೇ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.ತೊಕ್ಕೊಟ್ಟು ಒಳಪೇಟೆ ಉಳ್ಳಾಲದ ಕೇಂದ್ರ ಪ್ರದೇಶ, ರಾಷ್ಟ್ರೀಯ ಹೆದ್ದಾರಿಯಿಂದ ಉಳ್ಳಾಲ ನಗರಕ್ಕೆ ಸಂಪರ್ಕಿಸುವ ಕೊಂಡಿ ರಸ್ತೆಯಾಗಿದ್ದು, ರೈಲ್ವೇ ಹಳಿ ದಾಟಿಕೊಂಡು ಸಾರ್ವಜನಿಕ ಮೈದಾನ, ಮಾರ್ಕೆಟ್, ಶಾಲಾ ಕಾಲೇಜು, ದರ್ಗಾ, ದೇವಸ್ಥಾನ, ಚರ್ಚಗೆ ಪ್ರತೀ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೋಗುತ್ತಿದ್ದಾರೆ. ಕಳೆದ ೭೫ ವರುಷಗಳಿಂದ ಈ ರೈಲ್ವೇ ಹಳಿಯ ಮೇಲೆಯೇ ಎರಡೂ ಬದಿಗೆ ಜನರು ದಾಟುತ್ತಿದ್ದರು, ಕೆಲವೊಂದು ಕಡೆ ಕೆಲವು ಅನಾಹುತಗಳು ಆಗಿದ್ದವು, ಇದರ ಬಗ್ಗೆ ರೈಲ್ವೇಯವರು ಬಹಳಷ್ಟು ವರ್ಷದಿಂದ ಈ ರಸ್ತೆ ಬಂದ್ ಮಾಡಲು ಬೇಡಿಕೆಯನ್ನಿಟ್ಟಿದ್ದರೂ ಕೂಡ ಸಂದರ್ಭಕ್ಕೆ ಅನುಗುಣವಾಗಿ ಜನಸಾಮಾನ್ಯರಿಗೆ ತೊಂದರೆ ಆಗದ ರೀತಿಯಲ್ಲಿ ನಿಲ್ಲಿಸಿದ್ದೆವು, ಕಳೆದ ವರ್ಷ ರೈಲ್ವೇಯವರು ಕೆಲವೊಂದು ಪ್ರದೇಶದಲ್ಲಿ ಸಾವು ನೋವು ಆದ್ದರಿಂದ ಜನಸಾಮಾನ್ಯರ ಹಿತದೃಷ್ಟಿಯ ಉದ್ದೇಶದಿಂದ ಈ ಗೇಟ್ ಬಂದ್ ಮಾಡುವುದು ಅನಿವಾರ್ಯ ಎಂದಾಗ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿ, ಜಿಲ್ಲಾಧಿಕಾರಿ ವರದಿಯಂತೆ ರೈಲ್ವೇ ಸಚಿವ ಸೋಮಣ್ಣ ಅವರು ಮಂಗಳೂರಿಗೆ ಬಂದಾಗ ಮನವರಿಕೆಮಾಡಿದ್ದರು ಎಂದು ತಿಳಿಸಿದರು.ಇದೀಗ ಕೇಂದ್ರ ರೈಲ್ವೇ ಇಲಾಖೆಯವರು ಚೆನ್ನೈ ಮುಖ್ಯಾಲಯದಿಂದ ಅಂಡರ್‌ಪಾಸ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು, ಬಹು ವರ್ಷದ ಬೇಡಿಕೆಯಾದ ಅಂಡರ್ ಪಾಸ್ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ ಎಂದರು. ಈ ಅಂಡರ್‌ಪಾಸ್‌ನಲ್ಲಿ ಜನಸಾಮಾನ್ಯರು ನಡೆದುಕೊಂಡು ಹೋಗಲು ಮತ್ತು ದ್ವಿಚಕ್ರವಾಹನ ಸಂಚರಿಸಲು ಅವಕಾಶ ಇದೆ. ಇದರೊಂದಿಗೆ ಉಳ್ಳಾಲ ನಗರವನ್ನು ಸಂಪರ್ಕಿಸುವ ಓವರ್‌ಬ್ರಿಡ್ಜ್ ಅಗಲೀಕರಣಕ್ಕೂ ಒಪ್ಪಿಗೆ ಸಿಕ್ಕಿದ್ದು ೩ ಕೋಟಿ ರು. ವೆಚ್ಚದಲ್ಲಿ ಅಜಲೀಕರಣ ಕಾಮಗಾರಿ ನಡೆಯಲಿದೆ ಎಂದರು. ಮಂಗಳೂರು ಸಹಾಯಕ ಡಿವಿಜನ್ ಎಂಜಿನಿಯರ್ ಅಶೋಕ್, ಮಂಗಳೂರು ಹಿರಿಯ ಸೀನಿಯರ್ ಸೆಕ್ಷನ್ ಇಂಜಿನಿಯರ್ ಮುಹಸಿನ್, ಕಣ್ಣೂರು ಹಿರಿಯ ಸೆಕ್ಷನ್ ಇಂಜಿನಿಯರ್ ಅಕ್ಷಯ್, ಉಳ್ಳಾಲ ನಗರ ಸಭೆ ಅಧ್ಯಕ್ಷ ಶಶಿಕಲಾ, ಉಪಾಧ್ಯಕ್ಷ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್, ನಗರ ಸಭಾ ಸದಸ್ಯರಾದ ಅಯ್ಯೂಬ್ ಮಂಚಿಲ, ಗೀತಾಬಾಯಿ, ರವಿಚಂದ್ರ ಗಟ್ಟಿ, ನಗರ ಸಭೆ ಆಯುಕ್ತ ನವೀನ್ ಹೆಗ್ಡೆ ಮತ್ತಿತರರಿದ್ದರು.