ಮುಂದಿನ ಜಿಲ್ಲಾ ಮತ್ತು ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಗಳಿಸಬೇಕು ಎಂಬ ಉದ್ದೇಶದಿಂದ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕ್ಷೇತ್ರಕ್ಕೆ ಕಳೆದ ಬಾರಿ 350 ಕೋಟಿ ರು. ಅನುದಾನ ನೀಡಲಾಗಿತ್ತು. ಈ ಬಾರಿ 250 ಕೋಟಿ ರು. ಅಭಿವೃದ್ಧಿ ಅನುದಾನ ಸರ್ಕಾರ ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಪೇಟೆ ಬೀದಿ ಅಗಲೀಕರಣಕ್ಕಾಗಿ 175 ಕೋಟಿ ವಿಸ್ಕೃತ ಯೋಜನೆಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅನುಮೋದನೆ ದೊರಕಿದೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.

ತಾಲೂಕಿನ ಕೆಸ್ತೂರು ಜಿಪಂ ವ್ಯಾಪ್ತಿಯ ಹನುಮಂತಪುರ, ಕೆಸ್ತೂರು, ಅಡಗನಹಳ್ಳಿ, ಚಿಕ್ಕ ಅಂಕನಹಳ್ಳಿಯ ನಂದಿ ಬಸವೇಶ್ವರ ದೇವಸ್ಥಾನ, ಊತಗೆರೆ, ನವಿಲೇ, ಅರಕನಹಳ್ಳಿ ಹಾಗೂ ಮಲ್ಲನಾಯಕನಹಳ್ಳಿ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ತಲಾ 5 ಲಕ್ಷದಲ್ಲಿ ಕೈಗೊಳ್ಳಲಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಪಟ್ಟಣದ ಪೇಟೆ ಬೀದಿ ಅಗಲೀಕರಣಕ್ಕಾಗಿ ಅನುದಾನ ಕೋರಿ ಸಿಎಂಗೆ ಮನವಿ ಸಲ್ಲಿಸಿದ್ದೆ, ಇದಕ್ಕೆ ಪ್ರಸಕ್ತ ಬಜೆಟ್‌ನಲ್ಲಿ ಅನುಮೋದನೆ ದೊರಕಿದೆ. ಈ ಸಂಬಂಧ ಡಿಪಿಆರ್ ಸಲ್ಲಿಕೆಯಾಗಿದೆ ಎಂದರು.

ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ ಹಣಕಾಸು ಇಲಾಖೆ ಅನುಮೋದನೆ ಪಡೆಯಲು ಎರಡು ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಬಳಿಕ ಅಕ್ರಮ ಫುಟ್ಬಾತ್ ಅಂಗಡಿಗಳನ್ನು ತೆರವುಗೊಳಿಸಿ ರಸ್ತೆಯನ್ನು 100 ಅಡಿ ಅಗಲಕ್ಕೆ ಅಗಲೀಕರಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಪಡಿತರ ಪದಾರ್ಥಗಳನ್ನು ಪಡೆಯಲು ವೃದ್ಧರು ಮತ್ತು ಮಹಿಳೆಯರಿಗೆ ಅನುಕೂಲವಾಗುವಂತೆ ಪ್ರತಿ ಮೂರು ಗ್ರಾಮಗಳಿಗೆ ಒಂದರಂತೆ ಪಡಿತರ ಅಂಗಡಿಗಳನ್ನು ಪ್ರಸ್ತಾಪ ತೆರೆಯಲು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಾಗುವುದು. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿರುವ ಕೆಲವು ಸಂಘಟನೆಗಳ ನಾಯಕರಿಗೆ ಕಡಿವಾಣ ಹಾಕಬೇಕೆಂಬ ಆರ್‌ಟಿಐಗೆ ಕಾನೂನು ತಿದ್ದುಪಡಿ ಮಾಡುವ ಮೂಲಕ ದಂಧೆ ಕೋರರಿಗೆ ಶಿಕ್ಷೆ ವಿಧಿಸುವ ವಿಶೇಷ ಕಾನೂನು ಜಾರಿಗೆ ತರುವಂತೆ ಸದನದಲ್ಲಿ ಒತ್ತಾಯಿಸಲಾಗುವುದು ಎಂದರು.

ಮುಂದಿನ ಜಿಲ್ಲಾ ಮತ್ತು ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಗಳಿಸಬೇಕು ಎಂಬ ಉದ್ದೇಶದಿಂದ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕ್ಷೇತ್ರಕ್ಕೆ ಕಳೆದ ಬಾರಿ 350 ಕೋಟಿ ರು. ಅನುದಾನ ನೀಡಲಾಗಿತ್ತು. ಈ ಬಾರಿ 250 ಕೋಟಿ ರು. ಅಭಿವೃದ್ಧಿ ಅನುದಾನ ಸರ್ಕಾರ ನೀಡುತ್ತಿದೆ ಎಂದರು.

ಈ ವೇಳೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚೆಲುವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್, ತಾಲೂಕು ಸೊಸೈಟಿ ನಿರ್ದೇಶಕ ಶಂಕರ ಲಿಂಗೇಗೌಡ ಹಾಗೂ ಗ್ರಾಮದ ಮುಖಂಡರು ಇದ್ದರು.