ಸಾರಾಂಶ
ಕುಷ್ಟಗಿ:
ಕುಷ್ಟಗಿ-ನರಗುಂದ-ಘಟಪ್ರಭಾ ಹೊಸ ರೈಲ್ವೆ ಮಾರ್ಗದ ಸಮೀಕ್ಷೆಗೆ ಅನುಮೋದನೆ ನೀಡುವಂತೆ ಕುಷ್ಟಗಿ-ನರಗುಂದ ರೈಲ್ವೆ ಹೋರಾಟ ಸಮಿತಿಯಿಂದ ಹುಬ್ಬಳ್ಳಿ ನೈಋತ್ಯ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಅವರ ಕಾರ್ಯದರ್ಶಿ ಜಿ. ಸುನೀಲ್ ಅವರಿಗೆ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ನರಗುಂದ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನಬಸಪ್ಪ ನಂದಿ, ಈ ರೈಲು ಹೊಸ ಬ್ರಾಡ್‌ಗೇಜ್ ಮಾರ್ಗ ಕುಷ್ಟಗಿಯಿಂದ ಗಜೇಂದ್ರಗಡ, ರೋಣ, ನರಗುಂದ, ಸವದತ್ತಿ, ಯರಗಟ್ಟಿ, ಮುನವಳ್ಳಿ, ಗೋಕಾಕ ಮೂಲಕ ಘಟಪ್ರಭಾ ಸಂಪರ್ಕಿಸುವ ಹೊಸ ಯೋಜನೆ ಪರಿಗಣಿಸಿ ಸಮೀಕ್ಷೆಗೆ ಅನುಮೋದನೆ ನೀಡಬೇಕು.
ಈ ಕುರಿತು ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಪಿ.ಸಿ. ಗದ್ದಿಗೌಡರ್, ಶಾಸಕ ರಾಜಶೇಖರ ಹಿಟ್ನಾಳ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಗುತ್ತದೆ. ಈ ಮಾರ್ಗದಿಂದ ಸಾರ್ವಜನಿಕ ಸರಕು-ಸಾಗಣೆ. ಪ್ರವಾಸೋದ್ಯಮ ಮತ್ತು ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುತ್ತದೆ. ಕೂಡಲೆ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.ಕುಷ್ಟಗಿ ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ ಮಾತನಾಡಿ, ಗದಗ-ವಾಡಿ ಹೊಸ ರೈಲು ಮಾರ್ಗದಲ್ಲಿ ರೈಲು ಸಂಚಾರಕ್ಕೆ ಪೂರಕವಾಗಿ ಸಿಆರ್‌ಎಸ್ ನೇತೃತ್ವದಲ್ಲಿ ಲಿಂಗನಬಂಡಿ-ಕುಷ್ಟಗಿ ಪ್ರಯೋಗಾರ್ಥ ರೈಲು ಸಂಚಾರ ಯಶಸ್ವಿಯಾಗಿದೆ. ಏಪ್ರಿಲ್‌ನಲ್ಲಿ ಕುಷ್ಟಗಿಯಿಂದ ತಳಕಲ್ ಮಾರ್ಗವಾಗಿ ರೈಲು ಸಂಚರಿಸುವ ಬಗ್ಗೆ ಇಲಾಖೆ ಮೂಲಗಳು ಖಾತ್ರಿಪಡಿಸಿವೆ. ಈ ಮಾರ್ಗದ ಜತೆಗೆ ಕುಷ್ಟಗಿ-ಯಶವಂತಪುರ ರೈಲ್ವೆ ಸಂಚಾರ ಸೇವೆ ಆರಂಭಿಸಬೇಕೆನ್ನುವುದು ಬೇಡಿಕೆಯಾಗಿದ್ದು ರೈಲ್ವೆ ಇಲಾಖೆ ಪರಿಗಣಿಸುವ ವಿಶ್ವಾಸವಿದೆ. ಕುಷ್ಟಗಿ-ನರಗುಂದ-ಘಟಪ್ರಭಾ ಹೊಸ ರೈಲ್ವೆ ಮಾರ್ಗದ ಸಮೀಕ್ಷೆಗೆ ಅನುಮೋದನೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ನೈಋತ್ಯ ವಲಯ ಪ್ರಧಾನ ವ್ಯವಸ್ಥಾಪಕರ ಕಚೇರಿಯ ಕಾರ್ಯದರ್ಶಿ ಜಿ. ಸುನೀಲ್, ಈ ಮಾರ್ಗದ ಬೇಡಿಕೆ ಸೂಕ್ತವಾಗಿದ್ದು ಸಂಬಂಧಿಸಿದ ಸಂಸದರಿಂದ ಪ್ರಸ್ತಾಪ ಬಂದಲ್ಲಿ ರೈಲ್ವೆ ಇಲಾಖೆ ಸಮೀಕ್ಷೆಗೆ ಪರಿಗಣಿಸಲಿದೆ ಎಂದರು,ಇದೇ ವೇಳೆ ರೈಲ್ವೆ ಡಿವಿಜಿನಲ್ ಮ್ಯಾನೇಜರ್ ಮೀನಾ ಬೇಲಾ ಅವರ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು. ಶಾಂತರಾಜ್ ಗೋಗಿ, ನರಸಿಂಹ ಮುಜುಂದಾರ ಇದ್ದರು.