ತುಂಗಭದ್ರಾ ಜಲಾಶಯದ ಗೇಟ್‌ ಬದಲಿಸಲು ಅಸ್ತು!

| Published : Apr 07 2025, 12:32 AM IST

ಸಾರಾಂಶ

ತುಂಗಭದ್ರಾ ಜಲಾಶಯದ 32 ಕ್ರಸ್ಟ್‌ ಗೇಟ್‌ಗಳ ಬದಲಿಸಲು ಆಂಧ್ರಪ್ರದೇಶ ಮೂಲದ ಕೆಎಸ್‌ಎನ್‌ಡಿಟಿ ಸರ್ವೀಸ್‌ ಸಂಸ್ಥೆ ತುಂಗಭದ್ರಾ ಮಂಡಳಿಗೆ ವರದಿ ಸಲ್ಲಿಕೆ ಮಾಡಿದೆ. ಈ ವರದಿ ಆಧಾರದ ಮೇಲೆ ಮಂಡಳಿಯ ಅನುಷ್ಠಾನ ಸಮಿತಿ ಇ-ಟೆಂಡರ್‌ ಪ್ರಕ್ರಿಯೆಗೆ ಸಲಹೆ ನೀಡಲು ಮುಂದಾಗಿದೆ.

ಕೃಷ್ಣ ಲಮಾಣಿ

ಹೊಸಪೇಟೆ: ತುಂಗಭದ್ರಾ ಜಲಾಶಯದ 32 ಕ್ರಸ್ಟ್‌ ಗೇಟ್‌ಗಳ ಬದಲಿಸಲು ಆಂಧ್ರಪ್ರದೇಶ ಮೂಲದ ಕೆಎಸ್‌ಎನ್‌ಡಿಟಿ ಸರ್ವೀಸ್‌ ಸಂಸ್ಥೆ ತುಂಗಭದ್ರಾ ಮಂಡಳಿಗೆ ವರದಿ ಸಲ್ಲಿಕೆ ಮಾಡಿದೆ. ಈ ವರದಿ ಆಧಾರದ ಮೇಲೆ ಮಂಡಳಿಯ ಅನುಷ್ಠಾನ ಸಮಿತಿ ಇ-ಟೆಂಡರ್‌ ಪ್ರಕ್ರಿಯೆಗೆ ಸಲಹೆ ನೀಡಲು ಮುಂದಾಗಿದೆ.

ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ ಗೇಟ್‌ಗಳ ಪೈಕಿ 19ನೇ ಕ್ರಸ್ಟ್‌ ಗೇಟ್‌ 2024ರ ಆಗಸ್ಟ್‌ 10ರಂದು ಕಳಚಿ ಬಿದ್ದಿತ್ತು. 40 ಟಿಎಂಸಿ ನೀರು ನದಿಪಾಲಾಗಿತ್ತು. ಆ ಬಳಿಕ ಪರಿಣತ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದ ತಂಡ ಈ ಗೇಟ್‌ಗೆ ಸ್ಟಾಪ್‌ ಲಾಗ್‌ ಅಳವಡಿಕೆ ಮಾಡಿತ್ತು. ಈಗ ಈ ಗೇಟ್‌ಗೆ ಶಾಶ್ವತ ಗೇಟ್‌ ಅಳವಡಿಸಲು ಇ-ಟೆಂಡರ್‌ ಕರೆಯಲಾಗಿದ್ದು, ಶೀಘ್ರವೇ ಈ ಗೇಟ್‌ ಅಳವಡಿಕೆ ಕಾರ್ಯ ನಡೆಯಲಿದೆ.

32 ಕ್ರಸ್ಟ್‌ ಗೇಟ್‌ ಬದಲಿಸಲು ಸಲಹೆ: ಆಂಧ್ರಪ್ರದೇಶ ಮೂಲದ ಕೆಎಸ್‌ಎನ್‌ಡಿಟಿ ಸರ್ವೀಸ್‌ ಸಂಸ್ಥೆ ಜಲಾಶಯದಲ್ಲಿ ವಿನಾಶಕಾರಿಯಲ್ಲದ ಪರೀಕ್ಷೆ (ಎನ್‌ಡಿಟಿ) ನಡೆಸಿ, ಮಂಡಳಿಗೆ ವರದಿ ನೀಡಿದೆ. ಮೂರು ಸಂಪುಟದಲ್ಲಿರುವ ಈ ವರದಿಯಲ್ಲಿ ಜಲಾಶಯದ 32 ಕ್ರಸ್ಟ್‌ ಗೇಟ್‌ಗಳನ್ನು ಬದಲಿಸಲು ಸೂಚಿಸಿದೆ. ಜಲಾಶಯದ ಗಟ್ಟಿತನದ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಜಲಾಶಯದ ಹಿತದೃಷ್ಟಿಯಿಂದ ಮಹತ್ವದಾಗಿದ್ದು, ಇದೊಂದು ಉತ್ತಮ ವರದಿ ಆಗಿದೆ ಎಂದು ತುಂಗಭದ್ರಾ ಮಂಡಳಿಯ ಉನ್ನತ ಮೂಲಗಳು ''''ಕನ್ನಡಪ್ರಭ''''ಕ್ಕೆ ದೃಢಪಡಿಸಿವೆ.

ತುಂಗಭದ್ರಾ ಮಂಡಳಿ ಬಳಿ ಪ್ರಾಥಮಿಕ ಹಂತದಲ್ಲಿ ಈಗ ಡಿಸೈನ್‌ ಇದೆ. 19ನೇ ಗೇಟ್‌ಗೆ ಕೇಂದ್ರ ಸರ್ಕಾರದ ಡೈರೆಕ್ಟರ್‌ ಆಫ್‌ ಡಿಸೈನ್‌ ವಿಂಗ್ ಡಿಸೈನ್‌ ನೀಡಿದೆ. ಇದಕ್ಕೆ ಆಂಧ್ರಪ್ರದೇಶ ಸರ್ಕಾರದ ಪರಿಣತರ ತಂಡ ಕೂಡ ಸಹಮತ ವ್ಯಕ್ತಪಡಿಸಿದೆ. ಈ ಡಿಸೈನ್‌ ಆಧಾರದಲ್ಲೇ ಉಳಿದ 32 ಗೇಟ್‌ಗಳನ್ನು ಬದಲಿಸಲು ಮಂಡಳಿ ಚಿಂತನೆ ನಡೆಸಿದೆ.

ಈ ವರ್ಷ 10 ಗೇಟ್‌ಗಳ ಬದಲಿಸಲು ಚಿಂತನೆ: ಜಲಾಶಯದ 33 ಗೇಟ್‌ಗಳ ಪೈಕಿ 19ನೇ ಗೇಟ್‌ ಸ್ಟಾಪ್‌ಲಾಗ್‌ ತೆಗೆದು ಗೇಟ್‌ ಅಳವಡಿಕೆಗೆ ಈಗ ಟೆಂಡರ್‌ ಕರೆಯಲಾಗಿದೆ. ಮತ್ತೆ ಇದೇ ವರ್ಷ 10 ಗೇಟ್‌ಗಳನ್ನು ಬದಲಿಸಲು ತುಂಗಭದ್ರಾ ಮಂಡಳಿ ಮುಂದಾಗಿದೆ. ಆದರೆ, ಮಂಡಳಿ ಸಭೆಯಲ್ಲಿ ಕರ್ನಾಟಕ ಸರ್ಕಾರದ ಪ್ರತಿನಿಧಿ ಮಾತ್ರ ಇದೇ ವರ್ಷ 32 ಗೇಟ್‌ಗಳನ್ನು ಬದಲಿಸಿ, ಎಲ್ಲ ವೆಚ್ಚ ಭರಿಸಲು ಸಿದ್ಧ ಎಂದು ಮಂಡಳಿಗೆ ಅಭಯ ನೀಡಿದ್ದಾರೆ ಎಂದು ಮಂಡಳಿಯ ವಿಶ್ವಸನೀಯ ಮೂಲಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿವೆ.

₹66 ಕೋಟಿ ವೆಚ್ಚ: ತುಂಗಭದ್ರಾ ಜಲಾಶಯದ ಒಂದು ಕ್ರಸ್ಟ್‌ ಗೇಟ್‌ ಬದಲಿಸಲು ₹2 ಕೋಟಿ ಖರ್ಚಾಗಲಿದೆ. 33 ಗೇಟ್‌ಗೆ ₹66 ಕೋಟಿ ವೆಚ್ಚ ಆಗಲಿದೆ. ಈಗ 32 ಗೇಟ್‌ ಬದಲಿಸಲು ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಉತ್ಸುಕವಾಗಿವೆ. ಅದರಲ್ಲೂ ಕರ್ನಾಟಕ ಸರ್ಕಾರ ಎಲ್ಲ ₹66 ಕೋಟಿ ನೀಡುತ್ತೇವೆ. ಇದೇ ವರ್ಷ ಎಲ್ಲಾ ಗೇಟ್‌ಗಳನ್ನು ಬದಲಿಸಲು ತುಂಗಭದ್ರಾ ಮಂಡಳಿಗೆ ತಿಳಿಸಿದೆ. ಒಮ್ಮೆಲೇ ಗೇಟ್‌ ಬದಲಿಸುವ ಕಾರ್ಯ ಕೈಗೊಂಡರೆ, ಜಲಾಶಯದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದರೆ ಸಮಸ್ಯೆ ಆದೀತು ಎಂದು ತಜ್ಞರ ಸಲಹೆ ತೆಗೆದುಕೊಂಡು, ಈ ವರ್ಷ ಮತ್ತೆ 10 ಗೇಟ್‌ ಬದಲಿಸಲು ಮಂಡಳಿ ಮುಂದಾಗಿದೆ. ಉಳಿದ 22 ಗೇಟ್‌ಗಳಿಗೂ ಇ- ಟೆಂಡರ್‌ ಕರೆದು, ಕಾರ್ಯ ಆರಂಭಿಸಲು ಮುಂದಾಗಿದೆ.

ಸಮಿತಿಗಳ ಪರಿಶೀಲನೆ: ಕೇಂದ್ರದ ಎ.ಕೆ. ಬಜಾಜ್‌ ನೇತೃತ್ವದ ತಾಂತ್ರಿಕ ಪರಿಣತರ ತಂಡ, ನ್ಯಾಶನಲ್‌ ಡ್ಯಾಂ ಸೇಫ್ಟಿ ಅಥಾರಿಟಿಯ ಚೇರ್‌ಮನ್‌ ಅನಿಲ್‌ ಜೈನ್‌ ನೇತೃತ್ವದ ತಂಡ, ಪಾಂಡೆ ನೇತೃತ್ವದ ಸಲಹಾ ಸಮಿತಿ ತಂಡ ಮತ್ತು ಮಂಡಳಿ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ ನೇತೃತ್ವದ ಅನುಷ್ಠಾನ ಸಮಿತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ 10 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಇನ್ನೂ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಕೂಡ ನೀರು ಪಡೆಯುತ್ತವೆ. ಈ ಭಾಗದ ಕೈಗಾರಿಕೆಗಳಿಗೂ ಜಲಾಶಯದ ನೀರೇ ಆಸರೆಯಾಗಿದೆ. ಈಗ ಈ ಜಲಾಶಯದ ಗೇಟ್‌ಗಳನ್ನು ಬದಲಿಸಲು ಹೆಜ್ಜೆ ಇಟ್ಟಿರುವುದು ಈ ಭಾಗದಲ್ಲಿ ರೈತರು ಹಾಗೂ ಕೈಗಾರಿಕೋದ್ಯಮಿಗಳಿಗೆ ಸಮಾಧಾನ ತಂದಿದೆ.

ತುಂಗಭದ್ರಾ ಜಲಾಶಯ 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಈಗ ಜಲಾಶಯದಲ್ಲಿ 7.612 ಟಿಎಂಸಿ ನೀರು ಸಂಗ್ರಹ ಹೊಂದಿದೆ. ಆಗಿನ ಮದ್ರಾಸ್‌ ಪ್ರಾಂತ್ಯ ಹಾಗೂ ಹೈದರಾಬಾದ್‌ನ ನವಾಬರು ಸೇರಿ ₹130 ಕೋಟಿ ವೆಚ್ಚದಲ್ಲಿ ಜಲಾಶಯ ನಿರ್ಮಾಣ ಮಾಡಿದ್ದರು.

ಟೆಂಡರ್‌ ಕರೆಯಲಾಗಿದೆ: ತುಂಗಭದ್ರಾ ಜಲಾಶಯದ 32 ಗೇಟ್‌ಗಳ ಬದಲಾವಣೆಗೆ ಆಂಧ್ರಪ್ರದೇಶದ ಕೆಎಸ್‌ಎನ್‌ಡಿಟಿ ಸರ್ವೀಸ್‌ ಸಂಸ್ಥೆ ವರದಿ ನೀಡಿದೆ. ಶೀಘ್ರವೇ ಇ-ಟೆಂಡರ್‌ ಕರೆಯಲಾಗುವುದು. 19ನೇ ಕ್ರಸ್ಟ್‌ ಗೇಟ್‌ ನಿರ್ಮಾಣಕ್ಕೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ ಹೇಳಿದರು.ಎಲ್ಲರಿಗಿಂತ ಮೊದಲು ತಿಳಿಯುವುದೇ ಇಲ್ಲಿ: ಕನ್ನಡಪ್ರಭ ಪತ್ರಿಕೆ 2025ರ ಮಾರ್ಚ್‌ 21ರಂದೇ ಟಿಬಿ ಡ್ಯಾಂ ಗೇಟ್‌ ಬದಲಿಸಲು ಎನ್‌ಡಿಟಿ ಪರೀಕ್ಷೆ! ಎಂದು ವರದಿ ಪ್ರಕಟಿಸಿತ್ತು. ಈ ವರದಿ ಆಧಾರದ ಮೇಲೆ ಗೇಟ್‌ ಬದಲಾವಣೆ ಆಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ಈಗ ಆಂಧ್ರಪ್ರದೇಶದ ಕೆಎಸ್‌ಎನ್‌ಡಿಟಿ ಸರ್ವಿಸ್‌ ಸಂಸ್ಥೆ ವರದಿಯೂ ನೀಡಿದೆ. ಈಗ ಗೇಟ್‌ಗಳ ಬದಲಾವಣೆಗೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ.