2015ರ ವರೆಗೆ ಖಾಲಿ‌ ಇರುವ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಬೋಧಕರ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ಮತ್ತು‌ ಅನುಮೋದನೆ ನೀಡಿರುವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಹೇಳಿದರು.

ಮುಂಡರಗಿ: 2015ರ ವರೆಗೆ ಖಾಲಿ‌ ಇರುವ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಬೋಧಕರ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ಮತ್ತು‌ ಅನುಮೋದನೆ ನೀಡಿರುವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವದ ಅಂಗವಾಗಿ ನಿರ್ಮಾಣ ಮಾಡಿದ ಜ.ಅ.ಸಂ.ಪ.ಪೂ. ಕಾಲೇಜಿನ ನೂತನ ಕಟ್ಟಡ ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಈ ಹಿಂದಿನ ಸಿದ್ದರಾಮಯ್ಯ ಅವರ ಆಡಳಿತದ‌ 2015ರ ವರೆಗೂ ಖಾಲಿಯಾಗಿರುವ ಬೋಧಕರ ಹುದ್ದೆಗಳನ್ನು ಅನುದಾನಿತ ಪದವಿ ಕಾಲೇಜುಗಳಲ್ಲಿ ಭರ್ತಿ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಆ‌ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿದ್ದರ ಪರಿಣಾಮ ನಮ್ಮ ಈಗಿನ ಸರ್ಕಾರ ಬರುವವರೆಗೂ‌ ಅದು ಸಾಧ್ಯವಾಗಲಿಲ್ಲ. ನಾನು ಈ‌ ಇಲಾಖೆಯ ಸಚಿವನಾದ ಮೇಲೆ ಅನೇಕ‌ ಹಿರಿಯರಿಂದ ವಿಷಯ ತಿಳಿದು ನಾನು ಆ ನಿಯಮಗಳನ್ನು ಸಡಿಲಗೊಳಿಸಿದ್ದೇನೆ ಎಂದು ಹೇಳಿದರು.

ಅನುದಾನಿತ ಸಂಸ್ಥೆಗಳ ಶಾಲಾ- ಕಾಲೇಜುಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಶ್ರೀಗಳು ಹೇಳಿದರು. ಕಳೆದ‌ ವರ್ಷ ಮುಖ್ಯಮಂತ್ರಿ ಅನುದಾನಿತ ಶಾಲೆ ಮತ್ತು ಪದವಿ ಕಾಲೇಜುಗಳಲ್ಲಿ 2020ರ ವರೆಗೆ ಖಾಲಿ‌ ಇರುವ ಹಾಗೂ ಬೇರೆ ಯಾವುದೇ ಕಾರಣಕ್ಕೆ ಖಾಲಿ‌ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ಅನುಮತಿ ನೀಡಿದ್ದರು. ನಾವು ಆ ಪ್ರಕ್ರಿಯೆ ಭಾಗವಾಗಿ ಮಾಹಿತಿ‌ ಸಂಗ್ರಹಣೆ ಕಾರ್ಯ ಪ್ರಾರಂಭಿಸಿದ್ದೆವು. ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಮಾನದಂತೆ‌ ಒಳಮೀಸಲಾತಿಯ ಪ್ರಕ್ರಿಯೆ ಕೈಗೊಂಡಿದ್ದರಿಂದ ಈ ಎಲ್ಲ ಪ್ರಕ್ರಿಯೆಗಳಿಗೆ ತಡೆಯಾಯಿತು. ಇದೀಗ ಸಮಸ್ಯ ತಿಳಿಯಾಗುವಂತಹ ಸಂದರ್ಭ‌ ಬಂದಿದೆ. 2020ರ ವರೆಗೂ ಅನುದಾನಿತ ಶಿಕ್ಷಣ‌ ಸಂಸ್ಥೆಗಳ ಪದವಿ ಕಾಲೇಜುಗಳಲ್ಲಿ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ತುಂಬುವ ಕಾರ್ಯವನ್ನು ಸರ್ಕಾರ ಶೀಘ್ರದಲ್ಲಿಯೇ ಆರಂಭಿಸಲಿದೆ. ಈ ಮೂಲಕ ಅನುದಾನಿತ ಪದವಿ ಕಾಲೇಜುಗಳ‌ ಮೇಲೆ ಆಗುವ ಹೊರೆಯನ್ನು ಕಡಿಮೆ ಮಾಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದರು.

ಜ. ಡಾ. ಅನ್ನದಾನೀಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಎಸ್.ಎಸ್. ಪಾಟೀಲ, ಆರ್.ಆರ್. ಹೆಗಡಾಳ, ಕರಬಸಪ್ಪ ಹಂಚಿನಾಳ, ವೀರಣ್ಣ ಗುಜ್ಜಲ, ವಿ.ಎಫ್. ಗುಡಪ್ಪನವರ, ಯು.ಸಿ. ಹಂಪಿಮಠ, ಎಂ.ಎಸ್. ಶಿವಶೆಟ್ಟಿ, ಎಸ್.ಬಿ. ಹಿರೇಮಠ, ಮಲ್ಲಿಕಾರ್ಜುನ ಬಳ್ಳೋಳ್ಳಿ, ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಉಪಸ್ಥಿತರಿದ್ದರು.