ಸಾರಾಂಶ
- 8 ದಿನಗಳ ಪರಿಶ್ರಮದಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಾಧನೆ ದಾಖಲು - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಎಲೆಮರೆಯ ಕಾಯಿಯಂತೆ ಬಹುಮುಖ ಪ್ರತಿಭೆಯ ಎಂಜಿನಿಯರ್ ಪದವೀಧರೆ ವಿಭಿನ್ನ ಪ್ರಯತ್ನದೊಂದಿಗೆ ಪಿಕ್ಸಲ್ ಆರ್ಟ್ ಕಲೆಯಲ್ಲಿ 25 ಗ್ರಾಫ್ ಶೀಟ್ ಬಳಸಿ, 8 ದಿನಗಳ ಪರಿಶ್ರಮದಿಂದ 3.93 x 2.95 ಅಡಿಗಳ ಅಳತೆಯಲ್ಲಿ ನೆಚ್ಚಿನ ನಾಯಕ ನಟ, ದಿವಂಗತ ಪುನೀತ್ ರಾಜಕುಮಾರ್ ಭಾವಚಿತ್ರ ರಚಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2024ರಲ್ಲಿ ದಾಖಲೆ ನಿರ್ಮಿಸಿದ್ದಾರೆ.ನಗರದ ವಿದ್ಯಾನಗರದ ಹಿರಿಯ ಪತ್ರಿಕಾ ವಿತರಕ ಪಿ.ಪ್ರಕಾಶ, ಲಕ್ಷ್ಮೀ ಪ್ರಕಾಶ ದಂಪತಿ ಪುತ್ರಿ ಪಿ. ಸ್ನೇಹಾ ಸಾಧನೆ ಈಗ ಎಲ್ಲರೂ ಹುಬ್ಬೇರಿಸುವಂತಿದೆ. ಹರಿಯಾಣದ ಫರೀದಾಬಾದ್‌ನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್- 2024ರಲ್ಲಿ ಪಿ.ಸ್ನೇಹಾ ಈ ಸಾಹಸ ಮೆರೆದಿದ್ದಾರೆ. ವಿಷ್ಣವರ್ಧನ್ ಹಾಗೂ ಪುನೀತ್ ರಾಜಕುಮಾರ್ ಇವರ ಅಚ್ಚುಮೆಚ್ಚಿನ ನಟರು.
ಸ್ನೇಹ ಅವರು ದಾವಣಗೆರೆ ಮಾಡ್ರನ್ ಶಾಲೆಯಲ್ಲಿ ಹೈಸ್ಕೂಲ್‌ವರೆಗೆ, ಡಿಆರ್‌ಆರ್ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಹಾಗೂ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದಾರೆ. ಕಂಪನಿಯೊಂದರಲ್ಲಿ ಕೆಲಸ ಮಾಡಿ, ಈಗ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಚಿತ್ರಕಲೆ ಬಗ್ಗೆ ಆಸಕ್ತಿ. 10ನೇ ತರಗತಿ ನಂತರ ಓದಿನ ಜೊತೆಗೆ ತಮ್ಮ ಕಲಾಸಕ್ತಿಯನ್ನು ಗಂಭೀರವಾಗಿ ಪರಿಗಣಿಸಿ, ಏಕಲವ್ಯನಂತೆ ತನಗೆ ತಾನೇ ಗುರುವಾಗಿ, ಕಲಾವಿದೆಯಾಗಿ, ಸಾಧಕಿಯಾಗಿದ್ದಾರೆ.ಲಾರ್ಜೆಸ್ಟ್ ಪಿಕ್ಸೆಲ್ ಆರ್ಟ್ ಪೋಟ್ರೆಟ್ ಎಂಬುದಾಗಿ ಪ್ರೋತ್ಸಾಹಿಸಿ, ಉತ್ತಮ ಪ್ರಶಂಸೆಯೊಂದಿಗೆ ಪ್ರಶಸ್ತಿ, ಪ್ರಮಾಣ ಪತ್ರ, ಪದಕ ಹಾಗೂ ರೆಕಾರ್ಡ್ ಬುಕ್‌ನಲ್ಲಿ ಪಿ.ಸ್ನೇಹ ತನ್ನ ಹೆಸರನ್ನು ದಾಖಲಿಸಿ, ಹೆತ್ತವರು ಸೇರಿದಂತೆ ಎಲ್ಲರ ಗಮನ ಸೆಳೆದಿದ್ದಾರೆ.
ಯಾವುದೇ ವಸ್ತು ನೀಡಿದರೂ ಅದರ ಪ್ರತಿರೂಪ ಸಿದ್ಧಪಡಿಸುವ ಚಾಕಚಕ್ಯತೆ ಹೊಂದಿರುವ ಸ್ನೇಹ, ಕಲಾಸೇವೆಯಲ್ಲಿ ತೊಡಗಿದ್ದವರು. ಇವರ ಕಲಾವಂತಿಕೆ ''''''''ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2024''''''''ನಲ್ಲಿ ಈಗ ದಾಖಲೆಯಾಗಿದೆ. ತನ್ನ ಪುಟಗಳಲ್ಲಿ ಸ್ನೇಹ ಹೆಸರು, ಸಾಧನೆಗೂ ಜಾಗ ಕೊಟ್ಟಿದೆ. ವೃತ್ತಿ ಜೊತೆಗೆ ಪೆನ್ಸಿಲ್ ಸ್ಕೆಚ್, ಪೇಂಟಿಂಗ್, ಸ್ಟ್ರಿಂಗ್ ಆರ್ಟ್ (ನೂಲು ಚಿತ್ರ), ಪಿಕ್ಸೆಲ್ ಆರ್ಟ್, ರೆಸಿನ್ ಆರ್ಟ್ ಹೀಗೆ ಬಗೆಬಗೆಯ ಕಲಾಪ್ರಕಾರಗಳ ಪ್ರವೃತ್ತಿ ತೊಡಗಿಕೊಂಡಿದ್ದಾರೆ.- - -
ಬಾಕ್ಸ್ * ಚಿರಂಜೀವಿ ಸರ್ಜಾ ಚಿತ್ರ ಕನ್ನಡದ ಖ್ಯಾತ ಚಿತ್ರನಟ ದಿವಂಗತ ಚಿರಂಜೀವಿ ಸರ್ಜಾ ಜನ್ಮದಿನ ನಿಮಿತ್ತ ಸತತ 14 ಗಂಟೆ ಕಾಲ ಪರಿಶ್ರಮ ವಹಿಸಿ, ಮರದ ಹಲಗೆ ಮೇಲೆ 250 ಮೊಳೆಗಳನ್ನು ವೃತ್ತಾಕಾರದಲ್ಲಿ ಹೊಡೆದು, ಅವುಗಳನ್ನೇ ಆಧಾರವಾಗಿಟ್ಟುಕೊಂಡು, 4 ಕಿ.ಮೀ. ಉದ್ದದ ದಾರದಿಂದ ಚಿರಂಜೀವಿ ಸರ್ಜಾ ಭಾವಚಿತ್ರ ರಚಿಸಿದ್ದರು. ನಂತರ ಅದನ್ನು ಚಿರಂಜೀವಿ ಪತ್ನಿ ನಟಿ ಮೇಘನಾ ರಾಜ್ ಅವರಿಗೆ ಅರ್ಪಿಸಿದ್ದರು. ನೆಚ್ಚಿನ ನಟ ಪುನೀತ್ ರಾಜಕುಮಾರ್ ನೆನಪಿಗಾಗಿ ಸಹ ಸ್ಟ್ರಿಂಗ್ ಆರ್ಟ್ ಮಾಡಿ, ಅಪ್ಪಟ ಅಪ್ಪು ಮೇಲಿನ ಅಭಿಮಾನ ಪ್ರದರ್ಶಿಸಿದ್ದರು. ಅದೇ ಕಲಾಕೃತಿಯನ್ನು ನಿರೂಪಕಿ ಅನುಶ್ರೀ ಅವರಿಗೆ ಸ್ನೇಹ ನೀಡಿದ್ದರು.ಈಗ ಮತ್ತೊಂದು ವಿಭಿನ್ನ ಪ್ರಯತ್ನವಾಗಿ ಪಿಕ್ಸಲ್ ಆರ್ಟ್‌ನಲ್ಲಿ ಪುನೀತ್ ರಾಜಕುಮಾರ ಭಾವಚಿತ್ರ ರಚಿಸಿ, ಗಮನ ಸೆಳೆದಿದ್ದಾರೆ. ವಿವಿಧ ಪ್ರಕಾರದ ರಂಗೋಲಿಗಳನ್ನೂ ಬಿಡಿಸುವ ಸ್ನೇಹ, ಮನೆಯಲ್ಲಿ ಗೌರಿ-ಗಣೇಶ, ಲಕ್ಷ್ಮೀ ಪೂಜೆ ಇತ್ಯಾದಿ ಆಚರಣೆ ವೇಳೆ ದೇವರ ಮಂಟಪ ವಿಭಿನ್ನವಾಗಿ ಅಲಂಕರಿಸುವಲ್ಲಿ ಸಿದ್ಧಹಸ್ತರು.
ವಿಭಿನ್ನ ಬಗೆಗಳ ಗಿಫ್ಟ್ ಪ್ಯಾಕ್, ಕೀ ಚೈನ್, ಬರ್ತಡೇ ಗಿಫ್ಟ್, ಗ್ಲಾಸ್ ವಾಸ್‌ಗಳನ್ನು ಮನೆಯಲ್ಲೇ ತಯಾರಿಸುವ ಕಲೆ ಸ್ನೇಹ ಕರಗತವಾಗಿದೆ. ಪಿ.ಸಂಕೇತ್ ಸಹ ಅಕ್ಕನಂತೆ ದಾರದಿಂದ ಸಂಗೀತ ನಿರ್ದೇಶಕ ಹಂಸಲೇಖ ಅವರ ಕೃತಿ ರಚಿಸಿದ್ದಾರೆ. ಜೊತೆಗೆ ಗಿಫ್ಟ್ ಪ್ಯಾಕ್, ಚಿತ್ರಕಲೆ, ಫೋಟೋಗ್ರಫಿಯಲ್ಲಿ ಚಾಣಾಕ್ಷ.- - - -15ಕೆಡಿವಿಜಿ12: ಪಿ.ಸ್ನೇಹ ಅವರ ಪಿಕ್ಸಲ್ ಆರ್ಟ್‌ನಲ್ಲಿ ಅರಳಿದ ಯುವರತ್ನ ಪುನೀತ್ ರಾಜಕುಮಾರ್.
-15ಕೆಡಿವಿಜಿ13, 14, 15:ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2024ರಲ್ಲಿ ದಾಖಲೆ ಬರೆದ ದಾವಣಗೆರೆಯ ಬಹುಮುಖ ಪ್ರತಿಭೆಯ ಪಿ.ಸ್ನೇಹ.