ಹಾಲು, ವಿದ್ಯುತ್‌ ಬಳಿಕ ಮತ್ತೊಂದು ದರ ಏರಿಕೆ ಬರೆ

| Published : Apr 02 2025, 01:01 AM IST

ಹಾಲು, ವಿದ್ಯುತ್‌ ಬಳಿಕ ಮತ್ತೊಂದು ದರ ಏರಿಕೆ ಬರೆ
Share this Article
  • FB
  • TW
  • Linkdin
  • Email

ಸಾರಾಂಶ

ಏ.1ರ ಮಂಗಳವಾರದಿಂದ ಜಾರಿಗೆ ಬರುವಂತೆ ಹಾಲು, ಮೊಸರು, ವಿದ್ಯುತ್‌ ದರ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಡೀಸೆಲ್‌ ಬೆಲೆಯನ್ನೂ ಹೆಚ್ಚಿಸಿ ಗ್ರಾಹಕರಿಗೆ ಮತ್ತೊಂದು ದರ ಏರಿಕೆ ಶಾಕ್‌ ನೀಡಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಏ.1ರ ಮಂಗಳವಾರದಿಂದ ಜಾರಿಗೆ ಬರುವಂತೆ ಹಾಲು, ಮೊಸರು, ವಿದ್ಯುತ್‌ ದರ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಡೀಸೆಲ್‌ ಬೆಲೆಯನ್ನೂ ಹೆಚ್ಚಿಸಿ ಗ್ರಾಹಕರಿಗೆ ಮತ್ತೊಂದು ದರ ಏರಿಕೆ ಶಾಕ್‌ ನೀಡಿದೆ. ಡೀಸೆಲ್‌ ಬೆಲೆ ಹೆಚ್ಚಳದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 2000 ರು. ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ.

ರಾಜ್ಯದಲ್ಲಿ ಇದುವರೆಗೆ ಪ್ರತಿ ಲೀಟರ್‌ ಡೀಸೆಲ್‌ ಮೇಲೆ ಮಾರಾಟ ತೆರಿಗೆ ಶೇ.18.44ರಷ್ಟಿತ್ತು. ಅದನ್ನು ಮಂಗಳವಾರದಿಂದಲೇ ಜಾರಿಗೆ ಬರುವಂತೆ ಶೇ.21.17ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಮಾರಾಟ ತೆರಿಗೆ ದರ ಶೇ.2.73 ರಷ್ಟು ಹೆಚ್ಚಳವಾಗಿದೆ. ಪರಿಣಾಮ ರಾಜ್ಯಾದ್ಯಂತ ಪ್ರತಿ ಲೀಟರ್‌ ಡೀಸೆಲ್‌ ದರ 2 ರು. ಏರಿಕೆಯಾಗಿ, 91.02 ರು. ತಲುಪಿದೆ. ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಇದುವರೆಗೆ ರಾಜ್ಯದಲ್ಲಿ ಪ್ರತಿ ಲೀಟರ್‌ ಡೀಸೆಲ್‌ ದರ 89.02 ರು. ಇತ್ತು.

ಸರ್ಕಾರದ ಸಮರ್ಥನೆ:

ರಾಜ್ಯದಲ್ಲಿ ಡೀಸೆಲ್‌ ಮೇಲಿನ ಮಾರಾಟ ತೆರಿಗೆ ದರ ಹೆಚ್ಚಿಸಿದ ಬಳಿಕವೂ ರಾಜ್ಯದಲ್ಲಿ ಪರಿಷ್ಕೃತ ದರವು ನೆರೆ ರಾಜ್ಯಗಳಿಗಿಂತ ಕಡಿಮೆ ಇದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಅಲ್ಲದೆ, ರಾಜ್ಯದಲ್ಲಿ 2021ರ ನವೆಂಬರ್‌ 4ರ ನಂತರ ಡೀಸೆಲ್‌ ಮೇಲೆ ವಿಧಿಸುತ್ತಿದ್ದ ಮಾರಾಟ ತೆರಿಗೆ ದರವು ಶೇ.24ರಷ್ಟಿತ್ತು. ಇದರಿಂದ ಅಂದಿನ ಮಾರಾಟ ದರ ಪ್ರತಿ ಲೀಟರ್‌ಗೆ 92.03 ಇತ್ತು. 2024 ಜೂನ್‌ 15ರಂದು ಸರ್ಕಾರ ಡೀಸೆಲ್‌ ಮಾರಾಟ ತೆರಿಗೆ ದರವನ್ನು ಶೇ.18.44ಕ್ಕೆ ಇಳಿಸಿತ್ತು ಎಂದು ಟಿಪ್ಪಣಿ ನೀಡಲಾಗಿದೆ. ತನ್ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಆರಂಭದಲ್ಲಿ ಡೀಸೆಲ್‌ ಮಾರಾಟ ತೆರಿಗೆ ದರ ಇಳಿಕೆ ಮಾಡಿತ್ತು ಎಂದು ಪರೋಕ್ಷವಾಗಿ ತಿಳಿಸಲಾಗಿದೆ.

ಸರಕು ಸೇವಾ ದರ ಹೆಚ್ಚಳ?:

ಟೋಲ್‌ ದರ ಹೆಚ್ಚಳದ ಜೊತೆಗೆ ಈಗ ಡೀಸೆಲ್‌ ದರ ಏರಿಕೆಯಾಗಿರುವುದರಿಂದ ರಾಜ್ಯದಲ್ಲಿ ಎಲ್ಲ ರೀತಿಯ ವಾಹನಗಳ ಸರಕು ಸೇವೆಗಳ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಸರಕು ಸೇವೆಗಳ ದರ ಏರಿಕೆಯಾದರೆ ಎಲ್ಲ ರೀತಿಯ ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗುವ ಆತಂಕವಿದೆ.

ಈ ಎರಡೂ ದರ ಏರಿಕೆಯಿಂದ ಸರಕು ಸೇವಾ ವಾಹನಗಳ ಕಾರ್ಯಾಚರಣೆಗೆ ಎಷ್ಟು ಹೊರೆ ಬೀಳಲಿದೆ ಎಂದು ಕೆಲ ದಿನಗಳ ಕಾಲ ಲೆಕ್ಕಾಚಾರ ಮಾಡಿ ನಂತರ ಸರಕು ಸೇವೆಗಳ ದರ ಏರಿಕೆ ಬಗ್ಗೆ ಆಲೋಚಿಸಲು ರಾಜ್ಯ ಲಾರಿ ಮಾಲೀಕರ ಸಂಘ ಮುಂದಾಗಿದೆ. ಸರಕು ಸೇವೆಗಳ ದರ ಏರಿಕೆಯಾದರೆ ತಾನಾಗಿಯೇ ಆಹಾರೋತ್ಪನ್ನಗಳು, ದಿನಸಿ, ತರಕಾರಿ ಸೇರಿದಂತೆ ಎಲ್ಲಾ ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ.