ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣ ಪಂಚಾಯಿತಿ ತಮಗೆ ಮೂಲಭೂತ ಸೌಲಭ್ಯಗಳನ್ನು ನೀಡಲು ವಿಫಲವಾಗಿದೆ ಎಂದು ಆರೋಪಿಸಿ ಪಟ್ಟಣದ 9 ನೇ ವಾರ್ಡಿನ ನಿವಾಸಿಗಳು ಪಟ್ಟಣ ಪಂಚಾಯಿತಿ ಮುಂಭಾಗ ಅರೆ ಬೆತ್ತಲೆ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ ಮಾಡಿಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ. ಕಳೆದ ಮುವತ್ತು ವರ್ಷದಿಂದ ಇಲ್ಲಿ ವಾಸಿಸುತ್ತಿದ್ದೇವೆ. ಪಂಚಾಯಿತಿಗೆ ಎಲ್ಲಾ ವಿಧವಾದ ತೆರಿಗೆಯನ್ನು ಕಟ್ಟುತ್ತಿದ್ದೇವೆ. ಆದರೆ ಪಂಚಾಯಿತಿ ನಮಗೆ ಯಾವುದೇ ಸವಲತ್ತುಗಳನ್ನು ನೀಡಲು ವಿಫಲವಾಗಿದೆ ಎಂದು ಆರೋಪಿಸಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ದಂಡಿನಶಿವರ ಕುಮಾರ್ ಮಾತನಾಡಿ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಬಲಾಢ್ಯರ ಪರ ವಕಾಲತ್ತು ವಹಿಸಿ ಬಡವರ ಶೋಷಣೆ ಮಾಡುತ್ತಿದ್ದಾರೆ. ಚರಂಡಿ ನೀರು ಹೋಗಲು ಅಸಾಧ್ಯವಾಗಿದೆ. ಇಂತಹ ದುರವಸ್ಥೆಯಲ್ಲಿ ಇಲ್ಲಿಯ ನಾಗರೀಕರು ಬದುಕು ಸವೆಸುತ್ತಿದ್ದಾರೆಂದು. ಕೂಡಲೇ ಸೂಕ್ತ ಕ್ರಮ ಜರುಗಿಸಿ ನಾಗರೀಕರಿಗೆ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಕಾನೂನನ್ನು ಇಲ್ಲಿಯ ಜನರೇ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಿಲಿದೆ ಎಂದು ಎಚ್ಚರಿಸಿದರು. 9 ನೇ ವಾರ್ಡಿನ ನಿವಾಸಿ ಬೋರಪ್ಪ ಮಾತನಾಡಿ, ಅನೇಕ ಬಾರಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಿಗೆ ಮತ್ತು ಮುಖ್ಯ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯ ನಿರ್ಮಿಸಿ ಕೊಡುವಂತೆ ಮನವಿ ಮಾಡಿಕೊಂಡಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಕಾನ್ವೆಂಟ್ ನ ಮಾಲೀಕ ಚಂದ್ರೇಗೌಡ ಎಂಬುವವರು ಸಾರ್ವಜನಿಕರು ಓಡಾಡುವ ರಸ್ತೆಯನ್ನೇ ಅಕ್ರಮವಾಗಿ ಮುಚ್ಚಿ ಗೇಟ್ ನಿರ್ಮಿಸಿಕೊಂಡಿರುವುದನ್ನು ಈ ಕೂಡಲೇ ತೆರವುಗೊಳಿಸಬೇಕು. ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸದೇ ಪ್ರಭಾವಿಗಳ ಕುಣಿತಕ್ಕೆ ಇಲ್ಲಿಯ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಸಾರ್ವಜನಿಕರ ರಸ್ತೆಯನ್ನು ತೆರವುಗೊಳಿಸದಿದ್ದಲ್ಲಿ ತಾಲೂಕು ಕಚೇರಿ ಮುಂದೆಯೇ ಆಮರಣಾಂತ ಉಪವಾಸ ಮಾಡಲಾಗುವುದು ಎಂದು ಎಚ್ಚರಿಸಿದರು. ಪಟ್ಟಣ ಪಂಚಾಯಿತಿ ಸದಸ್ಯ ಯಜಮಾನ್ ಮಹೇಶ್ ಮಾತನಾಡಿ ಇಲ್ಲಿನ ನಾಗರೀಕರು ತಮಗೆ ಅಗತ್ಯವಿರುವ ರಸ್ತೆ, ಚರಂಡಿಯನ್ನು ನಿರ್ಮಿಸಿಕೊಡುವಂತೆ ಕೇಳುತ್ತಿರುವುದು ಸರಿಯಾಗಿಯೇ ಇದೆ. ಆದರೆ ಪಂಚಾಯಿತಿಯ ಅಧಿಕಾರಿಗಳು ನಾಗರಿಕ ಸೌಲಭ್ಯ ಒದಗಿಸಲು ವಿಫಲರಾಗಿರುವುದು ದುರಂತವೇ ಸರಿ ಎಂದರು. ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಮಲ್ಲೂರು ತಿಮ್ಮೇಶ್, ಗುರುದತ್, ರಾಮು, ಗೋವಿಂದರಾಜು, ಪಟ್ಣಣ ಪಂಚಾಯಿತಿಯ ಮಾಜಿ ಸದಸ್ಯ ನವೀನ್ ಬಾಬು, ಅಫ್ಜಲ್, ದಯಾನಂದ್, ಮುತ್ತುರಾಯ ನಗರದ ವಾಸಿಗಳಾದ ಹನುಮಂತೇಗೌಡ, ರಾಜು, ನಾಗರಾಜು, ನವಾಬ್, ಇವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣ ಪಂಚಾಯಿತಿಯ ಸದಸ್ಯ ಎನ್.ಆರ್.ಸುರೇಶ್, ಚಿದಾನಂದ್ ಮತ್ತು ಮುಖ್ಯಾಧಿಕಾರಿ ಶ್ರೀನಾಥ್ ಬಾಬು ರವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಿವೇಶನಗಳ ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ನಡೆಯುತ್ತಿದೆ. ರಸ್ತೆ ಮಧ್ಯದಲ್ಲಿ ಕಾನ್ವೆಂಟ್ ಗೆ ಅಳವಡಿಸಿರುವ ಗೇಟ್ ನ್ನು ಕಾನೂನು ರೀತ್ಯ ತೆರವುಗೊಳಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.