ಸಾರಾಂಶ
ಹಾವೇರಿ:ತಾಲೂಕಿನ ಕರ್ಜಗಿ ಗ್ರಾಮದ ರೈಲು ನಿಲ್ದಾಣ ಸಮೀಪದ ಶ್ರೀ ಹರಿವಿಠ್ಠಲಾಶ್ರಮದ ಶ್ರೀಗುರು ರಾಘವೇಂದ್ರಸ್ವಾಮಿಗಳ ವೃಂದಾವನ ಸನ್ನಿಧಿಯ ಮಠದಲ್ಲಿ ಕಳೆದ ೩ ದಿನಗಳಿಂದ ಜರುಗಿದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಗುರುವಾರ ಸಂಪನ್ನಗೊಂಡಿತು. ಈ ವೇಳೆ ಶ್ರೀ ಜೋಶಿ ಗುರುಗಳ ವಂಶಜರಾದ ಗೋಪಾಲಕೃಷ್ಣ ಅವರು ಮಾತನಾಡಿ, ದ್ವೈತಸಿದ್ಧಾಂತ ಪ್ರತಿಪಾದಕರಾದ ಶ್ರೀ ಮಧ್ವಾಚಾರ್ಯರ ಘನಗುರು ಪರಂಪರೆಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಭಕ್ತರ ಭಕ್ತಿಗೆ ಒಲಿದು ಕೃಪೆ ಮಾಡಿದ ಕ್ಷೇತ್ರಗಳಲ್ಲಿ ಮಠಗಳ ಸ್ಥಾಪನೆಯಾಗಿವೆ. ಸುಮಾರು ನೂರು ವರ್ಷಗಳ ಕೆಳಗೆ ರಾಯರ ಪರಮ ಆರಾಧಕರಾಗಿದ್ದ ಜೋಶಿ ಗುರುಗಳು ಮಂತ್ರಾಲಯದಿಂದ ಮೃತ್ತಿಕೆಯನ್ನು ತಂದು ನಿರ್ಮಿಸಿದ ವೃಂದಾವನದಲ್ಲಿ ಗುರುರಾಯರ ಸನ್ನಿಧಿಯ ಮಠಸ್ಥಾಪನೆ ಮಾಡಿದರು. ರಾಯರ ಕೃಪಾಕಾರುಣ್ಯದ ನೆಲೆಯಲ್ಲಿ ಭಕ್ತರಾದ ದಿ. ಶ್ರೀನಿವಾಸಾಚಾರ್ಯ ಬೆಳಗಾವಿ ಹಾಗೂ ದಿ. ಜಲಜಾಕ್ಷಮ್ಮ ಅವರು ಮಠ ನಿರ್ಮಾಣ ಕೈಂಕರ್ಯಕ್ಕೆ ಸಕಲ ಸೇವೆಗಳನ್ನೂ ಒದಗಿಸಿದರು. ಜೋಶಿ ಗುರುಗಳು ತಮ್ಮ ಅನುಷ್ಠಾನ ಬಲದಿಂದ ರಾಯರ ಸನ್ನಿಧಾನ ಬಯಸಿ ಬಂದವರಿಗೆ ಸಾಧನೆಯ ಮಾರ್ಗ ತೋರಿ ಬೆಳಕು ನೀಡಿ ಉದ್ಧರಿಸಿದ್ದಾರೆ ಎಂದು ಅವರು ಸ್ಮರಿಸಿದರು. ಹೋಮ-ವಿಶೇಷ ಪೂಜೆ: ಮಂಗಳವಾರ ನಡೆದ ಪೂರ್ವಾರಾಧನೆಯ ದಿನ ವಿಘ್ನೇಶ್ವರ ಪೂಜೆ, ಗಂಗಾಕಲಶ ಪೂಜೆ, ಗಣಹೋಮ, ಭಜನೆ ನಡೆಯಿತು. ಬುಧವಾರ ಜರುಗಿದ ಮಧ್ಯಾರಾಧನೆಯ ದಿನ ದುರ್ಗಾ ಹೋಮ, ರಥೋತ್ಸವ, ಅಷ್ಟಾವಧಾನ ಸಹಿತ ಶಯನೋತ್ಸವ ನಡೆಯಿತು. ಗುರುವಾರ ಹಮ್ಮಿಕೊಂಡ ಉತ್ತರ ಆರಾಧನೆಯ ದಿನ ಶ್ರೀ ಸೂಕ್ತ ಹೋಮ, ಪವಮಾನಹೋಮ, ದುರ್ಗಾಪೂಜೆ ನಡೆದವು.ನಿತ್ಯವೂ ಪ್ರಾತಃಕಾಲದಲ್ಲಿ ರಾಯರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಪುರುಷಸೂಕ್ತ, ಅಷ್ಟೋತ್ತರ, ಪುಷ್ಪಾಲಂಕಾರ ಮಹಾಪೂಜೆಗಳು ಜರುಗಿದವು.ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮುಂಡಗೋಡ, ಗದಗ, ಹಾವೇರಿ, ಬೆಂಗಳೂರು ಮುಂತಾದ ಕಡೆಗಳಿಂದ ಆಗಮಿಸಿದ್ದ ಭಕ್ತರು ಗುರುರಾಯರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು. ಮೂರು ದಿನಗಳ ಕಾಲ ಅನ್ನಸಂತರ್ಪಣೆ ಜರುಗಿತು. ಸುಚೇತಾ ಸೊರಟೂರ ಹಾಗೂ ವಸುಧಾ ಸಿದ್ದಾಪೂರ ಅವರು ಭರತನಾಟ್ಯ ಪ್ರಸ್ತುತಪಡಿಸಿದರು.ಈ ವೇಳೆ ಗೋಪಾಲಕೃಷ್ಣರಾವ್, ಪದ್ಮರಾಜ್ ಆಚಾರ್ಯ, ವಿಶ್ವನಾಥ್ ಹೆಬ್ಬಾರ್, ಪ್ರಶಾಂತ್ ಚೀಟಿನೀಸ್, ರವೀಂದ್ರರಾವ್, ರಾಮಚಂದ್ರ ಉಚ್ಚಿಲ, ರಮೇಶರಾವ್, ರಾಜೇಶರಾವ್, ಸುಭಾಸ ದೇಶಪಾಂಡೆ ಅಮ್ಮಿನಬಾವಿ ಮತ್ತು ಸಂಘದವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))