ಅರಕಲಗೂಡು ತಾಲೂಕಲ್ಲಿ ಹೆಚ್ಚು ವಲಸೆ ಕಾರ್ಮಿಕರು

| Published : Jan 29 2025, 01:33 AM IST

ಸಾರಾಂಶ

ಅರಕಲಗೂಡು ತಾಲೂಕಿನಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದ್ದು ಇದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕಾರ್ಮಿಕ ಮತ್ತು ಪೊಲೀಸ್ ಇಲಾಖೆ ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಶಾಸಕ ಎ. ಮಂಜು ಸೂಚಿಸಿದರು. ಇವರು ಹೊರರಾಜ್ಯದವರಾಗಿದ್ದು ಎಲ್ಲಿಂದ ಬರುತ್ತಿದ್ದಾರೆ, ಕರೆತರುತ್ತಿರುವವರು ಯಾರು, ಅಗತ್ಯ ದಾಖಲೆಗಳಿವೆಯೆ ಎಂಬ ಕುರಿತು ಸರಿಯಾದ ಮಾಹಿತಿ ಇಲ್ಲ. ಇವರಿಂದಾಗಿ ಸ್ಥಳೀಯ ಕಾರ್ಮಿಕರಿಗೆ ಕೆಲಸ ದೊರೆಯದಂತಾಗಿದೆ. ಅಪರಾಧ ಪ್ರಕರಣಗಳು ವರದಿಯಾಗುತ್ತಿದ್ದು ಸಮಸ್ಯೆ ಗಂಭೀರವಾಗುವ ಮುನ್ನವೆ ಅಧಿಕಾರಿಗಳು ಎಚ್ಚೆತ್ತು ಕ್ರಮ ವಹಿಸುವಂತೆ ಖಡಕ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದ್ದು ಇದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕಾರ್ಮಿಕ ಮತ್ತು ಪೊಲೀಸ್ ಇಲಾಖೆ ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಶಾಸಕ ಎ. ಮಂಜು ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ತಾಲೂಕಿನಲ್ಲಿ 10 ರಿಂದ 15 ಸಾವಿರ ವಲಸೆ ಕಾರ್ಮಿಕರು ಇರುವ ಕುರಿತು ಮಾಹಿತಿ ಇದೆ. ಇವರು ಹೊರರಾಜ್ಯದವರಾಗಿದ್ದು ಎಲ್ಲಿಂದ ಬರುತ್ತಿದ್ದಾರೆ, ಕರೆತರುತ್ತಿರುವವರು ಯಾರು, ಅಗತ್ಯ ದಾಖಲೆಗಳಿವೆಯೆ ಎಂಬ ಕುರಿತು ಸರಿಯಾದ ಮಾಹಿತಿ ಇಲ್ಲ. ಇವರಿಂದಾಗಿ ಸ್ಥಳೀಯ ಕಾರ್ಮಿಕರಿಗೆ ಕೆಲಸ ದೊರೆಯದಂತಾಗಿದೆ. ಅಪರಾಧ ಪ್ರಕರಣಗಳು ವರದಿಯಾಗುತ್ತಿದ್ದು ಸಮಸ್ಯೆ ಗಂಭೀರವಾಗುವ ಮುನ್ನವೆ ಅಧಿಕಾರಿಗಳು ಎಚ್ಚೆತ್ತು ಕ್ರಮ ವಹಿಸುವಂತೆ ಖಡಕ್ ಸೂಚನೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಅವರು ಮಾತನಾಡಿ, ಆರೋಗ್ಯ ಇಲಾಖೆಗೂ ವಲಸೆ ಕಾರ್ಮಿರು ತಲೆನೋವಾಗಿದ್ದಾರೆ. ಮಕ್ಕಳಿಗೆ ಲಸಿಕೆ ಹಾಕಿಸಿಲು ನಿರಾಕರಿಸುತ್ತಾರೆ. ರೋಗಗಳು ಹರಡಿದರೆ ಸ್ಥಳಿಯರೂ ಆರೋಗ್ಯ ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಅಪ್ರಾಪ್ತ ವಯಸ್ಸಿನ ಗರ್ಭಿಣಿ ಹೆಣ್ಣುಮಕ್ಕಳ ಬಗ್ಗೆ ಪ್ರಶ್ನಿಸಿದರೆ ನಿಖರ ಮಾಹಿತಿ ದೊರೆಯುತ್ತಿಲ್ಲ. ದೂರು ನೀಡಿ ವಿಚಾರಿಸಲು ಹೋದರೆ ನಾಪತ್ತೆ ಯಾಗಿರುತ್ತಾರೆ. ಹೀಗೆ ಹಲವು ಸಮಸ್ಯೆಗಳಿಗೆ ಕಾರಣರಾಗುತ್ತಿದ್ದಾರೆ ಎಂದರು.

ಪಿಎಸ್‌ಐ ಸಿ.ಆರ್.ಕಾವ್ಯ ಅವರು ಮಾತನಾಡಿ, ಈ ಕುರಿತು ಕ್ರಮಕ್ಕೆ ಇಲಾಖೆ ಮುಂದಾಗಿದೆ. ವಲಸೆ ಕಾರ್ಮಿಕರನ್ನು ಕರೆತರುವ ಉದ್ಯಮಿಗಳು, ಜಮೀನಿನ ಮಾಲೀಕರು ಅಗತ್ಯ ಮಾಹಿತಿಯನ್ನು ಪೊಲೀಸ್ ಠಾಣೆಗೆ ಒದಗಿಸಬೇಕು, ಮನೆ ಬಾಡಿಗೆ ನೀಡುವವರು ಅಗತ್ಯ ದಾಖಲೆಗಳನ್ನು ಪಡೆದು ನೀಡುವಂತೆ ತಿಳಿಸಿದ್ದು, ಅಹಿತಕರ ಘಟನೆಗಳು ನಡೆದಾಗ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದರು.

ತಾಲೂಕಿನಲ್ಲಿ ತೋಟಗಾರಿಕೆ ಕೃಷಿಕರು ಹನಿನೀರಾವರಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಕಸಬಾ, ದೊಡ್ಡಮಗ್ಗೆ ಹೋಬಳಿಗಳಲ್ಲಿ ಕುಡಿ ನಾಟಿ ಮಾಡಿ ಆಲೂಗೆಡ್ಡೆ ಬೆಳೆಯುವ ಬಗ್ಗೆ ರೈತರು ಆಸಕ್ತಿ ತೋರುತ್ತಿದ್ದಾರೆ. 12 ಲಕ್ಷ ರು. ವೆಚ್ಚದ ಹೈಬ್ರೀಡ್ ತರಕಾರಿ ಬಿತ್ತನೆ ಬೀಜಗಳ ಕಿಟ್‌ಗಳು ಬಂದಿದ್ದು ವಿತರಣೆಗೆ ಸಿದ್ಧತೆ ನಡೆದಿದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಿ. ರಾಜೇಶ್ ತಿಳಿಸಿದರು. ನಾಟಿ ತಳಿ ತರಕಾರಿಗಳ ಬೆಳೆಸಲು ರೈತರಲ್ಲಿ ಅರಿವು ಮೂಡಿಸುವಂತೆ ಶಾಸಕರು ಸೂಚಿಸಿದರು.

ಸಾಮಾಜಿಕ ಇಲಾಖೆ ಪ್ರಗತಿ ತೋರಿಸಲು ಕಂಡ ಕಂಡಲ್ಲಿ ಗಿಡಗಳನ್ನು ನೆಡುವುದನ್ನು ಕೈಬಿಟ್ಟು ನಿಮ್ಮ ವ್ಯಾಪ್ತಿಯ ಜಮೀನಿನಲ್ಲಿ ಮಾತ್ರ ಗಿಡ ನೆಡಬೇಕು. ಅನುಮತಿ ಇಲ್ಲದೆ ಕಂದಾಯ ಇಲಾಖೆ, ಗೋಮಾಳ ಗಳಲ್ಲಿ ಗಿಡಗಳನ್ನು ನೆಡುತ್ತಿದ್ದು ಇದು ಭೂವ್ಯಾಜ್ಯಗಳಿಗೂ ಕಾರಣವಾಗುತ್ತಿದೆ. ಈ ಕುರಿತು ಕಂದಾಯ ಇಲಾಖೆಯೂ ಗಮನ ಹರಿಸಬೇಕು, ರಸ್ತೆ ಬದಿ ನಿಗದಿತ ಜಾಗ ಬಿಟ್ಟು ಗಿಡ ನೆಡುವಂತೆ ಸಾಮಾಜಿಕ ಅರಣ್ಯಾಧಿಕಾರಿ ವಿಜಯಕುಮಾರ್ ಅವರಿಗೆ ಸೂಚಿಸಿದರು.

ಅರಕಲಗೂಡು ಎಪಿಎಂಸಿ ಮತ್ತು ರಾಮನಾಥಪುರದಲ್ಲಿ ರಾಗಿ ಮತ್ತು ಭತ್ತದ ಖರೀದಿ ಕೇಂದ್ರ ತೆರೆಯಲಾಗಿದೆ. ರಾಗಿ 49530 ಕ್ವಿಂಟಾಲ್ ಮಾರಾಟಕ್ಕೆ 3390 ಮಂದಿ ಹಾಗೂ ಭತ್ತ 85 ಮಂದಿ 2613 ಕ್ವಿಂಟಲ್ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ. ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು ಮುಗಿದ ಬಳಿಕ ಖರೀದಿ ಆರಂಭಗೊಳ್ಳಲಿದೆ ಎಂದು ಆಹಾರ ಇಲಾಖೆ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಗಳಿಗೆ ಮೀಸಲಾದ ಅನುದಾನವನ್ನು ಹಲವು ಇಲಾಖೆಗಳು ಸಮರ್ಕವಾಗಿ ಬಳಸುತ್ತಿಲ್ಲ. ಪ್ರತಿ ತಿಂಗಳು ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿಕುಮಾರ್‌ಗೆ ಸೂಚಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಕಳೆದ ಬಾರಿ ತಾಲೂಕು ಕೊನೆಯ ಸ್ಥಾನದಲ್ಲಿತ್ತು. ಫಲಿತಾಂಶ ಹೆಚ್ಚಳಕ್ಕೆ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ಬಿಇಒ ಕೆ.ಪಿ. ನಾರಾಯಣ್ ಮಾಹಿತಿ ನೀಡಿದರು. ಪಟ್ಟಣದಲ್ಲಿ ಕಾಮಗಾರಿ ಸ್ಥಗಿತಗೊಂಡಿರುವ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಗಮನ ಹರಿಸುವಂತೆ ಸೂಚಿಸಲಾಯಿತು. 52 ಇಲಾಖೆಗಳಲ್ಲಿ 19 ಇಲಾಖೆಗಳು ಮಾತ್ರ ಪ್ರಗತಿ ವರದಿ ನೀಡಿದ್ದು, 33 ಇಲಾಖೆಗಳು ವರದಿ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಒಂದು ವಾರದಲ್ಲಿ ವರದಿ ನೀಡದಿದ್ದರೆ ಕ್ರಮಕ್ಕೆ ಸೂಚಿಸಿದರು.

ಗ್ಯಾರಂಟಿ ಅನುಷ್ಠಾನ ಯೋಜನೆಗಳ ಅಧ್ಯಕ್ಷ ಶ್ರೀಧರ್ ಗೌಡ ಮಾತನಾಡಿ, ಮೂರು ಡ್ಯಾಂಗಳ ಸಂಪರ್ಕ ಹೊಂದಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಉನ್ನತ ಶಿಕ್ಷಣಕ್ಕೆ ಹೊರ ಊರುಗಳಿಗೆ ಇಲ್ಲಿನ ವಿದ್ಯಾರ್ಥಿಗಳು ತೆರಳಬೇಕಿದೆ. ಕೈಗಾರಿಕೆ, ಉದ್ದಿಮೆಗಳು ಬೆಳೆಯದೆ ಯುವಕರು ನಿರುದ್ಯೋಗಿಗಳಾಗಿದ್ದಾರೆ. ತಾಲೂಕಿನ ಅಭಿವೃದ್ಧಿಗೆ ಶಾಸಕರು ಗಮನ ಹರಿಸಬೇಕು, ಇದಕ್ಕೆ ತಾವೂ ಸಹ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು. ಸದಸ್ಯ ಈರೇಶ್ ಹಿರೇಹಳ್ಳಿ ಅಂಬೇಡ್ಕರ್‌ ಪುತ್ಥಳಿಯ ಮೇಲ್ಛಾವಣಿ ಕಾಮಗಾರಿ ಹಾಗೂ ಅರ್ಧಕ್ಕೆ ನಿಂತಿರುವ ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಳಿಸಿಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಜಿಪಂ ಉಪಕಾರ್ಯದರ್ಶಿ ಎಂ.ಸಿ.ಚಂದ್ರಶೇಖರ್, ತಾಪಂ ಇಒ ಪ್ರಕಾಶ್, ಕೆಡಿಪಿ ಸದಸ್ಯರಾದ ಲೋಕೇಶ್, ಡಿ.ಎಂ.ರಮ್ಯ, ಸಿ.ಆರ್.ಪುನೀತ್, ಮಹಮದ್ ಜಾನ್, ಎಸ್‌. ಆರ್. ಸುರೇಶ್ ಭಾಗವಹಿಸಿದ್ದರು.