ಸಾರಾಂಶ
ಅರಸೀಕೆರೆ ನಗರಸಭೆಯ ೨೩ನೇ ವಾರ್ಡ್‌ನ ಮುಜಾವರ್ ಮೊಹಲ್ಲಾದಲ್ಲಿ ಸೇವಾ ನಿರತ ಮಹಿಳಾ ಪೌರಕಾರ್ಮಿಕರ ಮೇಲೆ ಇದೇ ವಾರ್ಡಿನ ನಿವಾಸಿಗಳಾದ ಮುಜಾವರ್ ಮತ್ತು ಅವರ ತಾಯಿ ಹಲ್ಲೆ ಮಾಡಿರುವುದನ್ನು ಖಂಡಿಸಿ ಪೌರಕಾರ್ಮಿಕರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಹಲ್ಲೆ ಮಾಡಿದವರ ಮೇಲೆ ಕೇಸು ಹಾಕಲಾಗಿದ್ದು, ಈಗ ಅವರನ್ನ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಯಾವ ರೀತಿ ಬೇಲ್ ಸಿಗಬಾರದು ಎಂದು ಒತ್ತಾಯ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ
ಅರಸೀಕೆರೆ ನಗರಸಭೆಯ ೨೩ನೇ ವಾರ್ಡ್‌ನ ಮುಜಾವರ್ ಮೊಹಲ್ಲಾದಲ್ಲಿ ಸೇವಾ ನಿರತ ಮಹಿಳಾ ಪೌರಕಾರ್ಮಿಕರ ಮೇಲೆ ಇದೇ ವಾರ್ಡಿನ ನಿವಾಸಿಗಳಾದ ಮುಜಾವರ್ ಮತ್ತು ಅವರ ತಾಯಿ ಹಲ್ಲೆ ಮಾಡಿರುವುದನ್ನು ಖಂಡಿಸಿ ಪೌರಕಾರ್ಮಿಕರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಇದೇ ವೇಳೆ ಪೌರಕಾರ್ಮಿಕರಾದ ಮಂಗಳಾ ಪ್ರಕಾಶ್ ಮಾತನಾಡಿ, ಮುಜಾವರ್ ಮೊಹಲ್ಲಾದಲ್ಲಿ ಸೇವಾ ನಿರತ ಮಹಿಳಾ ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿರುವುದು ಘೋರ ಅಪರಾಧವಾಗಿದ್ದು, ಈ ಮಹಿಳಾ ಪೌರಕಾರ್ಮಿಕರನ್ನು ಗೊತ್ತಿದ್ದೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೂ, ಅಲ್ಲದೆ ಮನೆಯಿಂದ ದೊಣ್ಣೆಯನ್ನು ತಂದು ಹಿಂದು, ಮುಂದು ನೋಡದೆ ಹಲ್ಲೆ ಮಾಡಿದ್ದು, ೫ ಜನ ಪೌರ ಕಾರ್ಮಿಕರುಗಳಿದ್ದು, ಗಾಯಗಳಾಗುವವರೆಗೆ ಹಲ್ಲೆ ಮಾಡಿರುತ್ತಾರೆ ಎಂದು ದೂರಿದರು.
ಈ ೫ ಜನ ಮಹಿಳಾ ಪೌರಕಾರ್ಮಿಕರನ್ನು ಪೌರಾಯುಕ್ತರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಿರುತ್ತಾರೆ. ಈ ಘೋರ ಘಟನೆಯನ್ನು ಕರ್ನಾಟಕ ರಾಜ್ಯ ಪೌರ ನೌಕರರುಗಳ ಸಂಘಟನೆಯು ಉಗ್ರವಾಗಿ ಖಂಡಿಸುತ್ತದೆ. ಈ ಕೂಡಲೇ ಇವರುಗಳ ಮೇಲೆ ಎಫ್.ಐ.ಆರ್. ದಾಖಲಿಸಿ ಗಡಿಪಾರು ಮಾಡುವುದರ ಮೂಲಕ ಇನ್ನು ಮುಂದೆ ರಾಜ್ಯ ಪೌರ ಕಾರ್ಮಿಕರಿಗೆ ಮತ್ತು ಇತರೆ ಪೌರ ನೌಕರರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು. ಇದೇ ವೇಳೆ ದಲಿತ ಮುಖಂಡರಾದ ಶಂಕರ್ ರಾಜು ಮಾತನಾಡಿ, ಕಾರ್ಯನಿರತ ಪೌರಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ ಚರಂಡಿ ಸ್ವಚ್ಛತೆ ಮಾಡಿ ರಸ್ತೆ ಮೇಲೆ ಹಾಕಿದ ವೇಳೆ ಐದು ಜನ ಮಹಿಳೆಯರ ಮೇಲೆ ತಾಯಿ ಮತ್ತು ಮಗ ಬಂದು ಹಲ್ಲೆ ಮಾಡಿದ ಘಟನೆ ಅರಸೀಕೆರೆ ನಗರಸಭೆಯಲ್ಲಿ ನಡೆದಿದೆ. ರಸ್ತೆ ಮೇಲೆ ಕಸ ಹಾಕಿದ್ದೀರಾ ಎಂದು ಪ್ರಶ್ನೆ ಮಾಡಿ ಹಲ್ಲೆ ಆಗಿದೆ. ಇನ್ನು ಆರೋಗ್ಯ ಅಧಿಕಾರಿಗಳ ಮೇಲು ನಿಂದಿಸಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಕೇಸು ಹಾಕಲಾಗಿದ್ದು, ಈಗ ಅವರನ್ನ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಯಾವ ರೀತಿ ಬೇಲ್ ಸಿಗಬಾರದು ಎಂದು ಒತ್ತಾಯ ಮಾಡಲಾಯಿತು. ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ. ಯೋಗೇಶ್, ಜಿಲ್ಲಾ ಉಪಾಧ್ಯಕ್ಷ ದುರ್ಗ ಪ್ರಸಾದ್, ಶಾಖಾ ಉಪಾಧ್ಯಕ್ಷ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ಖಜಾಂಚಿ ಜ್ಯೋತಿ, ಸಂಘಟನಾ ಕಾರ್ಯದರ್ಶಿ ಮನು, ಕ್ರೀಡಾ ಮತ್ತು ಸಂಸ್ಕೃತಿಕ ವೇದಿಕೆ ಚೇತನ್ ಕುಮಾರ್ ಹಾಗೂ ದಲಿತ ಮುಖಂಡರಾದ ನಾಗರಾಜು ಹೆತ್ತೂರ್, ಬ್ಯಾಕರವಳ್ಳಿ ವೆಂಕಟೇಶ್, ಎಂ. ಲಿಂಗರಾಜು, ಆರ್. ಜಯರಾಂ, ಅಣ್ಣಪ್ಪ, ಎ. ವೆಂಕಟೇಶ್, ಇತರರು ಉಪಸ್ಥಿತರಿದ್ದರು.