ಉದ್ಘಾಟನೆ ಕಾಣದ ಅರಸೀಕೆರೆಯ ಉಪ ಕಾರಾಗೃಹ

| Published : Sep 13 2025, 02:04 AM IST

ಸಾರಾಂಶ

ಅರಸೀಕೆರೆ ನಗರದ ಹೊರವಲಯದಲ್ಲಿ 9 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ನೂತನ ಉಪ ಕಾರಾಗೃಹ ಕಟ್ಟಡ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳಾದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ. ಸಾರ್ವಜನಿಕ ಹಣ ಬಳಸಿಕೊಂಡು ನಿರ್ಮಿತವಾದ ಈ ಮೂಲಸೌಕರ್ಯ ಹೊಂದಿದ ಸಿದ್ಧ ಕಟ್ಟಡ ಇದುವರೆಗೆ ಕಾರ್ಯೋನ್ಮುಖವಾಗದಿರುವುದು ಜನತೆಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಅರಸೀಕೆರೆ: ನಗರದ ಹೊರವಲಯದಲ್ಲಿ 9 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ನೂತನ ಉಪ ಕಾರಾಗೃಹ ಕಟ್ಟಡ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳಾದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ. ಸಾರ್ವಜನಿಕ ಹಣ ಬಳಸಿಕೊಂಡು ನಿರ್ಮಿತವಾದ ಈ ಮೂಲಸೌಕರ್ಯ ಹೊಂದಿದ ಸಿದ್ಧ ಕಟ್ಟಡ ಇದುವರೆಗೆ ಕಾರ್ಯೋನ್ಮುಖವಾಗದಿರುವುದು ಜನತೆಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ಹಳೆಯ ಕಾರಾಗೃಹದ ಸಮಸ್ಯೆಗಳು: ಪ್ರಸ್ತುತ ಉಪ ಕಾರಾಗೃಹವು ಅರಸೀಕೆರೆಯ ಹಳೆಯ ತಾಲೂಕು ಕಚೇರಿ ಆವರಣದಲ್ಲಿ ಇದೆ. ಆದರೆ ಇಲ್ಲಿ ಯಾವುದೇ ಮೂಲಸೌಲಭ್ಯಗಳಿಲ್ಲ. ಸರಿಯಾದ ಗಾಳಿ, ಬೆಳಕು ಇಲ್ಲದ ಈ ಕಟ್ಟಡದಲ್ಲಿ ವಿಚಾರಣಾ ಕೈದಿಗಳ ಸ್ಥಿತಿ ಹೇಳತೀರದಾಗಿದೆ. ಒಂದೇ ಕೊಠಡಿಯಲ್ಲಿ 25ಕ್ಕೂ ಹೆಚ್ಚು ಕೈದಿಗಳನ್ನು ಇರಿಸಲಾಗುತ್ತಿದ್ದು, ಅತಿಭಾರ ಸಮಸ್ಯೆ ಎದುರಿಸುತ್ತಿದೆ. ಹೊಸ ಯೋಜನೆಯ ಹಿನ್ನೆಲೆ:ಹಳೇ ಕಾರಾಗೃಹದ ಸಮಸ್ಯೆಗಳಿಗೆ ಪರಿಹಾರವಾಗಿ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ನಿರಂತರ ಹೋರಾಟದ ಫಲವಾಗಿ, ರಾಜ್ಯ ಸರ್ಕಾರ 2021ರ ಡಿಸೆಂಬರ್‌ನಲ್ಲಿ ಹೊಸ ಉಪ ಕಾರಾಗೃಹ ನಿರ್ಮಾಣಕ್ಕೆ ಅನುಮೋದನೆ ನೀಡಿತು. ಹಾಸನ ರಸ್ತೆಯ ಗೀಜಿಹಳ್ಳಿ ಮತ್ತು ಬೋರನಕೊಪ್ಪಲು ನಡುವಿನ ಸುಮಾರು 1 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಾಣ ಆರಂಭಗೊಂಡಿತು.ಆರಂಭದಲ್ಲಿ ₹1 ಕೋಟಿ ಬಿಡುಗಡೆಗೊಂಡು ಹಂತ ಹಂತವಾಗಿ ₹9 ಕೋಟಿ ರುಪಾಯಿಗಳಷ್ಟು ವೆಚ್ಚವಾಗಿ ನಿರ್ಮಾಣ ಪೂರ್ಣವಾಯಿತು. ಸುಮಾರು ಒಂದೂವರೆ ವರ್ಷದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡಿತು. ಈ ಹೊಸ ಕಾರಾಗೃಹದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳು ಒದಗಿಸಲಾಗಿದೆ. 50 ಕೈದಿಗಳ ಸಾಮರ್ಥ್ಯದ ಎರಡು ಸೆಲ್‌ಗಳು, ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ, ತೋಟಗಾರಿಕೆ ಪ್ರದೇಶ, ನೀರಿನ ಸರಬರಾಜು ವ್ಯವಸ್ಥೆ, ಶೌಚಾಲಯಗಳು, ಜನರೇಟರ್‌ ವ್ಯವಸ್ಥೆ, ಭದ್ರತೆಗೆ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ಸುರಕ್ಷತೆಯ ದೃಷ್ಟಿಯಿಂದ ಎತ್ತರದ ಭಿತ್ತಿಗಳನ್ನು ನಿರ್ಮಿಸಲಾಗಿದೆ.ಈ ನೂತನ ಕಾರಾಗೃಹ ಇನ್ನೂ ಕಾರ್ಯಾರಂಭವಾಗದಿರುವುದರಿಂದ ಅನೇಕ ಪ್ರಶ್ನೆಗಳು ಎದ್ದಿವೆ, ಈ ಕಟ್ಟಡ ಮುಂದಿನ ದಿನಗಳಲ್ಲಿ ಪಾಳು ಬಿದ್ದು ಅನೈತಿಕ ಚಟುವಟಿಕೆಗಳಿಗೆ ನೆಲೆ ಆಗುವ ಸಾಧ್ಯತೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕವಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಪರಾಧ ಪ್ರಮಾಣ ಹೆಚ್ಚಾಗುತ್ತಿರುವಾಗ, ವಿಚಾರಣಾ ಕೈದಿಗಳನ್ನು ಹಾಸನಕ್ಕೆ ಸಾಗಿಸಬೇಕಾದ ಪರಿಸ್ಥಿತಿಯು ಕುಟುಂಬಗಳಿಗೂ ಭಾರೀ ಹಣಕಾಸಿನ ಸಂಕಷ್ಟ ಉಂಟುಮಾಡುತ್ತಿದೆ. ಸರಾಸರಿ ವರ್ಷಕ್ಕೆ 100ಕ್ಕೂ ಹೆಚ್ಚು ವಿಚಾರಣಾ ಕೈದಿಗಳು ಇರುವ ಹಿನ್ನೆಲೆಯಲ್ಲಿ, ಸ್ಥಳೀಯ ಬಂದೀಖಾನೆ ಆರಂಭಗೊಳ್ಳುವುದು ತೀವ್ರ ಅಗತ್ಯವಾಗಿದೆ.

* ಹೇಳಿಕೆ1

ಬಂದೀಖಾನೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳು ಈಗಾಗಲೇ ಪೂರ್ಣಗೊಂಡಿವೆ. ಭದ್ರತಾ ಗೋಡೆಗಳು, ಕೈದಿಗಳ ನಿವಾಸ ವಿಭಾಗಗಳು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ತೋಟಗಾರಿಕೆ, ವಿದ್ಯುತ್ ಹಾಗೂ ಜನರೇಟರ್ ವ್ಯವಸ್ಥೆ, ಭದ್ರತೆಗೆ ಸಿಸಿಟಿವಿ ಕ್ಯಾಮರಾ ಮುಂತಾದ ಎಲ್ಲ ಸೌಕರ್ಯಗಳನ್ನು ಕಟ್ಟಡ ಹೊಂದಿದೆ. ಕೇವಲ ಸಿಬ್ಬಂದಿ ನಿಯೋಜನೆಯ ಕಾರ್ಯ ಬಾಕಿ ಉಳಿದಿದೆ. ಈ ಸಂಬಂಧವಾಗಿ ನಾವು ಕಾರಾಗೃಹ ಇಲಾಖೆಯ ಸಚಿವರೊಂದಿಗೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇವೆ. ಇಲಾಖೆಯ ಉನ್ನತಾಧಿಕಾರಿಗಳು ಈ ಬಗ್ಗೆ ಸ್ಪಂದಿಸಿದ್ದು, ಶೀಘ್ರದಲ್ಲೇ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ, ನೂತನ ಉಪ ಕಾರಾಗೃಹವನ್ನು ಸಾರ್ವಜನಿಕ ಸೇವೆಗೆ ಲಭ್ಯವನ್ನಾಗಿ ಮಾಡಲಾಗುವುದು.

- ಕೆ. ಎಂ.ಶಿವಲಿಂಗೇಗೌಡ, ಶಾಸಕ

* ಹೇಳಿಕೆ-2ಅರಸೀಕೆರೆಯಲ್ಲಿ ವಿಚಾರಣಾಧೀನ ಕೈದಿಗಳ ಕುಟುಂಬಗಳು ಹಾಸನದ ಬಂದೀಖಾನೆಯವರೆಗೂ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಿಸುತ್ತಿವೆ. ಈ ದೂರದ ಪ್ರಯಾಣವು ಮುಂಗಡ ವೆಚ್ಚ, ವಾಹನ ವ್ಯವಸ್ಥೆ ಮತ್ತು ಸಮಯ ವ್ಯಯಕ್ಕೆ ಕಾರಣವಾಗಿದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಇದು ದೊಡ್ಡ ಹೊರೆ ಆಗಿದೆ.ಈ ಹಿನ್ನೆಲೆಯಲ್ಲಿ, ನೂತನ ಉಪ ಕಾರಾಗೃಹವನ್ನು ಶೀಘ್ರ ಆರಂಭಿಸಬೇಕು.

- ಮನೋಜ್‌, ಬಿಜೆಪಿ ಮುಖಂಡ * ಹೇಳೀಕೆ3ಅರಸೀಕೆರೆ ಉಪ ಕಾರಾಗೃಹ ಆರಂಭವು ತೀವ್ರ ಅಗತ್ಯವಾಗಿದೆ, ಏಕೆಂದರೆ ತಾಲೂಕಿನ ಬಾಣಾವರ, ಗಂಡಸಿ, ಜಾವಗಲ್ ಮತ್ತು ಕಣಕಟ್ಟೆ ಹೋಬಳಿಗಳ ಪೊಲೀಸ್ ಠಾಣೆಗಳಿಂದ ವರ್ಷಕ್ಕೆ ಹಲವು ವಿಚಾರಣಾ ಕೈದಿಗಳು ಎದುರಾಗುತ್ತಿದ್ದಾರೆ. ಈ ಕೈದಿಗಳನ್ನು ಹಾಸನಕ್ಕೆ ಕಳಿಸುವುದು, ಹಣದ ಹಾಗೂ ಶ್ರಮದ ನಷ್ಟವನ್ನುಂಟುಮಾಡುತ್ತಿದೆ. ಈಗಾಗಲೇ ನಿರ್ಮಾಣಗೊಂಡು ಖಾಲಿ ನಿಂತಿರುವ ನೂತನ ಕಾರಾಗೃಹ ಆರಂಭವಾದರೆ, ಸ್ಥಳೀಯ ತನಿಖಾ ಪ್ರಕ್ರಿಯೆ ಸುಗಮವಾಗುತ್ತದೆ ಹಾಗೂ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ.

- ಹರ್ಷ, ಮಾಜಿ ನಗರಸಭಾ ಸದಸ್ಯ