ನೊಂದವರ ನೋವಿನ ಧ್ವನಿಯಾಗಿದ್ದ ಅರಸು

| Published : Aug 21 2024, 12:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನೊಂದವರ ನೋವಿಗೆ ಧ್ವನಿಯಾಗಿ ಸರ್ಕಾರದ ಯೋಜನೆಗಳನ್ನು ಎಲ್ಲಾ ವರ್ಗದವರಿಗೂ ತಲುಪಿಸಿ ನಾಡಿನ ಶ್ರೇಯೋಭಿವೃದ್ಧಿಗೆ ಮಾದರಿಯಾದವರು ಡಿ.ದೇವರಾಜ ಅರಸು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನೊಂದವರ ನೋವಿಗೆ ಧ್ವನಿಯಾಗಿ ಸರ್ಕಾರದ ಯೋಜನೆಗಳನ್ನು ಎಲ್ಲಾ ವರ್ಗದವರಿಗೂ ತಲುಪಿಸಿ ನಾಡಿನ ಶ್ರೇಯೋಭಿವೃದ್ಧಿಗೆ ಮಾದರಿಯಾದವರು ಡಿ.ದೇವರಾಜ ಅರಸು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಸಾಮಾಜಿಕ ಪರಿವರ್ತನೆಯ ಹರಿಕಾರ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ದಿ.ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತ್ಯಾಗ, ಪ್ರೀತಿ ಜೀವನದ ಉಸಿರಾಗಿಸಿಕೊಂಡು ನೊಂದವರ, ಅಶಿಕ್ಷಿತರ, ನಿರ್ಲಕ್ಷಿತ ಸಮುದಾಯಗಳ ಪರ ಇಡೀ ಜೀವನವನ್ನು ಮೀಸಲಿಟ್ಟು, ಭೂಸುಧಾರಣೆಯ ಕಾಯ್ದೆಯಂತಹ ಮಹತ್ವದ ಯೋಜನೆ ರೂಪಿಸಿದವರು ಅರಸು ಎಂದರು.

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಮಾತನಾಡಿ, ಉಳುವವನೆ ಭೂ ಒಡೆಯ ಎಂಬ ಕಾನೂನಿನ ಮೂಲಕ ಜೀತ ಪದ್ದತಿ ಹೋಗಲಾಡಿಸಿ ಎಲ್ಲಾ ವರ್ಗಗಳಲ್ಲೂ ಸಮಾನತೆಯ ಆಶಯವನ್ನು ಬಿತ್ತಿದ ಅರಸು ಅವರು, ಹಳ್ಳಿಯ ವಿದ್ಯಾರ್ಥಿಗಳು ನಗರಗಳಲ್ಲಿ ಶಿಕ್ಷಣ ಪಡೆಯಲು ಅನುಕೂಲವಾಗಲು ವಸತಿನಿಲಯಗಳ ಸ್ಥಾಪನೆಗೆ ನಾಂದಿ ಹಾಡಿದವರು ಎಂದು ಹೇಳಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಶೋಷಿತರ ಅಭಿವೃದ್ಧಿಗಾಗಿ ಶ್ರಮಿಸಿದ ಅವರು, ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆಡಳಿತ ಸುಧಾರಣೆಗೆ ಶ್ರಮವಹಿಸಿದ ಇಂತಹ ಮಹಾನ್ ವ್ಯಕ್ತಿಯ ಕೊಡುಗೆಗಳನ್ನು ಸ್ಮರಿಸುವ ಮೂಲಕ ಅವರ ತತ್ವಾದರ್ಶ ಅವರ ಕಾರ್ಯಗಳನ್ನು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಉಪನ್ಯಾಸಕ ವಿಷ್ಣು ಸಿಂಧೆ ಉಪನ್ಯಾಸ ನೀಡಿದರು. ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಎಸೆಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.

ರಂಗನಾಥ ಬತ್ತಾಸೆ ಮತ್ತು ಸುನಂದಾ ಬತ್ತಾಸೆ ದಂಪತಿ ಹಾಗೂ ಸಂಗಡಿಗರಿಂದ ಡಿ.ದೇವರಾಜ ಅರಸು ಅವರ ಜೀವನ ಮತ್ತು ಸಾಧನೆಯ ಬಗ್ಗೆ ರೂಪಕವನ್ನು ಪ್ರದರ್ಶಿಸಿದರು.

ಪಾಲಿಕೆಯ ಉಪಮೇಯರ್ ದಿನೇಶ್ ಹಳ್ಳಿ, ಪಾಲಿಕೆ ಸದಸ್ಯರಾದ ಆರತಿ ಶಹಾಪೂರ, ಅಪ್ಪು ಪೂಜಾರಿ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಅಶೋಕ ಘೋಣಸಗಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಆಶಾಪೂರ, ಅರಣ್ಯ ಇಲಾಖೆಯ ಅಧಿಕಾರಿ ವನಿತಾ.ಆರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಸಿದ್ದು ರಾಯಣ್ಣನವರ, ಸೋಮನಗೌಡ ಕಲ್ಲೂರ, ಭೀಮರಾಯ ಜಿಗಜಿಣಗಿ, ಅಡಿವೆಪ್ಪ ಸಾಲಗಲ್, ದೇವೆಂದ್ರ ಮೆರೆಕರ, ವಿರೇಶ ಕುಲಕರ್ಣಿ, ವಿದ್ಯಾವತಿ ಅಂಕಲಗಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೆರವಣಿಗೆ: ನಗರದ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಡಿ.ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು. ಭಾವಚಿತ್ರ ಮೆರವಣಿಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಕನಕದಾಸ ವೃತದ ಮೂಲಕ ಕಂದಗಲ್ ಹನುಮಂತರಾಯ ರಂಗಮಂದಿರ ತಲುಪಿತು.

-------

ಕೋಟ್‌

ಸಂಘರ್ಷಗಳಿಂದ ಕೂಡಿದ ಜೀವನ ನಡೆಸಿದರೂ ಕೂಡ ನಾಡಿನ ಏಳ್ಗೆಗಾಗಿ ಶ್ರಮಿಸಿದ ಅರಸು ಅವರ ಜೀವನ ಚರಿತ್ರೆ, ಸಾಧನೆ, ಯೋಜನೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಪ್ರಚಾರಪಡಿಸಬೇಕು. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅಪ್ರೆಂಟಿಶಿಫ್ ಎಂಬ ಪರಿಕಲ್ಪನೆ ಮೂಲಕ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಮಾಡಿದವರು ಅರಸು.

ಕಾಂತಾ ನಾಯಕ, ಅಧ್ಯಕ್ಷೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ