ಸಾರಾಂಶ
ಧಾರ್ಮಿಕ ಹಿನ್ನೆಲೆಯ ಆರಾಟ ಹೆಸರು ಪುತ್ತೂರು ಮಹಾಲಿಂಗೇಶ್ವರ ದೇವರ ಅಪೂರ್ವ ಅವಭೃತವನ್ನು ನೆನಪಿಸುತ್ತದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಪಿ.ಎನ್.ಆರ್. ಪೊಡಕ್ಷನ್ ಬ್ಯಾನರ್‌ನಲ್ಲಿ ತಯಾರಾದ ಆರಾಟ ಕನ್ನಡ ಚಲನಚಿತ್ರ ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆಕಂಡಿದ್ದು, ಪುತ್ತೂರಿನ ಭಾರತ್ ಸಿನಿಮಾಸ್‌ನಲ್ಲಿ ದೀಪ ಬೆಳಗಿಸಿ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.ಪುತ್ತೂರಿನ ವೈದ್ಯ ಡಾ. ಸುರೇಶ್ ಪುತ್ತೂರಾಯ ದೀಪ ಬೆಳಗಿಸಿ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಧಾರ್ಮಿಕ ಹಿನ್ನೆಲೆಯ ಆರಾಟ ಹೆಸರು ಪುತ್ತೂರು ಮಹಾಲಿಂಗೇಶ್ವರ ದೇವರ ಅಪೂರ್ವ ಅವಭೃತವನ್ನು ನೆನಪಿಸುತ್ತದೆ. ಯೋಗ ದಿನಾಚರಣೆಯ ದಿನವೇ ಚಿತ್ರ ಬಿಡುಗಡೆಯಾಗುತ್ತಿರುವುದು ಸುಯೋಗ. ಲಕ್ಷಾಂತರ ಮಂದಿ ಸಿನಿಮಾವನ್ನು ವೀಕ್ಷಿಸಿ ಬೆಂಬಲಿಸಬೇಕು ಎಂದರು.ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಒಂದು ಚಿತ್ರ ನಿರ್ಮಾಣದ ಹಿಂದೆ ಬಹಳಷ್ಟು ಮಂದಿಯ ಪ್ರಯತ್ನ ಇರುತ್ತದೆ. ಜಿಲ್ಲೆ ಹಾಗೂ ಗಡಿ ಭಾಗಗಳಲ್ಲಿ ಚಿತ್ರೀಕರಣಗೊಂಡ ಜಿಲ್ಲೆಯವರೇ ಇರುವ ಸಿನಿಮಾ ಜನ ಮನ್ನಣೆ ಗಳಿಸುವಂತಾಗಲಿ ಎಂದು ಹೇಳಿದರು. ಉದ್ಯಮಿ ಬೂಡಿಯಾರು ರಾಧಾಕೃಷ್ಣ ರೈ ಮಾತನಾಡಿದರು. ಈ ಸಂದರ್ಭದಲ್ಲಿ ನಟ ರವಿ ರಾಮಕುಂಜ, ಹಿರಿಯ ನಟ ಮಂಗೇಶ್ ಭಟ್ ವಿಟ್ಲ, ಪುತ್ತೂರು ಭಾರತ್ ಸಿನಿಮಾಸ್‌ನ ಜಯರಾಮ ವಿಟ್ಲ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಲ್ಲಿಕಾ ಜೆ. ರೈ, ಕ್ಯಾಂಪ್ಕೋ ಸಂಸ್ಥೆಯ ನಿವೃತ್ತ ಅಧಿಕಾರಿ ಪುರುಷೋತ್ತಮ ಶೆಟ್ಟಿ, ಮಿಥುನ್, ಪ್ರಸನ್ನ, ಚಿತ್ರ ವಿತರಕ ಬಾಲಕೃಷ್ಣ ರೈ ಕುಕ್ಕಾಡಿ,ಪದ್ಮರಾಜ್ ಮತ್ತಿತರರು ಉಪಸ್ಥಿತರಿದ್ದರು.ಆರಾಟ ಸಿನಿಮಾವು ಮಂಗಳೂರಿನಲ್ಲಿ ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲೀಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಪಿವಿಆರ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಕುಂದಾಪುರದಲ್ಲಿ ಭಾರತ್ ಸಿನಿಮಾಸ್, ಸುರತ್ಕಲ್‌ನಲ್ಲಿ ಸಿನಿಗ್ಯಾಲಕ್ಸಿ, ಕಾಸರಗೋಡು ಸಿನಿಕೃಷ್ಣ ಚಿತ್ರಮಂದಿರಗಳಲ್ಲಿ ಶುಕ್ರವಾರ ತೆರೆ ಕಂಡಿದೆ.