ವರುಣನ ಆರ್ಭಟ: ಧರೆಗುರುಳಿದ ಮರ, ನೆಲಕಚ್ಚಿದ ಬಾಳೆ

| Published : May 12 2024, 01:17 AM IST

ಸಾರಾಂಶ

ಎರಡು ದಿನಗಳ ಕಾಲ ಸಾಧಾರಣ ಮಳೆಯಾಗಿ ಬಿಡುವು ನೀಡಿದ್ದ ವರುಣ ಶನಿವಾರ ಮಧ್ಯಾಹ್ನ ಭರ್ಜರಿಯಾಗಿ ಸುರಿದು ಇಳೆ ತಂಪೆರೆದನು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಎರಡು ದಿನಗಳ ಕಾಲ ಸಾಧಾರಣ ಮಳೆಯಾಗಿ ಬಿಡುವು ನೀಡಿದ್ದ ವರುಣ ಶನಿವಾರ ಮಧ್ಯಾಹ್ನ ಭರ್ಜರಿಯಾಗಿ ಸುರಿದು ಇಳೆ ತಂಪೆರೆದನು.

ಚಾಮರಾಜನಗರ ಜಿಲ್ಲಾಕೇಂದ್ರ ಹಾಗೂ ತಾಲೂಕಿನಾದ್ಯಂತ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು-ಸಿಡಿಲು ಆರ್ಭಟದೊಂದಿಗೆ ಜೋರು ಮಳೆಯಾಗಿದ್ದು ಬಿಸಿಲಿನಿಂದ ಬಸವಳಿದಿದ್ದ ಜನರು ಹರ್ಷಗೊಂಡಿದ್ದಾರೆ. ಮಳೆಯಿಲ್ಲದೆ ಕಂಗಾಲಾಗಿದ್ದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದ್ದು, ವರುಣಾರ್ಭಟಕ್ಕೆ ಬೈಕ್ ಹಾಗೂ ವಾಹನ ಸವಾರರು ಕೆಲ ಕಾಲ ಪರದಾಡುವಂತಾಯಿತು.

ಈ ಬಾರಿಯ ಬೇಸಿಗೆಯಲ್ಲಿ ದಾಖಲೆ ಪ್ರಮಾಣದ 42 ಡಿಗ್ರಿ ತಾಪಮಾನವಿತ್ತು. ಭರ್ಜರಿ ಮಳೆ ಸುರಿದ ಹಿನ್ನೆಲೆ ಅನ್ನದಾತರು ಸಂತಸದಿಂದ ನಾಟಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಚಾಮರಾಜನಗರ ಸೇರಿದಂತೆ ತಾಲೂಕಿನ ಹರದನಹಳ್ಳಿ, ಬ್ಯಾಡಮೂಡ್ಲು, ಹೆಬ್ಬಸೂರು, ಚಂದಕವಾಡಿ, ಮರಿಯಾಲ, ಕೆಲ್ಲಂಬಳ್ಳಿ ಸುತ್ತಮುತ್ತ ಭರ್ಜರಿ ಮಳೆಯಾಯಿತು. ಇನ್ನು, ಬಿರುಗಾಳಿ ರಭಸಕ್ಕೆ‌ ಚಾಮರಾಜೇಶ್ವರ ಉದ್ಯಾನವನದ ಭುವನೇಶ್ವರಿ ವಿಗ್ರಹದ ಬಳಿ ಭಾರಿ ಮರವೊಂದು ಧರೆಗುರುಳಿದೆ. ಅದೃಷ್ಟವಶಾತ್ ಈ ವೇಳೆ, ಉದ್ಯಾನವನದಲ್ಲಿ ಯಾರೂ ಇಲ್ಲದಿದ್ದರಿಂದ ಪ್ರಾಣಹಾನಿ ತಪ್ಪಿದೆ. ಹೆಬ್ಬಸೂರು, ಬ್ಯಾಡಮೂಡ್ಲು ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆಗೆ ಎಕರೆ ಗಟ್ಟಲೆ ಬಾಳೆ ಫಸಲು ನಾಶವಾಯಿತು. ಡೊಳ್ಳಿಪುರ, ದೊಡ್ಡಮೋಳೆ, ಉತ್ತುವಳ್ಳಿ ಸೇರಿದಂತೆ ವಿವಿಧೆಡೆ ಸುರಿದ ಭಾರೀ ಮಳೆಗೆ ಸಾವಿರಾರು ಬಾಳೆ ಗಿಡ ನೆಲಕ್ಕುರುಳಿವೆ.

ದೊಡ್ಡಮೋಳೆ, ಡೊಳ್ಳಿಪುರ, ಉತ್ತುವಳ್ಳಿ, ಬ್ಯಾಡಮೂಡ್ಲು, ಮರಿಯಾಲದಲ್ಲಿ ರೈತರು ಬೆಳೆದ ಬಾಳೆ ಫಸಲು ನೆಲಕಚ್ಚಿದ್ದು ಲಕ್ಷಾಂತರ ರು. ನಷ್ಟವಾಗಿದೆ. 6 ತಿಂಗಳು ಹಾಕಿದ್ದ ಶ್ರಮ ಅರ್ಧ ತಾಸಲ್ಲೇ ನಾಶವಾಗಿದ್ದು ಎಲ್ಲವೂ ಕೂಡ ಕಟಾವಿಗೆ ಬಂದಿದ್ದ ಫಸಲಾಗಿದೆ. ದೊಡ್ಡಮೋಳೆ ಗ್ರಾಮದ ಆರ್.ಮಹಾದೇವ, ಮಲ್ಲೇಶ್, ವೆಂಕಟೇಶ್, ಕರಿಯಣ್ಣ, ಉತ್ತವಳ್ಳಿ ಗ್ರಾಮದ ರವಿ, ಹೆಬ್ಬಸೂರು ಗ್ರಾಮದ ಮಂಜುನಾಥ್‌, ಸೇರಿದಂತೆ ಹತ್ತಾರು ಮಂದಿ ರೈತರು ಒಂದು ದಿನದ ಮಳೆಗೆ ಕೈ ಸುಟ್ಟುಕೊಂಡಿದ್ದಾರೆ. ಬಾಳೆ ಬೆಳೆಗಾರರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.