ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸರ್ಕಾರದ ಆದೇಶವಿಲ್ಲ, ಇತ್ತ ನೋಟಿಸ್ ನೀಡದೇ ಶಿವಮೊಗ್ಗ ತಾಲೂಕಿನ ಆಲದೇವರ ಹೊಸೂರು ಗ್ರಾಮದ ಚೇತನಗೌಡ ಎಂಬುವರ ಜಮೀನಿಗೆ ನುಗ್ಗಿ ಬೇಲಿ ಕಿತ್ತು, ಜೆಸಿಬಿಯಿಂದ ತೆಂಗಿನಮರ ದ್ವಂಸ ಮಾಡಿದ್ದು ಅಲ್ಲದೆ ಇದನ್ನು ಪ್ರಶ್ನಿಸಿದ ಮಾಲೀಕರಿಗೆ ಜೀವ ಬೆದರಿಕೆ ಹಾಕಿರುವ ಅರಣ್ಯ ಇಲಾಖೆ ಅಧಿಕಾರಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಅಧ್ಯಕ್ಷ ತಿ.ನಾ.ಶ್ರೀನಿವಾಸ್ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಲೆ ಮಾಡುತ್ತಿದ್ದರು. ಇದನ್ನು ನೋಡಿಕೊಂಡು ಜನಪ್ರತಿನಿಧಿಗಳು ಪಲಾಯನ ಮಾಡುತ್ತಿದ್ದಾರೆ ಎಂದು ದೂರಿದರು.
ಜಿಲ್ಲೆಯ ಹಲವು ಕಡೆ ಅರಣ್ಯ ಇಲಾಖೆಯವರು ರೈತರಿಗೆ ನೋಟಿಸ್ ನೀಡದೇ ಜಮೀನುಗಳ ಒತ್ತುವರಿಯನ್ನು ಏಕಾಏಕಿ ತೆರವುಗೊಳಿಸುತ್ತಿದ್ದಾರೆ. ರೈತ ಚೇತನಗೌಡರವರ ಬಳಿ ಕಾನೂನು ಪರ ದಾಖಲೆಗಳಿದ್ದರೂ ಸಹ ಜಮೀನಿಗೆ ನುಗ್ಗಿ ಧ್ವಂಸ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೇ ಎಂದರು.ಚೇತನಗೌಡರ ಆಲದೇವರ ಹೊಸೂರು ಗ್ರಾಮದ ಸರ್ವೇ ನಂ.117, ಹಳೆ ಸರ್ವೇ ನಂ. 27ರ ಬ್ಲಾಕ್ ನಂ. 3ರಲ್ಲಿ ಎರಡು ಎಕರೆ ಜಮೀನಿದ್ದು, ಈ ಜಮೀನನ್ನು 2022ರ ಜುಲೈನಲ್ಲಿ ಕ್ರಯಕ್ಕೆ ಪಾರ್ವತಮ್ಮ ಕೋಂ ಓಂಕಾರಪ್ಪ ಇವರಿಂದ ಖರೀದಿಸಿರುತ್ತಾರೆ. ಇವರಿಗೆ ಸದರಿ ಜಮೀನು 1976ರಲ್ಲಿ ಸರ್ಕಾರದಿಂದ ಮಂಜೂರಾಗಿರುತ್ತದೆ. ಖರೀದಿಸಿದ ಜಮೀನಿನಲ್ಲಿ ಸುತ್ತಲು ತಂತಿ ಬೇಲಿ ನಿರ್ಮಿಸಿಕೊಂಡು ತೆಂಗಿನಗಿಡ ಬೆಳೆಸಿದ್ದಾರೆ. ಆದರೆ ಯಾವುದೇ ನೋಟೀಸ್ ನೀಡದೇ ಅರಣ್ಯ ಇಲಾಖೆಯವರು ಜಮೀನಿಗೆ ನುಗ್ಗಿ ಕಲ್ಲುಕಂಬ ಕಿತ್ತಿದ್ದು, ಜಮೀನಿನ ದಾಖಲೆ ತೋರಿಸಿದರು ಸಹ ಜೆಸಿಬಿ ಮೂಲಕ ತೆಂಗಿನಗಿಡಗಳನ್ನು ಕಿತ್ತು ಟ್ರಂಚ್ ತೆಗೆಯಲಾಗಿದೆ. ಇದನ್ನು ತಡೆಯಲು ಹೋದ ಚೇತನಗೌಡರ ಮೇಲೆ ಆರ್.ಎಫ್.ಓ. ಗುರುರಾಜ್ ಹಾಗೂ ಸಿಬ್ಬಂದಿ ಹಲ್ಲೆ ಮಾಡಿ ಜೆಸಿಬಿಯನ್ನು ಅವರ ಮೇಲೆ ಹತ್ತಿಸಲು ಹೋಗಿ ಜೀವಬೆದರಿಕೆ ಆಗಿದ್ದಾರೆ ಎಂದು ದೂರಿದರು.
ಜಮೀನಿನ ಮಾಲಿಕ ಚೇತನ್‍ಗೌಡ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕುವ ಅಧಿಕಾರಿಗಳ ಹಾಗೂ ಸಿಬ್ಬಂದಿ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಿ ಆಗಿರುವ ನಷ್ಟವನ್ನು ತುಂಬಿಸಿ ಅವರಿಗೆ ಜೀವ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.ರೈತರಿಗೆ ಆಗುತ್ತಿರುವ ಅನ್ಯಾಯ ಹಾಗೂ ದೌರ್ಜನ್ಯದ ವಿರುದ್ಧ ಆ.13ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ.ಕೃಷ್ಣಪ್ಪ, ಮಂಜಪ್ಪ, ದಿನೇಶ್ ಕುಮಾರ್, ಮಹಾದೇವ ಸಿದ್ದರಗುಡಿ, ಮೂರ್ತಿ, ಎಂ.ಚೇತನ್, ನಾಗರಾಜ ನಾಯಕ್, ವೆಂಕಟಚಲ ಗೌಡ ಇನ್ನಿತರರು ಉಪಸ್ಥಿತರಿದ್ದರು.