ಕನ್ನಡಪ್ರಭ ವಾರ್ತೆ ವಿಜಯಪುರ ಮೈಸೂರು ದಸರಾದಲ್ಲಿ ಸಿಎಂ ಕಪ್ ಬಿಲ್ಲುಗಾರಿಕೆ ಪಂದ್ಯಾವಳಿಯಲ್ಲಿ ಚಿನ್ನ ಮತ್ತು ಇತರ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಗೆದ್ದ ಬಿಲ್ಲುಗಾರ್ತಿ ತನ್ನ ಸಾಧನೆಗೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದಳು.

ಕನ್ನಡಪ್ರಭ ವಾರ್ತೆ ವಿಜಯಪುರ

ಮೈಸೂರು ದಸರಾದಲ್ಲಿ ಸಿಎಂ ಕಪ್ ಬಿಲ್ಲುಗಾರಿಕೆ ಪಂದ್ಯಾವಳಿಯಲ್ಲಿ ಚಿನ್ನ ಮತ್ತು ಇತರ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಗೆದ್ದ ಬಿಲ್ಲುಗಾರ್ತಿ ತನ್ನ ಸಾಧನೆಗೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದಳು.

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವಿಪುರ ಗ್ರಾಮದ ದೇವಮ್ಮ ಮಾನಪ್ಪ ಎಂಬ ಯುವತಿ ದ್ವಿತೀಯ ಪಿಯುಸಿ ಓದುತ್ತಿದ್ದು, ಬಿಲ್ಲುಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ಆಕೆಗೆ ಬಿಲ್ಲು, ಬಾಣ ಕ್ರೀಡಾ ಸಲಕರಣೆ ಖರೀದಿಲು ಆರ್ಥಿಕ ಸಮಸ್ಯೆ ಎದುರಾಗಿದ್ದ ಸಮಯದಲ್ಲಿ ಸಚಿವ ಎಂ.ಬಿ.ಪಾಟೀಲರು, ಯವತಿಗೆ ಕಳೆದ ವರ್ಷ ಸಿಎಸ್‌ಆರ್‌ ಫಂಡ್‌ನಲ್ಲಿ ₹ 3.50 ಲಕ್ಷ ಹಣಕಾಸಿನ ನೆರವು ನೀಡಿದ್ದರು.

ನೆರವಿನೊಂದಿಗೆ ಗುರಿಯತ್ತ ಮುನ್ನುಗ್ಗಿದ ಯುವತಿ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. ಅಲ್ಲದೇ ಹಲವು ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗಿಯಾಗಿ ಅನೇಕ ಪದಕಗಳನ್ನು ಗೆದ್ದಿದ್ದಾಳೆ. ಈ ಸಂತಸವನ್ನು ಹಂಚಿಕೊಳ್ಳಲು ಬಿಲ್ಲುಗಾರ್ತಿ ಸುರಪುರದಿಂದ ವಿಜಯಪುರಕ್ಕೆ ಆಗಮಿಸಿ ಸಚಿವ ಎಂ.ಬಿ.ಪಾಟೀಲರನ್ನು ಭೇಟಿಯಾದಳು. ಅಲ್ಲದೇ, ತಾನು ಮೈಸೂರು ದಸರಾ, ಗೋವಾ, ಉಡುಪಿ ಮುಂತಾದ ಕಡೆ ನಡೆದ ಸ್ಪರ್ಧೆಗಳಲ್ಲಿ ಗೆದ್ದ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಸಚಿವರಿಗೆ ತೋರಿಸಿ ಸಂತಸ ವ್ಯಕ್ತಪಡಿಸಿದಳು. ತನ್ನ ಸಾಧನೆಗೆ ಸಚಿವರು ನೀಡಿದ ಸಹಾಯ ಪ್ರಮುಖ ಕಾರಣ ಎಂದು ಧನ್ಯವಾದ ಹೇಳಿದಳು.

ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಎಂ.ಬಿ.ಪಾಟೀಲರು, ಗ್ರಾಮೀಣ ಪ್ರತಿಭೆಗೆ ನೀಡಿದ ಪ್ರೋತ್ಸಾಹದಿಂದಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ಒಲಿಂಪಿಕ್ಸ್ ದಾರಿಯಲ್ಲಿ ಕಲ್ಯಾಣ ಕರ್ನಾಟಕದ ಬಿಲ್ಲುಗಾರ್ತಿ ದೇವಮ್ಮ ಮುಂದೆ ಸಾಗಲಿ ಎಂದು ಶುಭ ಹಾರೈಸಿದರು.ತಂದೆ ಕಳೆದುಕೊಂಡು ಸೀಮಿತ ಆರ್ಥಿಕ ಸೌಲಭ್ಯಗಳ ನಡುವೆಯೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವ ದೇವಮ್ಮ ಅವರ ಕನಸುಗಳಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯ. ಅವರಿಗೆ ಮುಂದಿನ ದಿನಗಳಲ್ಲಿ ಒಲಿಂಪಿಕ್ ಮಟ್ಟದ ತರಬೇತಿ ಮತ್ತು ಅಗತ್ಯ ಕ್ರೀಡಾ ಪರಿಕರಗಳಿಗಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ, ಪ್ರತಿಭೆಗೆ ಪ್ರೋತ್ಸಾಹ, ಪರಿಶ್ರಮಕ್ಕೆ ಬೆಂಬಲ ದೊರೆತರೆ ಗ್ರಾಮೀಣ ಕ್ರೀಡಾಪಟುಗಳೂ ಜಾಗತಿಕ ವೇದಿಕೆಯಲ್ಲಿಯೂ ಮಿಂಚಬಲ್ಲರು ಎಂಬುದನ್ನು ಈ ಕ್ರೀಡಾಪಟು ತೋರಿಸಿದ್ದಾಳೆ. ಭವಿಷ್ಯದಲ್ಲಿ ದೇವಮ್ಮ ಅವರು ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಪದಕ ಗೆಲ್ಲುವ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ, ಬಿಎಲ್‌ಡಿಇ ಡೀಮ್ಡ್‌ ವಿವಿ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ, ರಿಜಿಸ್ಟ್ರಾರ್‌ ಆರ್‌.ವಿ.ಕುಲಕರ್ಣಿ, ಎಎಸ್ಐ ಸದಾಶಿವ ಕಟ್ಟಿಮನಿ ಇದ್ದರು.