ಬಿಜೆಪಿಯ ಮುಖಂಡರು ಜಾಣರೋ?, ಮೂರ್ಖರೋ?

| Published : Mar 12 2025, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಿಎಂ ಸಿದ್ಧರಾಮಯ್ಯನವರು ಮಂಡಿಸಿದ ಬಜೆಟ್‌ ಅನ್ನು ಹಲಾಲ್ ಬಜೆಟ್ ಎನ್ನುವ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸೇರಿದಂತೆ ಕೆಲ ಬಿಜೆಪಿ ಮುಖಂಡರು ಜಾಣರಿದ್ದಾರೋ ಅಥವಾ ಮೂರ್ಖರಿದ್ದಾರೋ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಕನ್ನಡಪ್ರಭ ವಾರ್ತೆ ವಿಜಯಪುರ

ಸಿಎಂ ಸಿದ್ಧರಾಮಯ್ಯನವರು ಮಂಡಿಸಿದ ಬಜೆಟ್‌ ಅನ್ನು ಹಲಾಲ್ ಬಜೆಟ್ ಎನ್ನುವ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸೇರಿದಂತೆ ಕೆಲ ಬಿಜೆಪಿ ಮುಖಂಡರು ಜಾಣರಿದ್ದಾರೋ ಅಥವಾ ಮೂರ್ಖರಿದ್ದಾರೋ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲಾಲ್ ಎಂಬ ಪದಕ್ಕೆ ಲೀಗಲ್ ಅಥವಾ ದೃಢೀಕೃತ ಎಂಬ ಅರ್ಥವಿದೆ. ಹಾಗಾಗಿ ಇದು ಹಲಾಲ್ ಬಜೆಟ್ ಎನ್ನುವ ಮೂಲಕ ದೃಢೀಕೃತ ಬಜೆಟ್ ಎಂಬುದನ್ನು ನೀವೇ ಒಪ್ಪಿಕೊಂಡಿದ್ದೀರಿ. ರಾಜ್ಯ ಬಜೆಟ್ ಮಂಡನೆ ರಾಷ್ಟ್ರದಲ್ಲಿಯೇ ಉತ್ತಮ‌ ಬಜೆಟ್ ಆಗಿದೆ. ಎಲ್ಲರಿಗೂ ಸಮಪಾಲು ಸಮಬಾಳು ಎಂಬುವಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಜೆಟ್‌ನಲ್ಲಿ ₹ 4500 ಕೋಟಿ ಹಣವನ್ನು ಅಲ್ಪಸಂಖ್ಯಾತರಿಗೆ ಇಟ್ಟಿದ್ದೀರಿ. ಆದರೆ ಅಲ್ಪಸಂಖ್ಯಾತರಲ್ಲಿ ಮುಸ್ಲಿಂ ಅಷ್ಟೆ ಇಲ್ಲ, ಬೌದ್ಧರು ಜೈನರು, ಶಿಖ್‌ರು ಸೇರಿ ಬೇರೆ ಬೇರೆ ಸಮುದಾಯಗಳಿವೆ. ಇಷ್ಟು ಕಡಿಮೆ ಅನುದಾನ ಇಟ್ಟಿದ್ದರಿಂದ ಈ ವರ್ಗಗಳು ಅನ್ಯಾಯಕ್ಕೊಳಗಾಗಿವೆ. ಶೇ.19 ಇದ್ದ ಅಲ್ಪಸಂಖ್ಯಾತರ ಸಮುದಾಯಗಳಿಗೆ ಕೇವಲ ಶೇ.1 ನಷ್ಟು ಅನುದಾನ ಮಾತ್ರ ಕೊಟ್ಟಿದ್ದೀರಿ. ಇದನ್ನು ಸರಿಪಡಿಸಿ ಎಂದು ಪ್ರಧಾನಿ ಮೋದಿ ಅವರು ರಾಜ್ಯ ಸರ್ಕಾರಕ್ಕೆ ಹೇಳಬೇಕಿತ್ತು. ಆಗ ಮಾತ್ರ ಅವರು ಜಪಿಸುವ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ ಎಂಬ ಪದಕ್ಕೆ ಅರ್ಥ ಬರುತ್ತಿತ್ತು. ಅಲ್ಪಸಂಖ್ಯಾತ ಸಮುದಾಯಕ್ಕೆ ₹ 25 ಸಾವಿರ ಕೋಟಿ ಅನುದಾನ ಕೊಡಬೇಕಿತ್ತು. ಆದರೆ ಈ ಬಿಜೆಪಿ ಒತ್ತಡದಿಂದ ಇಲ್ಲಿಗೆ ಬಂದಿದೆ ಎಂದು ಹೇಳಿದರು.

ಬಜೆಟ್‌ನ್ನು ಸಿಎಂ ಮಂಡಿಸಿದ್ದೋ ಅಥವಾ ಸಚಿವ ಜಮೀರ್ ಅಹಮ್ಮದ ಖಾನ ಅವರ ಸೂಚನೆಯಂತೆ ಆಗಿರುವುದೋ ಎಂದು ಲೇವಡಿ ಮಾಡುತ್ತೀರಿ. ನಿಮ್ಮ ಆಶಯದಂತೆ ಮುಂದೆ ಜಮೀರ್ ಅವರೂ ಒಮ್ಮೆ ಸಿಎಂ ಆಗಿ ಬಜೆಟ್ ಮಂಡಿಸುವಂತಾಗಲಿ. ಇನ್ನು ಜಿಲ್ಲೆಯ ಹಿರಿಯ ನಾಯಕರೊಬ್ಬರು ಮಾತನಾಡಿ, ಗ್ಯಾರಂಟಿಗಳಿಗೆ ಪರಿಶಿಷ್ಟರ ಅನುದಾನ ಮಾತ್ರ ಪಡೆದಿದ್ದೀರಿ, ಮುಸ್ಲಿಂ‌ರ ಅನುದಾನ ಏಕೆ ಪಡೆದಿಲ್ಲ ಎಂದಿದ್ದೀರಿ?. ನೀವು ರಾಜಕಾರಣ ಪ್ರವೇಶಿಸಿದ್ದೆ ಮುಸ್ಲಿಂರ ಬೆಂಬಲದಿಂದ. ಮುಸ್ಲಿಂರ ಬೆಂಬಲವನ್ನು ನೆನಪು ಮಾಡಿಕೊಂಡು ಅಂದಿರುವುದನ್ನು ತಿದ್ದುಪಡಿ ಮಾಡಿಕೊಳ್ಳಬೇಕು ಎಂದು ವಿನಂತಿಸಿದರು.

ಪರಿಶಿಷ್ಟ ವರ್ಗಗಳ‌ ಕಲ್ಯಾಣಕ್ಕೆ ಹೆಚ್.ಸಿ.ಮಹಾದೇವಪ್ಪ, ಸಿಎಂ ಸಿದ್ದರಾಮಯ್ಯನವರು ಹೋರಾಡುತ್ತಿದ್ದಾರೆ. ಪರಿಶಿಷ್ಟರ ಹಣವನ್ನು ಬೇರೆಯದ್ದಕ್ಕೆ ಬಳಸಿಕೊಂಡಿಲ್ಲ ಎಂದು ಮಹಾದೇವಪ್ಪನವರು ಅಂಕಿಸಂಖ್ಯೆ ಸಮೇತ ದಾಖಲೆ ಕೊಟ್ಟಿದ್ದಾರೆ. ಯಡಿಯೂರಪ್ಪನವರು ಸಿಎಂ ಇದ್ದಾಗ ಮುಸ್ಲಿಂ ಹಾಗೂ ಅಲ್ಪಸಂಖ್ಯಾತರಿಗೆ ಎಷ್ಟು ಹಣ ಇಟ್ಟಿದ್ದರು ನೋಡಿ. ಇದರ ಡಬಲ್ ಹಣ ಇಟ್ಟಿದ್ದರು. ಬರೀ ಮುಸ್ಲಿಂ ಟೀಕೆ ಮಾಡುವುದಲ್ಲ, ಬೇರೆ ಸಮಸ್ಯೆಗಳ ಬಗ್ಗೆ ಗಮನಿಸಬೇಕು. ಒಟ್ಟಾರೆ ನಿಮ್ಮ ಧ್ಯೇಯ ಮುಸ್ಲಿಂರು, ಅಲ್ಪಸಂಖ್ಯಾತರು, ಪರಿಶಿಷ್ಟರು, ದಲಿತರು ಅಭಿವೃದ್ಧಿ ಆಗಬಾರದು ಎಂಬ ಉದ್ದೇಶವಿದ್ದು, ಇದನ್ನು ಖಂಡಿಸುವುದಾಗಿ ತಿಳಿಸಿದರು.

ಮುಖಂಡ ಎಂ.ಸಿ.ಮುಲ್ಲಾ ಮಾತನಾಡಿ, ನಮ್ಮಲ್ಲಿ ವಿರೋಧ ಪಕ್ಷ ಸರಿಯಾಗಿಲ್ಲ. ಒಬ್ಬರೂ ಬಜೆಟ್ ಬಗ್ಗೆ ಅಭ್ಯಸಿಸಿದವರು ಇಲ್ಲ. ಇವರಿಗೆ ಹಲಾಲ್, ಜಟಕಾ ಬಿಟ್ಟು ಬೇರೆ ವಿಚಾರವೇ ಗೊತ್ತಿಲ್ಲ. ಭಾರತೀಯ ಜನತಾ ಪಾರ್ಟಿ ಬದಲು ಭಾರತೀಯ ಜಟಕಾ ಪಾರ್ಟಿ ಎಂದು ಹೆಸರಿಡಬೇಕು. ಹಲಾಲ್‌ ಎಂದರೆ ಒಳ್ಳೆಯದು, ಹರಾಮ್ ಎಂದರೆ ಕೆಟ್ಟದ್ದು. ಇದರ ಅರ್ಥವೇ ಅವರಿಗೆ ಗೊತ್ತಿಲ್ಲ. ಹಲಾಲ್ ಬಜೆಟ್ ಎಂದು ಹೇಳುವ ಮೂಲಕ ಅವರೇ ಒಳ್ಳೆಯ ಬಜೆಟ್‌ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.

ಮುಖಂಡರಾದ ನಾಗರಾಜ ಲಂಬು, ವಸಂತ ಹೊನಮೊಡೆ ಉಪಸ್ಥಿತರಿದ್ದರು.-------

ಕೋಟ್‌.....

ಪ್ರಹ್ಲಾದ್ ಜೋಶಿ ಸೇರಿದಂತೆ ಕೆಲವು ಬಿಜೆಪಿ ನಾಯಕರಿಗೆ ಈ ಮುಸ್ಲಿಂ, ಹಲಾಲ್, ಜಟಕಾ, ಜಿಹಾದ್ ಮುಂತಾದ ಟೀಕೆಗಳನ್ನು ಬಿಟ್ಟು ಬೇರೆ ಉರಸಿರಾಟವೆ ಇಲ್ಲ. ಅಧಿಕಾರದಲ್ಲಿರಲು ಇವರು ಹೀಗೆಲ್ಲ ಮಾತನಾಡುತ್ತಾರೆ. ಪರಿಶಿಷ್ಟರ ಹಣ ವಾಪಸ್ ಪಡೆದಿದ್ದಾರೆ ಎಂದು ಬಿಜೆಪಿಯವರು ಹೇಳಿ ಮೊಸಳೆ‌ ಕಣ್ಣೀರು ಸುರಿಸುತ್ತಿದ್ದೀರಿ. ದಲಿತರ ಅಭಿವೃದ್ಧಿಯೇ ನಿಮಗೆ ಬೇಕಾಗಿಲ್ಲ. ನೀವು ಎಷ್ಟುಜನ ಪರಿಶಿಷ್ಟರ ಕಲ್ಯಾಣ ಕೆಲಸ ಮಾಡಿದ್ದೀರಿ?.

- ಎಸ್.ಎಂ.ಪಾಟೀಲ ಗಣಿಹಾರ, ಅಹಿಂದ ಮುಖಂಡ