ಸಾರಾಂಶ
ಕನ್ನಡಪ್ರಭ ವಾರ್ತೆ ಕುದೂರು
ಬಿಡಿಸಿಸಿ ಬ್ಯಾಂಕಿನ ಕುದೂರು ಶಾಖೆಯಲ್ಲಿ ನಡೆದಿರುವ ನಕಲಿ ಚಿನ್ನದ ಹಗರಣದಲ್ಲಿ ಚಿನ್ನದ ಪರೀಕ್ಷಕರ ಜೊತೆಯಲ್ಲಿ ಬ್ಯಾಂಕಿನ ಸಿಬ್ಬಂದಿ, ನಿರ್ದೇಶಕರು ಭಾಗಿಯಾಗಿದ್ದಾರಾ ಎಂಬುದನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕಿದೆ. ಇದಕ್ಕಾಗಿ ಸೂಕ್ತ ತನಿಖೆ ಆಗಬೇಕು ಎಂದು ಬಿಜೆಪಿ ಮಾಗಡಿ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಒತ್ತಾಯಿಸಿದರು.ಕುದೂರು ಗ್ರಾಮದ ಶ್ರೀ ವೈನತೇಯ ಆರ್ಕಿಡ್ ನಲ್ಲಿ ಬಿಜೆಪಿ ಘಟಕದಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ದೇಶಕರ ಗಮನಕ್ಕೆ ಬಾರದಂತೆ ಸಾಲ ಮಂಜೂರಾಗಿರಲು ಸಾಧ್ಯವೇ ಇಲ್ಲ. ಈಗ ಕೇಳಿದರೆ ನಕಲಿ ವ್ಯವಹಾರ ಮಾಡಿರುವ ಚಿನ್ನದ ವಡವೆಗಳ ಪರೀಕ್ಷಕ ನಾಗೇಂದ್ರರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಉತ್ತರಿಸುತ್ತಾರೆ. ಹಾಗಿದ್ದರೆ ಬ್ಯಾಂಕಿನ ಒಳಗೆ ಬಂದ ಹಣವನ್ನು ಏನೆಂದು ನಮೂದು ಮಾಡಿಕೊಳ್ಳುತ್ತೀರಿ. ನಕಲಿ ವಡವೆಗಳಿಂದ ಮಂಜೂರಾಗಿದ್ದ ಸಾಲದ ಹಣ ವಾಪಸ್ ಬಂದಿದೆ ಎಂದು ರಸೀದಿ ಬರೆಯುತ್ತೀರಾ ಎಂದು ವ್ಯಂಗ್ಯವಾಡಿದರು.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹನುಮಂತೇಗೌಡ ಮಾತನಾಡಿ, ಕುದೂರು ಬಿಡಿಸಿಸಿ ಬ್ಯಾಂಕಿನ ನಕಲಿ ಚಿನ್ನದ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತಾಗಿ ಇದುವರೆಗೂ ಯಾಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಎಷ್ಟು ಕೋಟಿಯ ನಕಲಿ ಚಿನ್ನವನ್ನಿಟ್ಟುಕೊಂಡು ಸಾಲ ವಿತರಿಸಲಾಗಿದೆ ಎಂಬುದರ ಸ್ಪಷ್ಟ ಚಿತ್ರಣವನ್ನು ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.ಬಿಜೆಪಿ ಕುದೂರು ಅಧ್ಯಕ್ಷ ನಾಗರಾಜ್ ಮಾತನಾಡಿ, ನಕಲಿ ಚಿನ್ನದ ಭ್ರಷ್ಟಾಚಾರದ ತನಿಖೆ ಆಗಬೇಕೆಂದು ಈಗಾಗಲೇ ಲೋಕಾಯುಕ್ತ ಮತ್ತು ರಾಮನಗರ ಎಸ್ಪಿ ಯವರಿಗೆ ದೂರು ನೀಡಲಾಗಿದೆ. ನಕಲಿ ಚಿನ್ನದ ಅವ್ಯವಹಾರದಲ್ಲಿ ಹಣವನ್ನು ಬ್ಯಾಂಕಿಗೆ ಕಟ್ಟಿಸಿಕೊಂಡರೆ ಆರೋಪಿಯನ್ನು ಖುಲಾಸ್ ಮಾಡುವಂತಿದೆಯಾ ಭಾರತರದ ಸಂವಿದಾನದಲ್ಲಿ? ಕಾನೂನಿನ ಬಗ್ಗೆ ಗೌರವ ಇರುವುದೇ ಆದರೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯದರ್ಶಿ ವೀರಾಪುರ ಧನುಷ್, ರಂಗಶಾಮಯ್ಯ ಮತ್ತಿತರರು ಇದ್ದರು.