ಬಳ್ಳಾರಿ ಜನರಿಗೆ ಶುದ್ಧ ಕುಡಿವ ನೀರು ಕೊಡಲಾಗುತ್ತಿಲ್ಲವೇ?

| Published : Oct 11 2024, 11:51 PM IST

ಬಳ್ಳಾರಿ ಜನರಿಗೆ ಶುದ್ಧ ಕುಡಿವ ನೀರು ಕೊಡಲಾಗುತ್ತಿಲ್ಲವೇ?
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ ಬಳ್ಳಾರಿ ನಗರದಲ್ಲಿ ಈಗಲೂ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಜನರಿಗೆ ಸಮರ್ಪಕವಾಗಿ ನೀರು ಸಹ ಕೊಡಲು ನಿಮಗಾಗುತ್ತಿಲ್ಲವೇ? ಎಂದು ಸಚಿವ ಜಮೀರ್ ಅಹಮದ್ ಖಾನ್ ಪ್ರಶ್ನಿಸಿದ್ದಾರೆ.

ಬಳ್ಳಾರಿ: ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ ಬಳ್ಳಾರಿ ನಗರದಲ್ಲಿ ಈಗಲೂ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಜನರಿಗೆ ಸಮರ್ಪಕವಾಗಿ ನೀರು ಸಹ ಕೊಡಲು ನಿಮಗಾಗುತ್ತಿಲ್ಲವೇ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದ ಜಿಪಂ ನಜೀರ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಬುಧವಾರ ಮಾತನಾಡಿದರು. ನಗರದ ಕೌಲ್‌ಬಜಾರ್ ಸೇರಿದಂತೆ ನಾನಾ ಭಾಗಗಳಿಂದ ಜನರು ನೀರು ಸರಿಯಾಗಿ ಬರುತ್ತಿಲ್ಲ, ಶುದ್ಧವಾಗಿಲ್ಲ ಹಾಗೂ ಅಸಮರ್ಪಕ ನೀರು ಪೂರೈಕೆ ಬಗ್ಗೆ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಕೂಡಲೆ ಪರಿಶೀಲಿಸಿ, ಸಮಸ್ಯೆ ಪರಿಹರಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ನಗರಕ್ಕೆ ಸಮರ್ಪಕವಾಗಿ ನೀರು ಪೂರೈಸಲು ಸಾಕಷ್ಟು ನೀರಿನ ಲಭ್ಯತೆ ಇದೆ. ಆದರೆ ನೀರು ಸರಬರಾಜು ಜಾಲದ ವ್ಯವಸ್ಥೆಯಲ್ಲಿ ಸಾಕಷ್ಟು ಕೊರತೆ ಇದೆ, ಇದನ್ನು ಇನ್ನಷ್ಟು ಸುಧಾರಿಸುವ ಅಗತ್ಯವಿದೆ ಎಂದರು.

ಸಚಿವರು ಮಾತನಾಡಿ, ಕೂಡಲೆ ನಗರದಲ್ಲಿನ ನೀರು ಪೂರೈಕೆ ಸಮರ್ಪಕವಾಗಬೇಕು, ಜನರಿಂದ ನೀರು ಪೂರೈಕೆ ಬಗ್ಗೆ ಮತ್ತೆ ದೂರು ಬಂದಲ್ಲಿ, ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಜಿಲ್ಲೆಯ ಅಭಿವೃದ್ಧಿಯೊಂದಿಗೆ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಜನರಿಗೆ ತಲುಪಿಸಲು ಸಹಕಾರಿಯಾಗುವ ಉದ್ದೇಶದೊಂದಿಗೆ ಜಿಲ್ಲೆಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಸರ್ಕಾರದೊಂದಿಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಜಿಲ್ಲೆಯ ಶಿಕ್ಷಣ ಇಲಾಖೆ, ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖಾವಾರು ಸಾಧನೆ ಕುರಿತು ಸಭೆಯಲ್ಲಿ ಪ್ರಸ್ತಾಪಿಸುವುದರೊಂದಿಗೆ ಖಾಲಿಯಿರುವ ಹುದ್ದೆಗಳ ಬಗ್ಗೆ ಸಹ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಕೂಡಲೇ ಸಂಬಂಧಿಸಿದ ಇಲಾಖೆ ಸಚಿವರ ಮೂಲಕ ಸರ್ಕಾರದ ಗಮನ ಸೆಳೆದು ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಫಲಿತಾಂಶ ಸುಧಾರಣೆಯಾಗಲಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ಬಾರಿ ರಾಜ್ಯಕ್ಕೆ ಜಿಲ್ಲೆ 27ನೇ ಸ್ಥಾನದಲ್ಲಿದ್ದು, ಇನ್ನೂ ಸಾಕಷ್ಟು ಸುಧಾರಣೆಯಾಗಬೇಕಿದೆ. ಫಲಿತಾಂಶ ಸುಧಾರಣೆಗಾಗಿ 6ನೇ ತರಗತಿಯಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ತಯಾರು ಮಾಡಬೇಕು ಎಂದು ತಿಳಿಸಿದರು.

ಕೋನೋಕರ್‌ ಕಾರ್ಪಸ್‌ ಗಿಡ ತೆರವುಗೊಳಿಸಿ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನೂತನ ಬಡಾವಣೆ ರಚನೆಯ ವೇಳೆ ಆಕರ್ಷಣಿಯವಾಗಿ ಕಾಣಲು ಪರಿಸರಕ್ಕೆ ಮಾರಕವಾಗುವಂತ ಗಿಡಗಳನ್ನು ನೆಡಲಾಗುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಶಾಸಕರಾದ ನಾರಾ ಭರತ್‌ ರೆಡ್ಡಿ, ಜೆ.ಎನ್‌. ಗಣೇಶ್‌ ಸಭೆಯ ಗಮನ ಸೆಳೆದರು. ಸಚಿವ ಜಮೀರ್‌ ಅಹ್ಮದ್‌ ಕೂಡ ಸಹಮತ ವ್ಯಕ್ತಪಡಿಸಿದರು.

ಸಭೆಯಲ್ಲಿ ಶಾಸಕ ನಾರಾ ಭರತ್‌ ರೆಡ್ಡಿ ಮಾತನಾಡಿ, ಬಿಮ್ಸ್‌(ವಿಮ್ಸ್‌) ಆಸ್ಪತ್ರೆಯಲ್ಲಿ ಔಷಧಿಗಳು, ಶಸ್ತ್ರ ಚಿಕಿತ್ಸೆಗಾಗಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ಮಾತ್ರೆಗಳನ್ನು ಚೀಟಿಗಳ ಮೂಲಕ ಹೊರಗಡೆ ಬರೆದುಕೊಡುತ್ತಿದ್ದಾರೆ. ಬಡರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ದೊರಕುತ್ತಿಲ್ಲ ಎಂದರು. ಸಭೆಯಲ್ಲಿಯಲ್ಲಿ ವಿಮ್ಸ್‌ ನಿರ್ದೇಶಕರು ಗೈರಾಗಿರುವುದನ್ನು ಕಂಡು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸಭೆಯ ಗಂಭೀರತೆಯಿಲ್ಲದ ನಿರ್ದೇಶಕರನ್ನು ಅಮಾನತಿಗೆ ಶಿಫಾರಸು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಬಳಿಕ ಜಿಲ್ಲಾಧಿಕಾರಿ ಮಾತನಾಡಿ, ವಿಮ್ಸ್‌ನಲ್ಲಿ ಮೆಡಿಸಿನ್‌ ಸಮಸ್ಯೆಯಿದ್ದು, ಸರಿಯಾಗಿ ಟೆಂಡರ್‌ ಕರೆಯುತ್ತಿಲ್ಲ. ಈ ಕುರಿತು ಅನೇಕ ಬಾರಿ ಸೂಚನೆ ನೀಡಲಾಗಿದೆ ಎಂದರು. ಬಿಮ್ಸ್ ನಿರ್ದೇಶಕರು ಸಭೆಗೆ ಹಾಜರಾದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಸಂಸದ ಈ. ತುಕಾರಾಂ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ. ತ್ರಿಲೋಕಚಂದ್ರ, ಡಿಸಿ ಪ್ರಶಾಂತ್‌ ಕುಮಾರ್‌ ಮಿಶ್ರಾ, ಜಿಪಂ ಸಿಇಒ ರಾಹುಲ್‌ ಶರಣಪ್ಪ ಸಂಕನೂರು, ಎಸ್ಪಿ ಡಾ.ವಿ.ಜೆ. ಶೋಭಾರಾಣಿ, ಡಿಎಫ್‌ಒ ಸಂದೀಪ್‌ ಸೂರ್ಯವಂಶಿ ಇದ್ದರು.