ಬಿಜೆಪಿ ಕಟ್ಟಲು ಶ್ರಮಿಸಿದವರೇ ಹೊರ ಜಿಲ್ಲೆಯವರಾ?: ಶಾಸಕ ಬಿ.ಪಿ.ಹರೀಶ, ಯಶವಂತರಾವ್ ಜಾಧವ್‌

| Published : Jan 21 2024, 01:34 AM IST

ಬಿಜೆಪಿ ಕಟ್ಟಲು ಶ್ರಮಿಸಿದವರೇ ಹೊರ ಜಿಲ್ಲೆಯವರಾ?: ಶಾಸಕ ಬಿ.ಪಿ.ಹರೀಶ, ಯಶವಂತರಾವ್ ಜಾಧವ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದೇಶ್ವರ ಆಯ್ಕೆಯನ್ನು ಕೇಂದ್ರ ನಾಯಕರು ಮಾಡುತ್ತಾರೆಯೇ ಹೊರತು ರಾಜ್ಯ, ಜಿಲ್ಲಾ ನಾಯಕರಲ್ಲ. ಹಾಗಾಗಿ ರೇಣುಕಾಚಾರ್ಯ ಇತರರಿಗೆ ಏನಾದರೂ ಅಸಮಾಧಾನವಿದ್ದರೆ ಕೇಂದ್ರ ನಾಯಕರ ಬಳಿ ಹೇಳಬೇಕೆ ಹೊರತು, ಮಾಧ್ಯಮ, ಹಾದಿ ಬೀದಿಗಳಲ್ಲಿ ಅಲ್ಲ. ರೇಣುಕಾಚಾರ್ಯ ಸಿಎಂ, ಡಿಸಿಎಂ, ಸಚಿವರ ಮನೆಗಳ ಬಾಗಿಲಿಗೆ ಹೋಗುವುದು, ಕಾಂಗ್ರೆಸ್‌ನ ನಾಯಕರೊಂದಿಗೆ ಚರ್ಚಿಸುವುದು ಕಂಡರೆ, ರೇಣುಕಾಚಾರ್ಯ ಯಾರ ಪರ ಕೆಲಸ ಮಾಡುತ್ತಿದ್ದಾರೆಂದು ಮೇಲ್ನೋಟಕ್ಕೆ ಸ್ಪಷ್ಟವಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಲೋಕಸಭೆ ಚುನಾವಣೆಯಲ್ಲಿ ಎದುರಾಳಿಗಳಿಗೆ ಅನುಕೂಲ ಮಾಡಿಕೊಡುವಂತಹ ಹೇಳಿಕೆ ನೀಡುತ್ತಿರುವ ಮಾಜಿ ಸಚಿವರು, ಮಾಜಿ ಶಾಸಕರು ತಮ್ಮ ವರ್ತನೆ, ಹೇಳಿಕೆ ಮೇಲೆ ಹಿಡಿತವಿಟ್ಟುಕೊಳ್ಳದಿದ್ದರೆ ಪಕ್ಷದಿಂದ ಉಚ್ಚಾಟಿಸುವುದಾಗಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಎಚ್ಚರಿಸಿದ್ದಾರೆ ಎಂದು ಹರಿಹರ ಶಾಸಕ ಬಿ.ಪಿ.ಹರೀಶ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್‌ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬೆಂಗಳೂರಿನಲ್ಲಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಘಟನಾ ಕಾರ್ಯದರ್ಶಿ ರಾಜೇಶ, ಜಿಲ್ಲಾ ಉಸ್ತುವಾರಿ ಪ್ರೀತಂಗೌಡ ಹಾಗೂ ತಾವೂ ಸೇರಿದಂತೆ 40ಕ್ಕೂ ಹೆಚ್ಚು ಮುಖಂಡರು ಭೇಟಿ ಮಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್‌ನವರ ಕುಮ್ಮಕ್ಕಿನಿಂದ ಪಕ್ಷದ ಮಾಜಿ ಸಚಿವರು, ಮಾಜಿ ಶಾಸಕರು, ಪ್ರಮುಖರು ನೀಡುತ್ತಿರುವ ಹೇಳಿಕೆ, ನಡೆಸಿರುವ ಚಟುವಟಿಕೆ ಬಗ್ಗೆ ಗಮನಕ್ಕೆ ತಂದಿದ್ದೇವೆ. ದಾವಣಗೆರೆ ಜಿಲ್ಲೆಯಲ್ಲಿ ಒಳ ಜಿಲ್ಲೆಯವರು, ಹೊರ ಜಿಲ್ಲೆಯವರೆಂಬ ವಿಚಾರ ಹರಡುತ್ತಿರುವುದು ಖಂಡನೀಯ ಎಂದು ಆಕ್ಷೇಪಿಸಿದರು.

ಕಳೆದ 8 ಲೋಕಸಭೆ ಚುನಾವಣೆಗಳಿಂದಲೂ ದಿ. ಜಿ.ಮಲ್ಲಿಕಾರ್ಜುನಪ್ಪ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಗೆದ್ದು ಬರುತ್ತಿದ್ದಾರೆ. ಪಕ್ಷ ಕಟ್ಟಲು ಶ್ರಮಿಸಿದವರ ಬಗ್ಗೆ ಈಗ ಹೊರ ಜಿಲ್ಲೆಯವರೆಂಬ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ? ಸಂಸದ ಸಿದ್ದೇಶ್ವರ ಹೊರ ಜಿಲ್ಲೆಯವರೇನೂ ಅಲ್ಲ. ಇದೇ ಊರಿನಲ್ಲಿ ಶಿಕ್ಷಣ ಸಂಸ್ಥೆ, ವ್ಯಾಪಾರ, ವಹಿವಾಟು, ಮನೆ ಹೊಂದಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠಗೊಳಿಸಲು ಶ್ರಮಿಸಿದವರಲ್ಲಿ ಪ್ರಮುಖರಾದ ಸಿದ್ದೇಶ್ವರ ಬಗ್ಗೆ ರೇಣುಕಾಚಾರ್ಯ, ತಂಡದ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ತಂದೊಡ್ಡುತ್ತಿರುವುದು ಖಂಡನೀಯ. ನಾಮಕರಣ, ಹುಟ್ಟುಹಬ್ಬ, ವಿವಾಹ ಹೀಗೆ ಯಾವುದೇ ಕಾರ್ಯಕ್ಕೆ ದಾವಣಗೆರೆಗೆ ಬಂದರೂ ಬಿಜೆಪಿ, ಸಂಸದ ಸಿದ್ದೇಶ್ವರ ಬಗ್ಗೆ ಹಗುರವಾಗಿ ಮಾತನಾಡಿ, ಪಕ್ಷಕ್ಕೆ ಮುಜುಗರ ತಂದು, ಎದುರಾಳಿ ಕಾಂಗ್ರೆಸ್‌ ಗೆಲುವಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿರುವ ರೇಣುಕಾಚಾರ್ಯ ಇತರರ ಬಗ್ಗೆ ರಾಜ್ಯ ನಾಯಕರಿಗೆ ದೂರು ಸಲ್ಲಿಸಿದ್ದೇವೆ. ಬಿಎಸ್‌ವೈ ತಕ್ಷಣವೇ ರೇಣುಕಾಚಾರ್ಯರಿಗೆ ಕರೆ ಮಾಡಿ, ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿದರು.

ಅಸಮಾಧಾನವಿದ್ದರೆ ನಾಯಕರಲ್ಲಿ ಹೇಳಲಿ:

ಸಿದ್ದೇಶ್ವರ ಆಯ್ಕೆಯನ್ನು ಕೇಂದ್ರ ನಾಯಕರು ಮಾಡುತ್ತಾರೆಯೇ ಹೊರತು ರಾಜ್ಯ, ಜಿಲ್ಲಾ ನಾಯಕರಲ್ಲ. ಹಾಗಾಗಿ ರೇಣುಕಾಚಾರ್ಯ ಇತರರಿಗೆ ಏನಾದರೂ ಅಸಮಾಧಾನವಿದ್ದರೆ ಕೇಂದ್ರ ನಾಯಕರ ಬಳಿ ಹೇಳಬೇಕೆ ಹೊರತು, ಮಾಧ್ಯಮ, ಹಾದಿ ಬೀದಿಗಳಲ್ಲಿ ಅಲ್ಲ. ರೇಣುಕಾಚಾರ್ಯ ಸಿಎಂ, ಡಿಸಿಎಂ, ಸಚಿವರ ಮನೆಗಳ ಬಾಗಿಲಿಗೆ ಹೋಗುವುದು, ಕಾಂಗ್ರೆಸ್‌ನ ನಾಯಕರೊಂದಿಗೆ ಚರ್ಚಿಸುವುದು ಕಂಡರೆ, ರೇಣುಕಾಚಾರ್ಯ ಯಾರ ಪರ ಕೆಲಸ ಮಾಡುತ್ತಿದ್ದಾರೆಂದು ಮೇಲ್ನೋಟಕ್ಕೆ ಸ್ಪಷ್ಟವಿದೆ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ರೇಣುಕಾಚಾರ್ಯ ಇಬ್ಬರೂ ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ನೀಡುತ್ತಿದ್ದು, ಇಂತಹವರ ಹತೋಟಿಯಲ್ಲಿಡಲು ರಾಜ್ಯ ನಾಯಕರಿಗೆ ದಾವಣಗೆರೆ ನಿಯೋಗ ಮನವಿ ಮಾಡಿದೆ ಎಂದು ಬಿ.ಪಿ.ಹರೀಶ, ಯಶ‍ವಂತರಾವ್ ವಿವರಿಸಿದರು.

ಪಕ್ಷದ ಮುಖಂಡರಾದ ಬಿ.ಎಸ್.ಜಗದೀಶ, ರಾಜನಹಳ್ಳಿ ಶಿವಕುಮಾರ, ಹನುಮಂತ ನಾಯ್ಕ, ಎಚ್.ಪಿ.ವಿಶ್ವಾಸ, ಶಿವನಗೌಡ ಪಾಟೀಲ್, ಜಿ.ವಿ.ಗಂಗಾಧರ, ಟಿಂಕರ್ ಮಂಜಣ್ಣ, ಗುರು ಸೋಗಿ ಇತರರು ಇದ್ದರು. ಬಿಜೆಪಿ ಹಾಳು ಮಾಡುವುದೇ ರೇಣುಕಾಚಾರ್ಯ ಉದ್ದೇಶವೇ?ಬಿಜೆಪಿಯಲ್ಲಿ ರೇಣುಕಾಚಾರ್ಯ ಈಗಾಗಲೇ ಎಲ್ಲಾ ಅಧಿಕಾರವನ್ನೂ ಅನುಭವಿಸಿದ್ದಾರೆ. ತಾವು ಅಧಿಕಾರ ಅನುಭವಿಸಲುಬೇಕಾದ ಬಿ ಫಾರಂಗಾಗಿ ಸಿದ್ದೇಶ್ವರರ ಬಳಿ ಸಹಾಯ ಪಡೆದಿದ್ದು ಮರೆಯಬಾರದು. ಕಾಂಗ್ರೆಸ್‌ನವರ ಕುಮ್ಮಕ್ಕಿನಿಂದಲೇ ಸಂಸದರ ವಿರುದ್ಧ ಹೇಳಿಕೆ ನೀಡಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ ಕಲ್ಪಿಸುತ್ತಿದ್ದಾರೆ. ಬಿಜೆಪಿ ಹಾಳು ಮಾಡುವುದೇ ರೇಣುಕಾಚಾರ್ಯ ಉದ್ದೇಶವೇ? ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತರ ಪ್ರಾಣ ಯಾಕೆ ತಿನ್ನುತ್ತೀರಾ? ಇನ್ನಾದರೂ ನಿಮ್ಮ ಹಲ್ಕಟ್‌ಗಿರಿ ಬಿಡಿ. ಸಂಸದ ಸಿದ್ದೇಶ್ವರ ವಿರುದ್ಧ ಇನ್ನು ಒಂದೇ ಒಂದು ಹೇಳಿಕೆ ನೀಡಿದರೂ ರೇಣುಕಾಚಾರ್ಯರ ಪಕ್ಷದಿಂದಲೇ ಉಚ್ಚಾಟಿಸುವಂತೆ ಬಿಜೆಪಿ ಕೇಂದ್ರ ಕಚೇರಿ ಎದುರು ಕೂರುತ್ತೇವೆ.

ಯಶವಂತರಾವ್ ಜಾಧವ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ

ಕಾಂಗ್ರೆಸ್ಸಿಗರ ವಿಶ್ವಾಸಗಳಿಸುವ ಯತ್ನವೇ?

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಬೇಕೆಂಬುದು ನಮ್ಮ ಗುರಿ. ಮೋದಿ ಕೈಗಳ ಬಲಪಡಿಸುವ ಬದಲಿಗೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಅಭ್ಯರ್ಥಿಗಳ ಬಗ್ಗೆ ಟೀಕಿಸುತ್ತಿರುವ ರೇಣುಕಾಚಾರ್ಯ ತಮ್ಮ ವರ್ತನೆ ತಿದ್ದಿಕೊಳ್ಳಬೇಕು. ಕಾಂಗ್ರೆಸ್ ನಾಯಕರು, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರ ಮನೆ ಮುಂದೆ ಹೋಗಿ, ಸುದ್ದಿಗೋಷ್ಠಿ ಮಾಡುತ್ತಿರುವುದೇನು ಕಾಂಗ್ರೆಸ್‌ನ ನಾಯಕರ ವಿಶ್ವಾಸ ಗಳಿಸುವುದಕ್ಕಾ ಅಥವಾ ಬಿಜೆಪಿಗೆ ಒಳಿತು ಮಾಡಲು ಹೀಗೆ ಮಾಡುತ್ತಿದ್ದೀರಾ? ನಿಮ್ಮ ವರ್ತನೆಯಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮನಸ್ಸಿಗೂ ಬೇಸರವಾಗುತ್ತಿದೆ. ಇನ್ನಾದರೂ ನಿಮ್ಮ ನಡೆ, ವರ್ತನೆ ತಿದ್ದಿಕೊಳ್ಳಿ.

ಬಿ.ಪಿ.ಹರೀಶ ಗೌಡ, ಹರಿಹರ ಬಿಜೆಪಿ ಶಾಸಕ