ನಗರಸಭೆಯಲ್ಲಿ ಫಾರಂ- 3 ವಿಳಂಬ ಸಹಿಸುವುದಿಲ್ಲ. ಅರ್ಜಿ ಹಾಕಿದ ಕೂಡಲೇ ಆನ್‌ಲೈನ್‌ ಲಾಗಿನ್‌ ಮಾಡಿ, ದಾಖಲೆಗಳನ್ನು ಪರಿಶೀಲಿಸಿ ಅಂಚೆ ಮೂಲಕ ರವಾನಿಸಬೇಕು. ಒಂದು ವೇಳೆ, ದಾಖಲೆಗಳು ಸರಿ ಇಲ್ಲದಿದ್ದರೆ, ಸಂಬಧಿಸಿದವರಿಗೆ ಲಿಖಿತ ಉತ್ತರ ನೀಡಿ ಮರುಕಳುಹಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

"ನೀವೇನೂ ಮಿನಿಸ್ಟ್ರಾ, ದೊಡ್ಡ ಆಫೀಸರಾ? ಜನ ಬಂದಾಗ ಮೊದಲು ಸ್ಪಂದಿಸಿ ಕೆಲಸ ಮಾಡಿ " ಎಂದು ನಗರಸಭೆ ಕಂದಾಯ ಅಧಿಕಾರಿ ರಮೇಶ್‌ಗೆ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ತರಾಟೆಗೆ ತೆಗೆದುಕೊಂಡರು.

ನಗರಸಭೆಗೆ ಸೋಮವಾರ ದಿಢೀರ್‌ ಭೇಟಿ ನೀಡಿದ ಅವರು, ಫಾರಂ-3 ಹಾಗೂ ಮುಟೇಶನ್‌ ವಿಳಂಬದ ಬಗ್ಗೆ ಪರಿಶೀಲನೆ ನಡೆಸಿದರು.

ಈ ವೇಳೆ ಮುಟೇಶನ್‌ ಅರ್ಜಿಗಳು 113 ಪೆಂಡಿಂಗ್‌ ಇರುವುದು ಗಮನಕ್ಕೆ ಬರುತ್ತಲೇ ಕಂದಾಯ ಅಧಿಕಾರಿ ರಮೇಶ್‌ರನ್ನು ಪ್ರಶ್ನಿಸಿದರು. ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲಾ? ಎಂದು ಉತ್ತರಿಸುತ್ತಲೇ ಗರಂ ಆದ ಜಿಲ್ಲಾಧಿಕಾರಿ, ಇಷ್ಟೊಂದು ಜನ ಬಂದು ನಿಂತಿದ್ದಾರೆ. ಹೀಗಿದ್ದರೂ ಮುಟೇಶನ್‌ ಪೆಂಡಿಂಗ್‌ ಇಟ್ಟುಕೊಂಡು ಕುಳಿತಿದ್ದೀರಾ, ಗಮನಕ್ಕಿಲ್ಲ ಎಂದು ಹೇಳುತ್ತಿರಲ್ಲ, ನೀವೇನೂ ಮಿನಿಸ್ಟ್ರಾ? ಏನು ದೊಡ್ಡ ಆಫೀಸರಾ? ಮೊದಲು ಜನರ ಸಮಸ್ಯೆಗೆ ಸ್ಪಂದಿಸಿ ಅರ್ಜಿಗಳನ್ನು ವಿಲೇವಾರಿ ಮಾಡಿ ಎಂದು ಖಡಕ್ಕಾಗಿಯೇ ಸೂಚಿಸಿದರು.

ನಗರಸಭೆಯಲ್ಲಿ ಫಾರಂ- 3 ವಿಳಂಬ ಸಹಿಸುವುದಿಲ್ಲ. ಅರ್ಜಿ ಹಾಕಿದ ಕೂಡಲೇ ಆನ್‌ಲೈನ್‌ ಲಾಗಿನ್‌ ಮಾಡಿ, ದಾಖಲೆಗಳನ್ನು ಪರಿಶೀಲಿಸಿ ಅಂಚೆ ಮೂಲಕ ರವಾನಿಸಬೇಕು. ಒಂದು ವೇಳೆ, ದಾಖಲೆಗಳು ಸರಿ ಇಲ್ಲದಿದ್ದರೆ, ಸಂಬಧಿಸಿದವರಿಗೆ ಲಿಖಿತ ಉತ್ತರ ನೀಡಿ ಮರುಕಳುಹಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ಆಸ್ತಿ ಕರ ವಸೂಲಿ ಮಾಡುವ ಕೇಂದ್ರಕ್ಕೆ ತೆರಳಿದ ಅವರು, ಕರ ಪಾವತಿ ಮಾಡುವ ಸಮಯದಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು, ಮಧ್ಯವರ್ತಿಗಳಾಗಿ ಕೆಲಸ ಮಾಡಿ ಅವ್ಯವಹಾರ ಮಾಡಿದರೆ, ಪ್ರಕರಣ ದಾಖಲಿಸಿ ಕ್ರಮ ವಹಿಸಲಾಗುವುದು. ಯಾವುದೇ ಕಾರಣಕ್ಕೂ ಅವ್ಯವಹಾರ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ನಗರಸಭೆಯ ಆವರಣದಲ್ಲಿರುವ ಎಂ.ಪಿ. ಪ್ರಕಾಶ ಕಲಾಮಂದಿರ ಪರಿಶೀಲನೆ ನಡೆಸಿದ ಅವರು, ಪೌರಾಯುಕ್ತರು ಈ ಬಗ್ಗೆ ಪರಿಶೀಲನೆ ನಡೆಸಿ ಇದರ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದರು.

ಬೇರೆ ವಿಭಾಗಕ್ಕೆ ವರ್ಗ:

ಫಾರಂ ನಂ. 3ಯ ಬಹುತೇಕ ಅರ್ಜಿಗಳನ್ನು ಸಕಾರಣ ಇಲ್ಲದೇ ರಿಜೆಕ್ಟ್‌ ಮಾಡಿದ ಮಹಿಳಾ ಸಿಬ್ಬಂದಿ ಮೀನಾಕ್ಷಿ ಎಂಬವರನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. ಅವರನ್ನು ಕೂಡಲೇ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲು ಯೋಜನಾ ನಿರ್ದೇಶಕ ಈರಣ್ಣ ಬಿರಾದಾರ್‌ ಅವರಿಗೆ ಸೂಚಿಸಿದರು.

40 ದಿನದೊಳಗೆ ಫಾರಂ-3 ನೀಡಿ:

ನಗರದಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಿದ 40 ದಿನದೊಳಗೆ ಫಾರಂ- 3 ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ವಿನಾಕಾರಣ ವಿಳಂಬ ಮಾಡಿದರೆ ಕ್ರಿಮಿನಲ್‌ ಕೇಸ್‌ ಹಾಕಲಾವುದು ಎಂದು ಎಚ್ಚರಿಸಿದರು. ಸ್ವತಃ ತಾವೇ ಖುದ್ದು ಫಾರಂ- 3ಗೆ ಅರ್ಜಿ ಸಲ್ಲಿಸಿದ ವೃದ್ಧರೊಬ್ಬರಿಗೆ ಪರಿಶೀಲನೆ ನಡೆಸಿ, ಫಾರಂ- 3 ಪ್ರಮಾಣಪತ್ರ ನೀಡಿದರು.