ಸಿಎಂ ಹಿಂದುಳಿದವರಾಗಿದ್ದಕ್ಕೆ ಸನ್ಮಾನ ಬೇಡ ಎನ್ನುತ್ತಿರಾ?

| Published : Feb 01 2024, 02:01 AM IST

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್‌ ಅವರ ಹೆಸರಲ್ಲಿ ಭ್ರಷ್ಟಾಚಾರ ಮಾಡುವುದು ಎಷ್ಟು ಸರಿ? ಎಂದು ಶಾಸಕ ಸಿ.ಎಸ್‌. ನಾಡಗೌಡ ಅವರು ಮಾಜಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ನಾನು ಯಾವತ್ತಿಗೂ ಕೆಳಮಟ್ಟದ ರಾಜಕಾರಣ ಮಾಡಿಲ್ಲ. ಆದರೆ, ಇಂದು ಸಿದ್ದರಾಮಯ್ಯನವರ ಸಾಧನೆ ಏನು? ಅವರಿಗೇಕೆ ಪೌರ ಸನ್ಮಾನ ಎಂದು ಕೇಳುತ್ತಿರಲ್ಲ. ಅವರೊಬ್ಬ ಹಿಂದುಳಿದವರಾಗಿದ್ದಕ್ಕಾ ನೀವು ಹಾಗೇ ಹೇಳುತ್ತಿರುವುದೇ? ನೀವೊಬ್ಬ (ಸಿಎಂ ಸಿದ್ದರಾಮಯ್ಯ) ಹಿಂದುಳಿದವರಿದ್ದಿರಿ. ಅದಕ್ಕೆ ನಿಮಗೆ ಸನ್ಮಾನ ಮಾಡಲು ಬೇಡ ಎಂದು ಬಹಿರಂಗವಾಗಿ ಹೇಳಿಬಿಡಿ ಎಂದು ಬಿಜೆಪಿ ಮಾಜಿ ಶಾಸಕರಿಗೆ ಕಾಂಗ್ರೆಸ್‌ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಸವಾಲೆಸೆದರು.

ಪಟ್ಟಣಕ್ಕೆ ಫೆ.೨ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ವಿಬಿಸಿ ಹೈಸ್ಕೂಲ್‌ ಮೈದಾನದಲ್ಲಿ ಕಾರ್ಯಕ್ರಮದ ವೇದಿಕೆ ಪರಿಶೀಲಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ರಾಮಯ್ಯನವರು ಬೂದಿಹಾಳ ಪೀರಾಪೂರ ಏತ ನಿರಾವರಿ, ನಾಗರಬೆಟ್ಟ ಏತ ನೀರಾವರಿ ಹಾಗೂ ಆಲಮಟ್ಟಿ ಜಲಾಶಯದ ಎಎಲ್‌ಬಿಸಿ ಕಾಮಗಾರಿಗೆ ಅನುದಾನ ಕೊಟ್ಟಿದ್ದರಿಂದ ಇಂದು ರೈತರ ಬರಗಾಲದಲ್ಲೂ ಸಹಿತ ಅನುಕೂಲವಾಗಿದೆ. ಜೊತೆಗೆ ಐದು ಮಹತ್ತರವಾದ ಗ್ಯಾರಂಟಿಗಳನ್ನು ನೀಡುವ ಮೂಲಕ ಉತ್ತಮ ಆಡಳಿತ ನೀಡಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಆದರೆ, ಅವರಿಗೇಕೆ ಪೌರ ಸನ್ಮಾನ ಎಂದು ಕೇಳುತ್ತಿರಲ್ಲ ಎಂದು ಖಾರವಾಗಿ ನುಡಿದರು.

ತಾಲೂಕಿನ ಗರಸಂಗಿ ಗ್ರಾಮದಲ್ಲಿನ ನಿರ್ಮಿಸಿದ ಸಿಸಿ ರಸ್ತೆ ಸೇರಿದಂತೆ ಬಹುತೇಕ ಎಲ್ಲ ಗ್ರಾಮಗಳಲ್ಲಿ ನಿರ್ಮಿಸಿದ ರಸ್ತೆಗಳು ಸಂಪೂರ್ಣ ಗುಣಮಟ್ಟ ಕಳೆದುಕೊಂಡು ಕಳಪೆ ಮಟ್ಟದ್ದಾಗಿವೆ. ಹಿಂದಿನ ಶಾಸಕರು ₹೫೦೦- ೬೦೦ ಕೋಟಿಗಳ ವಿಶೇಷ ಅನುದಾನ ತಂದು ರಸ್ತೆ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುತ್ತಿರುದ್ದಾರೆ. ಅವರೇನಿರ್ಮಿಸಿದ ರಸ್ತೆಗಳ ಪರಿಸ್ಥಿತಿ ಹೇಗಿದೆ ಎಂಬುವುದನ್ನು ತಿರುಗಾಡಿ ನೋಡಿ ಎಂದ ಅವರು, ಈ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆಗೆ ತಾವು ಸಿದ್ದರಿದ್ದಿರಾ? ಹಾಗಿದ್ದರೆ ಸುಮ್ಮ ನೆ ಆರೋಪ ಮಾಡುವುದು ಸರಿಯಲ್ಲ. ಪ್ರಚಾರ ಪಡೆದುಕೊಳ್ಳಲು ದ್ವೇಷದ ರಾಜಕಾರಣ ಮಾಡುವುದನ್ನು ಕೈಬಿಟ್ಟು ಒಳ್ಳೆಯ ರಾಜಕಾರಣ ಮಾಡಲು ಮುಂದಾಗಿ ಎಂದರು.

ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಎಸ್‌ಇಪಿಎಸ್‌ಪಿ ಯೋಜನೆ ಹಣವನ್ನು ದುರುಪಯೋಗಪಡಿಸಿಕೊಂಡು ಆ ಸಮುದಾಯಕ್ಕೆ ಅನ್ಯಾಯ ಮಾಡಿದ್ದಿರಿ ಎಂದು ಗಂಭೀರ ಆರೋಪ ಮಾಡಿದ ಅವರು, ನನ್ನ ಅವಧಿಯಲ್ಲಿ ಎಲ್ಲ ವರ್ಗದವರಿಗೂ ಸಮಾನ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇನೆ. ಜೊತೆಗೆ ಮುದ್ದೇಬಿಹಾಳದಲ್ಲಿ ಪ್ರಪ್ರಥಮ ಬಾರಿ ಕಾಂಗ್ರೆಸ್‌ ಮುಖಂಡ ದಿ.ಶೃಂಗಾರಗೌಡರು ಹಾಗೂ ನಾನು ನಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಡಾ.ಬಿ.ಆರ್.ಅಂಬೇಡ್ಕರ್‌ ಮೂರ್ತಿ ಅನಾವರಣ ಮಾಡಿದ್ದೇವೆ ಎಂದು ಹೇಳಿದರು.

ಸದ್ಯ ಅದನ್ನು ಇನ್ನಷ್ಟು ಸುಂದರಗೊಳಿಸುವ ಪ್ರಯತ್ನ ಮಾಡಿರುವುದನ್ನು ನಾನು ಗೌರವಿಸುತ್ತೇನೆ. ನಾನೆಂದೂ ಅಂಬೇಡ್ಕರ್‌ ಅವರನ್ನು ಅಗೌರವದಿಂದ ಕಂಡಿಲ್ಲ. ಆದರೆ, ಡಾ.ಬಿ.ಆರ್.ಅಂಬೇಡ್ಕರ್‌ ಅವರ ಹೆಸರಲ್ಲಿ ಭ್ರಷ್ಟಾಚಾರ ಮಾಡುವುದು ಎಷ್ಟು ಸರಿ? ಯಾರು ಕೂಡ ಇಂತಹ ಕೆಲಸವನ್ನು ಒಪ್ಪಿಕೊಳ್ಳಬಾರದು. ಈ ಹಿಂದಿನ ಅವರದೇ ಬಿಜೆಪಿ ಸರ್ಕಾರ ಅಂಬೇಡ್ಕರ ಮೂರ್ತಿ ನಿರ್ಮಾಣಕ್ಕೆ ಅವಕಾಶ ಕೊಟ್ಟಿಲ್ಲ. ಹಣವೂ ಬಿಡುಗಡೆಗೊಳಿಸಿಲ್ಲ ಎಂಬುವುದು ಅಧಿವೇಶನದಲ್ಲಿಯೇ ಮಾಹಿತಿ ಕೊಟ್ಟಿದ್ದಾರೆ. ಅದರ ದಾಖಲೆ ಕೂಡ ನನ್ನ ಬಳಿ ಎಂದು ದಾಖಲೆ ತೋರಿಸಿ ಹೇಳಿದರು.

೨೦೧೩ರಿಂದ ೨೦೧೮ರವೆಗೆ ನನ್ನ ಅವಧಿಯಲ್ಲಿ ಸರ್ಕಾರದಿಂದ ಬಿಡುಗಡೆಗೊಳಿಸಿರುವ ಅನುದಾನ ಕಾಮಗಾರಿಗಳಿಗೆ ನೀವು ಉದ್ಘಾಟನೆ ಮಾಡಿಲ್ಲವೇನು? ಸರ್ಕಾರದ ಯೋಜನೆಗಳನ್ನು ಯಾರು ಆ ಅವಧಿಯಲ್ಲಿ ಅಧಿಕಾರದಲ್ಲಿರುತ್ತಾರೋ ಅವರು ಉದ್ಘಾಟನೆ ನೆರವೆರಿಸುತ್ತಾರೆ. ಸದ್ಯ ಮುಖ್ಯಮಂತ್ರಿಗಳ ಉದ್ಘಾಟನೆ ಮಾಡುತ್ತಿರುವ ಕಾಮಗಾರಿಗಳಲ್ಲಿ ನಮ್ಮ ಸರ್ಕಾರದ ಜೊತೆಗೆ ಹಿಂದಿನ ಅಧಿಕಾರದಲ್ಲಿಯ ಕೆಲವು ಮಾತ್ರ ಇರಬಹುದು. ಹಾಗಂತ ಏನು ಬೇಕಾದರೂ ಹೇಳಿದರೆ ನಡೆಯುದಿಲ್ಲ. ನಮಗೂ ರಾಜಕಾರಣ ಮಾಡಲು ಬರುತ್ತದೆ ಎಂದು ತಿಳಿಯಿರಿ ಎಂದು ಹೇಳಿದರು.

ಮುದ್ದೇಬಿಹಾಳದ ಜನ ತುಂಬಾ ಒಳ್ಳೆಯವರು ಮಾತ್ರವಲ್ಲ ಬುದ್ಧಿವಂತರಿದ್ದಾರೆ. ಸಹನಶೀಲರು. ಯಾರು ಎಷ್ಟೇ ಕಷ್ಟ ಕೊಟ್ಟರೂ ಮೌನದಿಂದ ಸ್ವೀಕರಿಸಿ ಚುನಾವಣೆಯ ವೇಳೆ ಮತಗಳ ಮೂಲಕ ನಮಗೆ ಬುದ್ಧಿ ಕಲಿಸುತ್ತಾರೆ. ಈ ಕಾರಣಕ್ಕಾಗಿಯೇ ಮತಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ. ಅವರ ಋಣ ಎಷ್ಟು ತೀರಿಸಿದರೂ ಸಾಲದು. ಈ ಮೂಲಕ ಎಲ್ಲ ಜನರಿಗೆ ಕೋಟಿ ಪ್ರಣಾಮ ಸಲ್ಲಿಸುತ್ತೇನೆ ಎಂದರು.

ಈ ಮೊದಲು ಕ್ರೀಡಾಂಗಣಕ್ಕೆ ನಾಲತವಾಡದ ದೇಶಮುಖರು ಭೂದಾನ ಮಾಡಿದ್ದಾರೆ. ಆಗ ನಾನು ಒಂದಿಷ್ಟು ಹಣವನ್ನು ತಂದು ಸ್ವಚ್ಛತೆ ಮಾಡಿಸಿ ಅಭಿವೃದ್ಧಿಪಡಿಸಿದ್ದೇನೆ. ಅಷ್ಟರಲ್ಲಿಯೇ ನಾನು ಅಧಿಕಾರ ಕಳೆದುಕೊಂಡೆ. ಮುಂಬರುವ ದಿನಗಳಲ್ಲಿ ಆ ಕ್ರೀಡಾಂಗಣವನ್ನು ನಿರ್ಮಿಸಲು ಶ್ರಮಿಸುತ್ತೇನೆ ಎಂದು ವಿವರಿಸಿದರು.

ಈ ವೇಳೆ ತಹಶೀಲ್ದಾರ ಬಲರಾಮ ಕಟ್ಟಿಮನಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ವೈ.ಎಚ್.ವಿಜಯಕರ, ಗುಡುದಪ್ಪ ಕಮರಿ, ರುದ್ರುಗೌಡ ಅಂಗಡಗೇರಿ ಸೇರಿದಂತೆ ಬಹಲವರು ಇದ್ದರು.