ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಶಾಸಕ ಮತ್ತು ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಪ್ರಸಕ್ತ ಅಧಿವೇಶನದಲ್ಲಿ ಹಲವಾರು ಸಚಿವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡಿದ್ದಾರೆ. ಇದೆ ವೇಳೆ ಮುದ್ದೇಬಿಹಾಳದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ರಸ್ತೆಗಳ ನಿರ್ಮಾಣ, ಮುಜರಾಯಿ ದೇವಾಲಯಗಳ ಅಭಿವೃದ್ಧಿಯಂತಹ ಹತ್ತು ಹಲವಾರು ಪ್ರಶ್ನೆಗಳನ್ನು ಕೇಳಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಕೂಡ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಶಾಸಕ ಮತ್ತು ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಪ್ರಸಕ್ತ ಅಧಿವೇಶನದಲ್ಲಿ ಹಲವಾರು ಸಚಿವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡಿದ್ದಾರೆ. ಇದೆ ವೇಳೆ ಮುದ್ದೇಬಿಹಾಳದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ರಸ್ತೆಗಳ ನಿರ್ಮಾಣ, ಮುಜರಾಯಿ ದೇವಾಲಯಗಳ ಅಭಿವೃದ್ಧಿಯಂತಹ ಹತ್ತು ಹಲವಾರು ಪ್ರಶ್ನೆಗಳನ್ನು ಕೇಳಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಕೂಡ ಮಾಡಿದ್ದಾರೆ.ಮುದ್ದೇಬಿಹಾಳ ತಾಲೂಕಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಲ್ಲದೆ ಇರುವುದರಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗುತ್ತಿದೆ. ಇಲ್ಲಿ ಸರ್ಕಾರಿ ಕಾಲೇಜು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು, ವಿಜಯಪುರ ಜಿಲ್ಲೆಯಲ್ಲಿ ಮೂರು ಖಾಸಗಿ, ಇಂಜಿನಿಯರಿಂಗ್, ಎರಡು ಖಾಸಗಿ ಆರ್ಕಿಟೆಕ್ ಇಂಜಿನಿಯರಿಂಗ್ ಕಾಲೇಜಿಗಳಿವೆ. ಹೀಗಾಗಿ ನೂತನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಉದ್ದೇಶವಿಲ್ಲ ಎಂದು ಉತ್ತರಿಸಿದರು.ಕ್ಷೇತ್ರದಲ್ಲಿ ಹಾಳಾಗಿರುವ ರಸ್ತೆಗಳ ಅಭಿವೃದ್ಧಿಗೆ ಪ್ರಸಕ್ತ ಆಯವ್ಯಯದಲ್ಲಿ ಎಷ್ಟು ಅನುದಾನ ನೀಡಲಾಗಿದೆ? ಕಾಮಗಾರಿ ಸ್ಥಿತಿಗತಿ ಹೇಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಸಚಿವರು, ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ₹300 ಕೋಟಿ ಅನುದಾನ ನೀಡಲಾಗಿದೆ. 11 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಒಂದು ಪೂರ್ಣ, ಒಂದು ಪ್ರಗತಿ, ಒಂದು ಅಂದಾಜು ತಯಾರಿಕೆ ಇನ್ನುಳಿದ ಎಂಟು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ ಎಂದು ಉತ್ತರಿಸಿದ್ದಾರೆ.ಕಳೆದ 3 ವರ್ಷಗಳ ಅವಧಿಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ದೇವಾಲಯಗಳಿಗೆ ಮುಜರಾಯಿ ಇಲಾಖೆಯಿಂದ ಎಷ್ಟು ಅನುದಾನ ಬಿಡುಗಡೆಯಾಗಿದೆ? ಮುಜರಾಯಿ ಇಲಾಖೆಗೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ದೇವಾಲಯಗಳು ಒಳಪಟ್ಟಿವೆ ಎಂದು ಶಾಸಕ ನಾಡಗೌಡ(ಅಪ್ಪಾಜಿ) ಅವರು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರಡ್ಡಿ ಅವರನ್ನು ಚುಕ್ಕೆ ಗುರುತಿನಡಿ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿರುವ ಸಚಿವರು, ಮೂರು ವರ್ಷಗಳಲ್ಲಿ ₹3.29 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿಯಲ್ಲಿ 151 ದೇವಾಲಯಗಳು ಮುಜರಾಯಿ ಇಲಾಖೆಗೆ ಒಳಪಡುತ್ತವೆ ಎಂದಿದ್ದಾರೆ.
ಮುದ್ದೇಬಿಹಾಳ ತಾಲೂಕಿನಲ್ಲಿ ಅಲ್ಪಸಂಖ್ಯಾತ ಮಹಿಳಾ ಕಾಲೇಜು ಸ್ಥಾಪನೆ ಅಗತ್ಯವಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಕೇಳಿದಾಗ, ಹೊಸದಾಗಿ ಕಾಲೇಜು ಮಂಜೂರು ಮಾಡಲು ಅಲ್ಪಸಂಖ್ಯಾತರ ಸಮುದಾಯದ ಜನಸಂಖ್ಯೆ ಜನಪ್ರತಿನಿಧಿಗಳ ಬೇಡಿಕೆ ಅನುಸಾರ ಸೂಕ್ತ ಪ್ರಸ್ತಾವನೆ ಪಡೆದು ಕ್ರಮವಹಿಸಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಇದೆ ವೇಳೆ ಭರವಸೆ ನೀಡಿದ್ದಾರೆ.ರಾಜ್ಯದಲ್ಲಿ ಹಾಗೂ ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡಲಾಗಿದೆ? ಇನ್ನೂ ಎಷ್ಟು ಕೊಳಚೆ ಪ್ರದೇಶವೆಂದು ಘೋಷಣೆ ಮಾಡಲು ಪ್ರಸ್ತಾವ ಸಲ್ಲಿಕೆಯಾಗಿವೆ? 2026-27ನೇ ಸಾಲಿನಲ್ಲಿ ಎಷ್ಟು ಅನುದಾನ ಮೀಸಲಿಡಲಾಗಿದೆ ಎಂದು ವಸತಿ ಸಚಿವರನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿರುವ ಸಚಿವರು, ರಾಜ್ಯದಲ್ಲಿ 2866 ಕೊಳಚೆ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಮುದ್ದೇಬಿಹಾಳದಲ್ಲಿ 6 ಹಾಗೂ ತಾಳಿಕೋಟೆ ಪಟ್ಟಣದಲ್ಲಿ 13 ಒಟ್ಟು 19 ಕೊಳಚೆ ಪ್ರದೇಶಗಳು ಘೋಷಣೆಯಾಗಿವೆ. ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿಯ ಮುದ್ದೇಬಿಹಾಳದ ಇಂದಿರಾನಗರ ಸರ್ವೆ ನಂ.1574, ಉಳಿದ ಭಾಗ (2) ಪಿಲೇಕಮ್ಮ ನಗರ ರಿ.ಸ.ನಂ.70/1 ಉಳಿದ ಭಾಗ (3) ಕೊಳಚೆ ಗೊಲ್ಲರ ಓಣಿ ರಿ.ಸ.ನಂ.49ಎ ಮತ್ತು ಬಿ ಉಳಿದ ಭಾಗ ಹಾಗೂ (4) ಆಶ್ರಯ ಕಾಲನಿ ಪ್ರದೇಶಗಳನ್ನು ಕೊಳಚೆ ಪ್ರದೇಶವೆಂದು ಘೋಷಿಸಲು ಅಗತ್ಯವಿರುವ ದಾಖಲೆಗಳನ್ನುಸಲ್ಲಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ 5.8.2024 ರಂದು ಹಾಗೂ ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ, ವಿಜಯಪುರ ಅವರಿಗೆ 15.9.2025 ರಂದು ಮಂಡಳಿ ವತಿಯಿಂದ ಪತ್ರ ಬರೆಯಲಾಗಿದೆ. 2026-27ನೇ ಸಾಲಿನಲ್ಲಿ ₹50 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.