ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಭೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ನಡೆಯಿತು. ಈ ಸಂದರ್ಭ 59ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಅಂಗವಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಅಭಿನಂದಿಸಲಾಯಿತು.

ಮಂಗಳೂರು: ಪ್ರಸ್ತುತ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಅಡಕೆ ಸಂಶೋಧನೆಗೆ ಮಾತ್ರ ಸೀಮಿತವಾಗಿದ್ದು, ಕರಿಮೆಣಸು, ಕಾಫಿ, ಕೋಕೋ, ರಬ್ಬರ್ ಸೇರಿದಂತೆ ಇತರ ಕೃಷಿ ಉತ್ಪನ್ನಗಳನ್ನೂ ಸಂಶೋಧನೆಯ ವ್ಯಾಪ್ತಿಗೆ ಸೇರಿಸುವ ಉದ್ದೇಶದಿಂದ ಟ್ರಸ್ಟ್ ಡೀಡ್‌ನಲ್ಲಿ ಅಗತ್ಯ ತಿದ್ದುಪಡಿ ಮಾಡುವ ಕುರಿತು ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ(ಎಆರ್‌ಡಿಎಫ್‌) ಸಭೆಯಲ್ಲಿ ನಿರ್ಧರಿಸಲಾಯಿತು

ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಭೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ನಡೆಯಿತು. ಈ ಸಂದರ್ಭ 59ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಅಂಗವಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಅಭಿನಂದಿಸಲಾಯಿತು.ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಕ್ಕೆ ಸರ್ಕಾರಿ ಮಟ್ಟದಲ್ಲಿ ಮನ್ನಣೆ ದೊರೆಯುವ ಉದ್ದೇಶದಿಂದ ಸಂಶೋಧನೆ ನಡೆಸುತ್ತಿರುವ ವಿಶ್ವವಿದ್ಯಾಲಯಗಳು ಅಥವಾ ಸರ್ಕಾರಿ ಇಲಾಖೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು, ಸಂಶೋಧನೆಗೆ ಅಗತ್ಯವಿರುವ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ ಹಾಗೂ ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳುವ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ತೀರ್ಮಾನಿಸಲಾಯಿತು. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಗತ್ಯ ಮಾಹಿತಿಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಮೆನೇಜಿಂಗ್ ಟ್ರಸ್ಟಿ ಹಾಗೂ ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಎಸ್. ಆರ್. ಮಾತನಾಡಿ, ಈ ಸಾಲಿನಲ್ಲಿ ಒಟ್ಟು 34 ಅಡಕೆ ಮಾದರಿಗಳು ಪರಿಶೀಲನೆಗಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಸುಂಕ ಇಲಾಖೆಯಿಂದ ಬಂದಿದ್ದು, ಇದು ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ದೊರೆಯುತ್ತಿರುವ ಮನ್ನಣೆಯ ದ್ಯೋತಕವಾಗಿದೆ ಎಂದು ತಿಳಿಸಿದರು.

ಕ್ಯಾಂಪ್ಕೊದ ಸಹಯೋಗದೊಂದಿಗೆ 2027ರಲ್ಲಿ ಆಯೋಜಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಅಡಕೆ ಸಮ್ಮೇಳನದ

ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಈ ಸಮ್ಮೇಳನದ ಆಯೋಜನೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ಟ್ರಸ್ಟಿಗಳಾದ ಕ್ಯಾಂಪ್ಕೊದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ಶಿವಮೊಗ್ಗ ಮ್ಯಾಂಪ್ಕೋಸ್‌ ಉಪಾಧ್ಯಕ್ಷ ಮಹೇಶ್ ಎಚ್. ಎಸ್., ಟಿಎಸ್‌ಎಸ್‌ ನಿರ್ದೇಶಕ ನರಸಿಂಹ ಹೆಗ್ಡೆ ಹಾಗೂ ತುಮ್ಕೋಸ್‌ ಚನ್ನಗಿರಿಯ ಅಧ್ಯಕ್ಷರ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಮಧು ಇದ್ದರು. ವಿಶೇಷ ಆಹ್ವಾನಿತರಾಗಿ ಡಾ. ವಿಘ್ನೇಶ್ವರ ವರ್ಮುಡಿ ಭಾಗವಹಿಸಿದ್ದರು.