ಸಾರಾಂಶ
ಶಿರಸಿ: ಅಡಕೆ ಆಮದು ಮತ್ತು ದರದ ಕುರಿತು ಕೆಲವೊಂದು ತಪ್ಪು ಮಾಹಿತಿ ಹರಿದಾಡುತ್ತಿದ್ದು, ಕೆಲ ವಿಷಯಗಳು ಸತ್ಯಕ್ಕೆ ದೂರವಾಗಿದೆ. ಸದಸ್ಯ ಗ್ರಾಹಕರು ಭಯಪಡುವ ಅಗತ್ಯವಿಲ್ಲ. ಅಡಕೆ ಬೆಳೆಗಾರರ ಪರವಾಗಿ ಟಿಎಸ್‌ಎಸ್ ನಿಲ್ಲುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲವೊಂದು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಲಂಕಾದಿಂದ ೫ ಲಕ್ಷ ಟನ್ ಅಡಕೆ ಅಕ್ರಮವಾಗಿ ಆಮದಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದರ ಕುರಿತು ಅಡಕೆ ಮಹಾಮಂಡಳದ ನಿಯೋಗವು ಕೇಂದ್ರ ಸರ್ಕಾರದ ವಾಣಿಜ್ಯ, ಕೃಷಿ ಮತ್ತು ಆರ್ಥಿಕ ಸಚಿವರನ್ನು ಭೇಟಿಯಾಗಿ ವಿಚಾರಿಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಅಡಕೆ ಅಕ್ರಮ ಆಮದು ಬಗ್ಗೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ವಿನಂತಿಸಿದ ತಕ್ಷಣ, ಗಡಿಯಲ್ಲಿ ಭದ್ರತೆ ಮತ್ತು ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಲು ಸಚಿವರು ಸೂಚನೆ ನೀಡಿದ್ದಾರೆ. ಅಡಕೆ ದರದ ಕುರಿತು ರೈತರು ಭಯಪಡುವ ಅವಶ್ಯಕತೆಯಿಲ್ಲ. ನಿಶ್ಚಿಂತೆಯಿಂದ ಇರಬೇಕು. ಕೆಲ ವದಂತಿಗಳಿಂದ ದರ ಇಳಿಮುಖವಾಗಲು ಕಾರಣವಿರಬಹುದು ಎಂದರು.ಗುಜರಾತ್, ರಾಜಕೋಟದಲ್ಲಿ ಟಿಎಸ್‌ಎಸ್ ವತಿಯಿಂದ ಅಡಕೆ ಡಿಪೋ ಆರಂಭ ಮಾಡಲಾಗಿದ್ದು, ಹೊರದೇಶದ ಅಡಕೆಗೆ ಮತ್ತು ನಮ್ಮ ದೇಶದ ಅಡಿಕೆಯ ಗುಣಮಟ್ಟದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ರೈತರು ಗುಣಮಟ್ಟದ ಅಡಕೆ ತಯಾರಿಕೆಗೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಶಿರಸಿಯ ಅಡಕೆಗೆ ಎಲ್ಲ ಸಮಯದಲ್ಲಿಯೂ ಬೇಡಿಕೆ ಇದೆ. ಆದ್ದರಿಂದ ರೈತರು ನಿಶ್ಚಿಂತೆಯಿಂದ ಇರಬೇಕು. ೩೬ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ೪೭ ಸಾವಿರ ಟನ್ ಅಡಕೆ ಬೆಳೆ ಬೆಳೆಯಲಾಗುತ್ತಿದ್ದು, ಕಳೆದ ವರ್ಷ ೯೧ ಸಾವಿರ ಕ್ವಿಂಟಲ್ ಅಡಕೆಯನ್ನು ಟಿಎಸ್‌ಎಸ್ ಖರೀದಿ ಮಾಡಿದೆ. ಈ ವರ್ಷ ಈಗಾಗಲೇ ೭೯ ಸಾವಿರ ಕ್ವಿಂಟಲ್ ಖರೀದಿಸಲಾಗಿದೆ. ಸದ್ಯ ೧೦ರಿಂದ ೧೨ ಸಾವಿರ ಕ್ವಿಂಟಲ್ ಅಡಕೆ ಮಾತ್ರ ದಾಸ್ತಾನಿದೆ. ರೈತರಿಗೆ ಉತ್ತಮ ದರ ಲಭಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಎನ್. ಭಟ್ಟ ತೋಟಿಮನೆ, ನಿರ್ದೇಶಕ ಗಣಪತಿ ಜೋಶಿ, ಪ್ರಭಾರಿ ವ್ಯವಸ್ಥಾಪಕ ವಿಜಯಾನಂದ ಭಟ್ಟ ಇದ್ದರು. ಸ್ಪಷ್ಟನೆ ನೀಡಿದ ಗೋಪಾಲಕೃಷ್ಣ ವೈದ್ಯಟಿಎಸ್ಎಸ್ ಮಾಜಿ ಅಧ್ಯಕ್ಷ ದಿ. ಶಾಂತಾರಾಮ ಹೆಗಡೆ ಅನಾರೋಗ್ಯದಿಂದ ಸಾಮ್ರಾಟ್ ಅತಿಥಿ ಗೃಹದಲ್ಲಿದ್ದಾಗ ಕುಟುಂಬಸ್ಥರಿಂದ ಬಾಡಿಗೆ ಹಣ ಪಡೆದುಕೊಳ್ಳಲಾಗಿದೆ. ಇದು ತಪ್ಪು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಗೋಪಾಲಕೃಷ್ಣ ವೈದ್ಯ ಉತ್ತರಿಸಿ, ಅವರ ಪುತ್ರ ನಮ್ಮ ಬಳಿ ಬಂದು ತಮ್ಮ ತಂದೆಯವರಿಗೆ ಒಳ್ಳೆಯ ವೈದ್ಯಕೀಯ ಸೇವೆಯ ಮೂಲಕ ಉತ್ತಮ ಶುಶ್ರೂಷೆ ನೀಡಿದ್ದೀರಿ. ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಾಡಿಗೆ ನೀಡುತ್ತೇವೆ ಎಂದು ಹೇಳಿ, ಹಣ ಪಾವತಿಸಿದ್ದಾರೆ. ನಾವಾಗಿಂದಲೇ ಕೇಳಿಲ್ಲ ಎಂದು ಗೋಪಾಲಕೃಷ್ಣ ವೈದ್ಯ ಸ್ಪಷ್ಟನೆ ನೀಡಿದರು.ತನಿಖೆ ಮುಗಿದ ಬಳಿಕ ಸದಸ್ಯರಿಗೆ ತಿಳಿಸುತ್ತೇವೆ
ಹೊಸ ಆಡಳಿತ ಮಂಡಳಿ ಅಽಕಾರ ವಹಿಸಿಕೊಂಡು ೬ ತಿಂಗಳು ಕಳೆಯಿತು. ಈಗಾಗಲೇ ೩ ಚಾರ್ಟೆಡ್ ಅಕೌಂಟೆಂಟ್ ತಂಡಗಳಿಂದ ಲೆಕ್ಕ ತಪಾಸಣೆ ನಡೆಯುತ್ತಿದೆ. ಸದ್ಯದಲ್ಲೇ ವರದಿ ನಮ್ಮ ಕೈ ಸೇರಲಿದೆ. ದೊಡ್ಡ ಪ್ರಮಾಣದಲ್ಲಿ ವ್ಯವಹಾರ ಇರುವುದರಿಂದ ಮಧ್ಯಂತರ ವರದಿಗೆ ವಿಳಂಬವಾಯಿತು. ವರದಿ ಬಂದ ಬಳಿಕ ಎಲ್ಲ ಅಂಶಗಳನ್ನು ಸದಸ್ಯರಿಗೆ ತಿಳಿಸುತ್ತೇವೆ. ಹೊಸ ಆಡಳಿತ ಮಂಡಳಿ ಬಂದ ನಂತರ ಪ್ರಭಾರಿ ವ್ಯವಸ್ಥಾಪಕರನ್ನಾಗಿ ವಿಜಯಾನಂದ ಭಟ್ಟರನ್ನು ನೇಮಕ ಮಾಡಲಾಗಿದೆ. ಆಡಿಟ್ ಮುಗಿದ ಬಳಿಕ ಇವರನ್ನು ಕಾಯಂ ಮಾಡಬೇಕೆ? ಬೇರೆಯನ್ನು ನೇಮಿಸಬೇಕೆ ಎಂಬುದನ್ನು ಆಡಳಿತ ಮಂಡಳಿ ತೀರ್ಮಾನ ಮಾಡುತ್ತದೆ ಎಂದರು.