ಗುತ್ತಿಗಾರಿನ ಸಹಕಾರಿ ಸಂಘದ ದೀನ್ ದಯಾಳ್ ರೈತ ಸಭಾಭವನದಲ್ಲಿ ಭಾ.ಕೃ.ಸಂ.ಪ. ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ಸಿ.ಪಿ.ಸಿ.ಆ‌ರ್.ಐ.), ಕಾಸರಗೋಡು ಮತ್ತು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಗುತ್ತಿಗಾರು ಆಶ್ರಯದಲ್ಲಿ "ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ "ದ ಉದ್ಘಾಟಿಸಿ ಮಾತನಾಡಿದರು.

ಸುಬ್ರಹ್ಮಣ್ಯ: ಅಡಕೆ ಬೆಳೆಗೆ ಇಂದು ವಿವಿಧ ಸಮಸ್ಯೆ ಇದೆ. ಈ ಸಮಸ್ಯೆಗಳ ಬಗ್ಗೆ ಕ್ರಿಯಾ ಯೋಜನೆಯ ಸಹಿತ ಚರ್ಚೆ ನಡೆಸಬೇಕಿದೆ. ಅಡಿಕೆಯ ವಿವಿಧ ರೋಗಗಳು, ಅಡಿಕೆಯ ಮಾರುಕಟ್ಟೆ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಡಿಕೆ ಬೆಳೆಯುವ ಪ್ರದೇಶದ ಶಾಸಕರನ್ನು ಸೇರಿಸಿಕೊಂಡು ಸಮಾಲೋಚನಾ ಸಭೆ ನಡೆಸಲಾಗುವುದು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.ಅವರು ಬುಧವಾರ ಗುತ್ತಿಗಾರಿನ ಸಹಕಾರಿ ಸಂಘದ ದೀನ್ ದಯಾಳ್ ರೈತ ಸಭಾಭವನದಲ್ಲಿ ಭಾ.ಕೃ.ಸಂ.ಪ. ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ಸಿ.ಪಿ.ಸಿ.ಆ‌ರ್.ಐ.), ಕಾಸರಗೋಡು ಮತ್ತು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಗುತ್ತಿಗಾರು ಆಶ್ರಯದಲ್ಲಿ "ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ "ದ ಉದ್ಘಾಟಿಸಿ ಮಾತನಾಡಿದರು.

ಅಡಕೆ ರೋಗ ನಿಯಂತ್ರಣದಲ್ಲಿ ವಿಜ್ಞಾನಿಗಳು ಈಗಾಗಲೇ ಮಾಡಿರುವ ಪ್ರಾತ್ಯಕ್ಷಿಕೆಯ ತೋಟದ ಫಲಿತಾಂಶದ ನಂತರ ಕ್ರಿಯಾ ಯೋಜನೆಯ ಅಗತ್ಯವಿದೆ. ಇದಕ್ಕಾಗಿ ಸಮುದಾಯದ ಸಹಭಾಗಿತ್ವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದರು. ಇಂದು ಕೃಷಿ ಸ್ಮಾರ್ಟ್‌ ಆಗಬೇಕಾಗಿದೆ. ವಿಜ್ಞಾನ-ವಿಜ್ಞಾನಿಗಳ ಸಲಹೆಯೂ ಅಗತ್ಯ ಇದೆ. ಈ ಮೂಲಕ ಸ್ಮಾರ್ಟ್‌ ಫಾರ್ಮರ್‌ ಆಗಲೇಬೇಕಾದ ಅಗತ್ಯವಿದೆ ಎಂದರು.ಕೃಷಿಕರು ರಾಸಾಯನಿಕ ಹಾಗೂ ನಕಲಿ ರಾಸಾಯನಿಕಗಳ ಬಗ್ಗೆಯೂ ಜಾಗೃತಿವಹಿಸಿಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಕೃಷಿಯ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಬೇಕು. ಅಡಿಕೆ ಹಾನಿಕಾರಕ, ಅಡಿಕೆಯ ವಿವಿಧ ರೋಗ ಹಾಗೂ ಮಾರುಕಟ್ಟೆ ಬಗ್ಗೆ ಗಮನಹರಿಸಿಕೊಂಡು ಭವಿಷ್ಯದಲ್ಲಿ ಮಿಶ್ರ ಬೆಳೆಯ ಕಡೆಗೂ ಗಮನಹರಿಸಬೇಕು, ಇಂದು ಕೃಷಿಯಲ್ಲಿ ಒಂದು ಹಂತ ಮುಂದೆ ಯೋಚಿಸುವುದು ಅನಿವಾರ್ಯವಾಗಿದೆ. ಅಡಿಕೆ ಬೆಳೆಗಾರರ ಜೊತೆ ಸದಾ ಇದ್ದೇನೆ ಎಂದು ಸಂಸದರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಿಪಿಸಿಆರ್‌ ಐ ನಿರ್ದೇಶಕ ಡಾ. ಕೆ.ಬಿ ಹೆಬ್ಬಾರ್ ಮಾತನಾಡಿ, ಅಡಕೆ ಬೆಳೆಗೆ ತಗುಲಿದ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಾಮೂಹಿಕವಾಗಿ ಕ್ರಮಗಳ ಅಗತ್ಯವಿದೆ. ಸಮುದಾಯಮಟ್ಟದಲ್ಲಿ ನಿಯಂತ್ರಣ ಕ್ರಮಗಳ ಅಳವಡಿಕೆ ಬೇಕಾಗಿದೆ. ಇದಕ್ಕಾಗಿ ಈಗಾಗಲೇ ಮಾದರಿ ತೋಟಗಳನ್ನು ಮಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ಇತರ ಕಡೆಯೂ ಕೃಷಿಕರು ಅಳವಡಿಕೆ ಮಾಡಿದರೆ ರೋಗ ನಿಯಂತ್ರಣ ಸಾಧ್ಯವಿದೆ. ಹೀಗಾಗಿ ಕೃಷಿಕರು-ಸಂಸ್ಥೆಗಳು ಹಾಗೂ ವಿಜ್ಞಾನಿಗಳು ಜೊತೆಯಾಗಿ ಕೆಲಸ ಮಾಡಬೇಕಾಗಿದೆ ಎಂದರು.ಸಿಪಿಸಿಆರ್‌ಐ ಕಾಸರಗೋಡು ಕ್ಯೂಆರ್‌ಟಿ ಅಧ್ಯಕ್ಷ ಡಾ.ಟಿ.ಜಾನಕಿರಾಮ್‌ ಮಾತನಾಡಿ, ಕಳೆದ 5 ವರ್ಷದಲ್ಲಿ ಸಿಪಿಸಿಆರ್‌ಐ ವಿಭಾಗದಲ್ಲಿ ಸಾಕಷ್ಟು ಕೆಲಸ ಆಗಿದೆ. ವಿವಿಧ ಹೊಸ ತಳಿಗಳೂ ರೈತರಿಗೆ ಲಭ್ಯವಾಗಿದೆ. ಈಗಲೂ ಎಲ್ಲರೂ ಒಂದಾಗಿ ರೋಗ ನಿಯಂತ್ರಣದಲ್ಲಿ ಹೋರಾಡಬೇಕಿದೆ ಎಂದರು.

ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಮಾತನಾಡಿ, ಅಡಕೆ ಬೆಳೆಯು ವಿವಿಧ ರೋಗಗಳಿಂದ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಹೀಗಾಗಿ ಅಡಿಕೆ ಬೆಳೆಗೆ ಸವಾಲು ಇದೆ ನಿಜ, ಇದನ್ನು ಎಲ್ಲರೂ ಸೇರಿ ಎದುರಿಸುವ ಮೂಲಕ ಕೃಷಿಕರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ, ಸಮುದಾಯದ ಜೊತೆ ಕ್ಯಾಂಪ್ಕೊ ಸದಾ ಇದೆ ಎಂದರು.ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ಅಖಿಲ ಭಾರತ ಅಡಿಕೆ ಬೆಳೆಗಾರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಮಾತನಾಡಿದರು. ವಿಜ್ಞಾನಿ ಡಾ.ವಿನಾಯಕ ಹೆಗ್ಡೆ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಕೃಷಿಕರಾದ ಸುಬ್ರಹ್ಮಣ್ಯ ಪ್ರಸಾದ್‌ ಚಣಿಲ ಹಾಗೂ ಗಿರೀಶ್‌ ಗೌಡ ನಡುಗಲ್ಲು ಅಭಿಪ್ರಾಯ ವ್ಯಕ್ತಪಡಿಸಿದರು. ವಿಜ್ಞಾನಿ ಡಾ.ಭವಿಷ್ಯ ಸ್ವಾಗತಿಸಿ ವಂದಿಸಿದರು.

ಬೆಳಗ್ಗೆ ಚಣಿಲದ ಎಲೆಚುಕ್ಕೆ ರೋಗ ನಿರ್ವಹಣಾ ಪ್ರಾತ್ಯಕ್ಷಿಕೆ ತೋಟದ ಸುಬ್ರಹ್ಮಣ್ಯ‌ಪ್ರಸಾದ್ ಅವರ ಕೃಷಿ ಕ್ಷೇತ್ರಕ್ಕೆ ಸಂಸದರು ಭೇಟಿ ನೀಡಿದರು. ಸಂಸದರ ಜೊತೆ ಇತರ ಪ್ರಮುಖರು ಇದ್ದರು.