ಭಾರತಕ್ಕೆ ನೇಪಾಳ ಮೂಲಕ ಅಡಕೆ ಪ್ರವೇಶ?: ಬೆಳೆಗಾರರಿಗೆ ತಲೆನೋವು

| Published : Oct 11 2024, 11:54 PM IST

ಭಾರತಕ್ಕೆ ನೇಪಾಳ ಮೂಲಕ ಅಡಕೆ ಪ್ರವೇಶ?: ಬೆಳೆಗಾರರಿಗೆ ತಲೆನೋವು
Share this Article
  • FB
  • TW
  • Linkdin
  • Email

ಸಾರಾಂಶ

ನೇಪಾಳ ಮೂಲಕ ಬರ್ಮಾ, ಇಂಡೋನೇಷಿಯಾದಿಂದ ಅಡಕೆ ಅಕ್ರಮವಾಗಿ ಭಾರತಕ್ಕೆ ಆಮದು ಆಗುವ ಆತಂಕ ಉಂಟಾಗಿದೆ. ಸಹಕಾರಿ ಸಂಘಗಳು, ಕೇಂದ್ರ ಸರ್ಕಾರ, ಜನಪ್ರತಿನಿಧಿಗಳ ಎಲ್ಲ ಪ್ರಯತ್ನಗಳ ಹೊರತೂ ಮುಕ್ತ ವ್ಯಾಪಾರ ನೀತಿ ನೆಪದಲ್ಲಿ ಭಾರತಕ್ಕೆ ವಿದೇಶಿ ಅಡಕೆ ಮುಕ್ತ ಪ್ರವೇಶವಾಗುತ್ತಿರುವುದು ಬೆಳೆಗಾರರಿಗೆ ತಲೆನೋವು ತಪ್ಪದಂತಾಗಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ನವರಾತ್ರಿ, ದೀಪಾವಳಿ ಹಬ್ಬದ ವೇಳೆ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಏರಿಕೆ ಸಮಯದಲ್ಲೇ ನೇಪಾಳ ಮೂಲಕ ಭಾರತಕ್ಕೆ ಅಡಕೆ ಆಮದು ಭೀತಿ ಎದುರಾಗಿದೆ. ಈಗಾಗಲೇ ಭೂತಾನ್‌ ಅಡಕೆ ಆಮದಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿದ ಬೆನ್ನಿಗೆ ನೆರೆಯ ರಾಷ್ಟ್ರ ನೇಪಾಳ ಕೂಡ ಅಡಕೆ ಆಮದು ಮತ್ತು ರಫ್ತು ಮೇಲಿನ ನಿರ್ಬಂಧ ಸಡಿಲಿಸಿದೆ.

ಈ ಮೂಲಕ ನೇಪಾಳ ಮೂಲಕ ಬರ್ಮಾ, ಇಂಡೋನೇಷಿಯಾದಿಂದ ಅಡಕೆ ಅಕ್ರಮವಾಗಿ ಭಾರತಕ್ಕೆ ಆಮದು ಆಗುವ ಆತಂಕ ಉಂಟಾಗಿದೆ. ಸಹಕಾರಿ ಸಂಘಗಳು, ಕೇಂದ್ರ ಸರ್ಕಾರ, ಜನಪ್ರತಿನಿಧಿಗಳ ಎಲ್ಲ ಪ್ರಯತ್ನಗಳ ಹೊರತೂ ಮುಕ್ತ ವ್ಯಾಪಾರ ನೀತಿ ನೆಪದಲ್ಲಿ ಭಾರತಕ್ಕೆ ವಿದೇಶಿ ಅಡಕೆ ಮುಕ್ತ ಪ್ರವೇಶವಾಗುತ್ತಿರುವುದು ಬೆಳೆಗಾರರಿಗೆ ತಲೆನೋವು ತಪ್ಪದಂತಾಗಿದೆ.

ಮುಕ್ತ ಮಾರುಕಟ್ಟೆ ನೀತಿ: ಕೇಂದ್ರ ಸರ್ಕಾರ ಭೂತಾನ್‌ನಿಂದ ಅಡಕೆ ಆಮದಿಗೆ ಮುಕ್ತ ಅವಕಾಶ ನೀಡಿದೆ. ಆದರೆ ಅದು ಎಳತು ಅಡಕೆಯಾಗಿದ್ದು, ಭಾರತದ ಮಾರುಕಟ್ಟೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎನ್ನುವುದು ಅಡಕೆ ಮಾರುಕಟ್ಟೆ ತಜ್ಞರ ಅಭಿಮತ.

ಪ್ರಸ್ತುತ ಇಲ್ಲಿ ಅಡಕೆ ಮಾರುಕಟ್ಟೆ ದರ ಸ್ಥಿರವಾಗಿದೆ. ಹೊಸ ಚಾಲಿ ಅಡಕೆಗೆ ಕಿಲೋಗೆ 390 ರು.ನಿಂದ 405 ರು. ಹಾಗೂ ಹಳೆ ಚಾಲಿ ಅಡಕೆಗೆ ಕೇಜಿಗೆ 480 ರು. ಇದೆ. ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಈಗ ಇರುವ ಹೊಸ ಅಡಕೆ ಹಳೆ ಅಡಕೆಯಾಗಲಿದ್ದು, ವರ್ಷಂಪ್ರತಿ ದೀಪಾವಳಿ ವೇಳೆಗೆ ಅಡಕೆ ಧಾರಣೆ ಏರಿಕೆಯ ನಿರೀಕ್ಷೆ ಇರುತ್ತದೆ. ಆದರೆ ಈ ಬಾರಿ ನೇಪಾಳದ ಮುಕ್ತ ಮಾರುಕಟ್ಟೆ ನೀತಿಯಿಂದಾಗಿ ಅವ್ಯಾಹತವಾಗಿ ಅಡಕೆ ಆಮದು ಭೀತಿಯನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ಅಡಕೆ ಬೆಳೆಗಾರರ ಕ್ಯಾಂಪ್ಕೋ ಸಂಸ್ಥೆ ಉಪಾಧ್ಯಕ್ಷ ಶಂ.ನಾ.ಖಂಡಿಗೆ.

ಪ್ರಸಕ್ತ ಭಾರತದಲ್ಲಿ 15 ರಿಂದ 16 ಲಕ್ಷ ಟನ್‌ ಅಡಕೆ ಉತ್ಪಾದನೆಯಾಗುತ್ತಿದೆ. ಅಂದಾಜಿನಂತೆ ಸುಮಾರು ಅಷ್ಟೇ ಪ್ರಮಾಣದಲ್ಲಿ ಅಡಕೆ ಅಮದು ಕೂಡ ಆಗುತ್ತಿದೆ. ಕೇಂದ್ರ ಸರ್ಕಾರ ಆಮದು ಮೇಲೆ ಕಿಲೋಗೆ 350 ರು. ಗರಿಷ್ಠ ದರ ನಿಗದಿಪಡಿಸಿದೆ. ಇದರ ಹೊರತೂ ಅಕ್ರಮವಾಗಿ ಅಡಕೆ ಹೇರಳ ಪ್ರಮಾಣದಲ್ಲಿ ಆಮದುಗೊಂಡರೆ ಮಾತ್ರ ಭಾರತದ ಅಡಕೆ ಮಾರುಕಟ್ಟೆ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುತ್ತಾರೆ ತಜ್ಞರು.ಭೂತಾನ್‌ ಅಡಕೆ ಭೀತಿ ಇಲ್ಲ?

ಮಾರುಕಟ್ಟೆ ತಜ್ಞರ ಪ್ರಕಾರ ಭೂತಾನ್‌ನಿಂದ ಅಡಕೆ ಭಾರತಕ್ಕೆ ಆಮದು ಆದರೂ ಧಾರಣೆ ಕುಸಿತಗೊಳ್ಳಲು. ಭೂತಾನ್‌ನಿಂದ ಎಳತು ಅಡಕೆ ಆಮದಿಗೆ ಅವಕಾಶ ನೀಡಲಾಗಿದೆ. ಎಳತು ಅಡಕೆ ಇಲ್ಲಿ ಉಪಯೋಗ ಇಲ್ಲ. ಗುಟ್ಕಾದಲ್ಲಿ ಎಳತು ಅಡಕೆ ಒಂದೊಮ್ಮೆ ಬಳಸಿದರೂ ಅದಕ್ಕೆ ಬಣ್ಣ ಮಿಶ್ರಣ ಮಾಡಿ ಕುಲಗೆಡಿಸುವುದರಿಂದ ಗುಟ್ಕಾ ಕಂಪನಿಗಳು ಗುಣಮಟ್ಟ ಕಾರಣಕ್ಕೆ ತಿರಸ್ಕರಿಸುವ ಸಂಭವವೇ ಜಾಸ್ತಿ. ಹಾಗಾಗಿ ಎಳತು ಅಡಕೆ ಆಮದು ಇಲ್ಲಿನ ಅಡಕೆ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರದು ಎಂದೇ ತರ್ಕಿಸಲಾಗುತ್ತಿದೆ. ಕರಿಗೋಟು, ಉಳ್ಳಿ ದರ ಕುಸಿತ:

ದೇಶೀಯ ಮಾರುಕಟ್ಟೆಯಲ್ಲಿ ಚಾಲಿ ಅಡಕೆಯ ಕೊನೆಯ ವಿಭಾಗವಾದ ಕರಿಗೋಟು, ಉಳ್ಳಿಗಡ್ಡಿಗೆ ವಿಪರೀತ ದರ ಇಳಿಕೆಯಾಗಿದೆ. ಕೇಜಿಗೆ 230 ರು.ನಿಂದ 250 ರು. ಇದ್ದ ದರ ಈಗ 100 ರು.ಗೆ ಇಳಿದಿದೆ. ಕರಿಗೋಟಿಗೆ ಬಣ್ಣ ಹಾಕಿ ಕೆಂಪಡಕೆ ಜೊತೆ ಕಲಬೆರಕೆ ಮಾಡಿ ಮಾರಾಟ ಮಾಡಿರುವುದು ಗುಟ್ಕಾ ಕಂಪನಿಗಳ ಕಣ್ಣು ಕೆಂಪಾಗಿಸಿದೆ. ಗುಣಮಟ್ಟ ಕಾರಣಕ್ಕೆ ಕರಿಗೋಟು, ಉಳ್ಳಿಗಡ್ಡಿಗೆ ಬೇಡಿಕೆಯೇ ಇಲ್ಲದಾಗಿದೆ. ಈ ಬಾರಿ ಹವಾಮಾನ ವೈಪರೀತ್ಯ ಹಾಗೂ ಕೊಳೆರೋಗ ಕಾರಣ ಎಳತು ಅಡಕೆ ಉದುರುತ್ತಿವೆ. ಕರಿಗೋಟು ಪ್ರಮಾಣವೂ ಜಾಸ್ತಿಯಾಗುವ ಸಂಭವ ಇದೆ. ಹೀಗಾದಲ್ಲಿ ಕರಿಗೋಟು ದರ ಏರಿಕೆಯಾಗುವುದು ಸಂಶಯ.ಶಿರಸಿಯಲ್ಲಿ ಧಾರಣೆ ಭಾರಿ ವ್ಯತ್ಯಾಸ

ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿ ಚಾಲಿ ಅಡಕೆ ಧಾರಣೆ ಸ್ಥಿರವಾಗಿದೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಅಡಕೆ ಬರುತ್ತಿದೆ. ಆದರೆ ಶಿರಸಿಯಲ್ಲಿ ಚಾಲಿ ಅಡಕೆ ಧಾರಣೆ ಬಹಳ ಕಡಿಮೆ ಇದೆ. ಅಡಕೆ ಆವಕ ಜಾಸ್ತಿಯಾಗಿರುವುದು ಹಾಗೂ ಗಣಮಟ್ಟ ಕಡಿಮೆಯಾಗಿರುವುದು ಕೂಡ ಧಾರಣೆ ಇಳಿಕೆಗೆ ಕಾರಣ ಎಂದು ಮಾರುಕಟ್ಟೆ ಮೂಲಗಳು ಹೇಳುತ್ತಿವೆ. ಪ್ರಸಕ್ತ ಮಂಗಳೂರಲ್ಲಿ ಹಾಲಿ ಅಡಕೆ ಕಿಲೋಗೆ 390 ರು.ನಿಂದ 405 ರು. ಇದ್ದರೆ, ಶಿರಸಿಯಲ್ಲಿ 350 ರು.ನಿಂದ 355 ರು. ಅಂದರೆ 55 ರು.ಗಳಷ್ಟು ಭಾರಿ ದರ ವ್ಯತ್ಯಾಸ ಇದೆ.

................

ಭೂತಾನ್‌ ಅಡಕೆ ಆಮದು ನೀತಿಯಿಂದ ಇಲ್ಲಿನ ಅಡಕೆ ಮೇಲೆ ಯಾವುದೇ ಪರಿಣಾಮ ಬೀರದು. ನೇಪಾಳದಿಂದ ಅಡಕೆ ಆಮದು ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಶೀಘ್ರವೇ ಮನವಿ ಸಲ್ಲಿಸಲಾಗುವುದು. ದೇಶದ ಗಡಿಭಾಗಗಳಿಂದ ಅಕ್ರಮ ಅಡಕೆ ನುಸುಳದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮತ್ತೊಮ್ಮೆ ಒತ್ತಾಯಿಸಲಾಗುವುದು. ಯಾವುದೇ ಕಾರಣಕ್ಕೂ ಅಡಕೆ ಧಾರಣೆ ಕುಸಿತಕ್ಕೆ ಅವಕಾಶ ನೀಡುವುದಿಲ್ಲ, ಬೆಳೆಗಾರರು ಭೀತಿ ಪಡಬೇಕಾಗಿಲ್ಲ.

-ಕಿಶೋರ್‌ ಕುಮಾರ್‌ ಕೊಡ್ಗಿ, ಅಧ್ಯಕ್ಷರು, ಕ್ಯಾಂಪ್ಕೋ, ಮಂಗಳೂರು