ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಅರಣ್ಯ ಮಂತ್ರಿಗಳು ಬೀದರ್‌ನಲ್ಲಿ ಕೂತು ದರ್ಬಾರ್ ಮಾಡದೇ ಕೂಡಲೇ ಮೂರು ಜಿಲ್ಲೆಗಳ ಶಾಸಕರ ಹಾಗೂ ಇಲಾಖೆ ಅಧಿಕಾರಿಗಳ ಸಭೆ ಕರೆದು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂದು ಶಾಸಕ ಎಚ್.ಕೆ. ಸುರೇಶ್ ಗುಡುಗಿದರು.ಕಾಡಾನೆಗಳ ದಾಳಿಯಿಂದ ಬೆಳೆ ಹಾಗೂ ಪ್ರಾಣಹಾನಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಕಾಫಿ ಹಾಗೂ ಇತರೆ ಬೆಳೆಗಾರರು ಮಂಗಳವಾರ ಅರೆಹಳ್ಳಿ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಿದರು.
ಉಸ್ತುವಾರಿ ಸಚಿವರ ಕಣ್ಣಿಗೆ ಕಾಣುತ್ತಿಲ್ಲ:ಈ ಸಂದರ್ಭದಲ್ಲಿ ಶಾಸಕ ಎಚ್.ಕೆ ಸುರೇಶ್ ಮಾತನಾಡಿ, ಕಾಡಾನೆ ದಾಳಿಯಿಂದ ಈ ಭಾಗದಲ್ಲಿ ಬೆಳೆ ಹಾಗೂ ಪ್ರಾಣಹಾನಿ ಹೆಚ್ಚಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜಿಲ್ಲಾ ಉಸ್ತುವಾರಿ ಸಚಿವರ ಕಣ್ಣಿಗೆ ಕಾಣುತ್ತಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಟುಸ್ ಪಟಾಕಿಗಳನ್ನು ಹಿಡಿದು ಮೋಜು ಮಸ್ತಿ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆಯವರಿಗೆ ಈಗಲೂ ಮಾನ ಮರ್ಯಾದೆ ಇದ್ದರೆ ತಮ್ಮ ಕೈಯಲ್ಲಿ ಆನೆ ಓಡಿಸೋಕೆ ಆಗಲ್ಲ ಎಂದು ಹೇಳಿ ಸಮವಸ್ತ್ರ ಕಳಚಿ ಕೆಲಸ ಬಿಟ್ಟು ಮನೆಗೆ ಹೋಗಿ, ನಮ್ಮ ರೈತರೇ ಇದಕ್ಕೊಂದು ಪರಿಹಾರ ಕಂಡುಕೊಳ್ಳುತ್ತಾರೆ. ಕಾಡಾನೆ ದಾಳಿಗೆ ಇಲ್ಲಿವರೆಗೆ 80 ಜನರು ಬಲಿಯಾಗಿದ್ದಾರೆ. ಮಂತ್ರಿಗೆ, ಮುಖ್ಯಮಂತ್ರಿಗೆ ಏನು ವರದಿ ಕೊಟ್ಟಿದ್ದೀರಿ. ಪ್ರತಿಭಟನೆಗೆ ಬರುವಂತೆ ಅಧಿಕಾರಿಗಳಿಗೆ ಕರೆ ಮಾಡಿದರೆ ಎರಡು ಗಂಟೆ ತಡವಾಗಿ ಬರುತ್ತೀರಿ. ನಾನು ಏನಾದರೂ ಮಾತನಾಡಿದರೆ ನನ್ನ ಫೋಟೋ ತೆಗೆದು ದೂರು ದಾಖಲಿಸುತ್ತಾರೆ. ನಾನು ಜನರ ಪ್ರತಿನಿಧಿ, ಹೆದರಿಸುವ ಹತ್ತಿಕ್ಕುವ ಕೆಲಸ ಮಾಡಬೇಡಿ. ಇಷ್ಟ ಇಲ್ಲ ಅಂದರೆ ಬಿಟ್ಟು ಹೋಗ್ತಾ ಇರಿ.. ನೀವು ಅರ್ಜಿ ಹಾಕಿ ಕೆಲಸಕ್ಕೆ ಬಂದಿರೋದು, ನಾವು ಬಾ ಅಂತಾ ಕರೆದಿಲ್ಲ ಎಂದು ಗುಟುರು ಹಾಕಿದರು.
ಸಭೆ ನಡೆಸದಿದ್ದರೆ ಹೋರಾಟ:ಕಾಡಾನೆಗಳ ಹಾವಳಿ ಸಕಲೇಶಪುರ ಹಾಗೂ ಬೇಲೂರು ಭಾಗಗಳಲ್ಲಿ ಹೆಚ್ಚಾಗಿದೆ. ಆದರೆ ಅರಣ್ಯ ಇಲಾಖೆಯ ಕಚೇರಿಗಳು ಮಾತ್ರ ಬೇಲೂರಿನಲ್ಲಿದೆ. ಇಲ್ಲಿ ಕಾಡುಪ್ರಾಣಿಗಳಿಂದ ಏನೇ ಅವಘಡ ಸಂಭವಿಸಿದರೂ ನೀವು ಅಲ್ಲಿಂದ ಬರುವ ಹೊತ್ತಿಗೆ ಇಲ್ಲಿ ಎಲ್ಲಾ ಮುಗಿದಿರುತ್ತದೆ. ಸತ್ತ ಮೇಲೆ ಬಂದು ನೀವು ಏನು ಮಾಡಲು ಸಾಧ್ಯ. 15 ಲಕ್ಷ ರು. ಪರಿಹಾರ ಕೊಡಬಹುದು ಜೀವ ಕೊಡಲು ನಿಮ್ಮ ಕೈಲಿ ಆಗುತ್ತಾ, ಇವತ್ತು ಕಾಡಾನೆಯಿಂದ ಸಾವನಪ್ಪಿದ ಮಗನ ತಾಯಿಗೆ ಪರಿಹಾರ ಹಣ ಕೊಡಲು ಹೋದಾಗ ಆ ಅಮ್ಮ ನನಗೆ ಪರಿಹಾರ ಬೇಡ ನಾನೇ ಇನ್ನು ಎರಡು ಮೂರು ದಿನದಲ್ಲಿ ಸಾಯುತ್ತೇನೆ ಎಂದು ಹೇಳಿದಾಗ ಕರುಳು ಕಿವಿಚಿದಂತಾಗಿದೆ ಆದರೆ, ನಿಮ್ಮಂತ ಎಮ್ಮೆ ಚರ್ಮದ ಅಧಿಕಾರಿಗಳಿಗೆ ಮಂತ್ರಿಗಳಿಗೆ ಇದು ತಿಳಿಯುವುದಿಲ್ಲ. ಇಷ್ಟೆಲ್ಲಾ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ನಿಮ್ಮ ಇಲಾಖೆಗೆ ನಾಚಿಕೆ ಆಗಲ್ವಾ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನೆರಡು ದಿನಗಳಲ್ಲಿ ಮೂರು ಜಿಲ್ಲೆಯ ಶಾಸಕರ ಸಭೆ ಕರೆಯದಿದ್ದರೆ ಇನ್ನು ಉಗ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಜನರಿಗಾಗಿ ಜೀವ ಕೊಡಲು ಸಿದ್ಧ:ಕಾಡಾನೆಗಳ ಹಾವಳಿಯಿಂದ ತತ್ತರಿಸುತ್ತಿರುವ ಬೆಳೆಗಾರರು ಹಾಗೂ ರೈತರು ಅರೇಹಳ್ಳಿ ಪಟ್ಟಣ ಬಂದ್ ಆಚರಿಸುವ ಮೂಲಕ ಸರ್ಕಾರದ ಗಮನಕ್ಕೆ ತಮ್ಮ ಸಮಸ್ಯೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಪೊಲೀಸ್ ಇಲಾಖೆಯವರು ಪ್ರತಿಭಟನೆಗೆ ಹೆಚ್ಚು ಜನರು ಭಾಗವಹಿಸದಂತೆ ತಡೆಯಲು ಅರೇಹಳ್ಳಿ ಪಟ್ಟಣಕ್ಕೆ ಬರುವ ನಾಲ್ಕು ಮಾರ್ಗಗಳಲ್ಲೂ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಿ ಬೇರೆ ಮಾರ್ಗಗಳಲ್ಲಿ ಕಳಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ರೈತರ ಪ್ರತಿಭಟನೆ ತಡೆಯುವ ಹಕ್ಕು ನಿಮಗಿಲ್ಲ. ಈಗಲೇ ಬ್ಯಾರಿಕೇಡ್ ತೆಗೆದರೆ ಒಳಿತು. ನಿಮ್ಮ ಈ ರೀತಿಯ ದೌರ್ಜನ್ಯ ಕಂಡಾಗ ಸುಮ್ಮನೆ ಕೂತು ನೋಡುವವನು ನಾನಲ್ಲ, ನಾನು ಜನ ಸೇವಕ ಅವರಿಗಾಗಿ ಜೀವ ಕೊಡಲು ಸಿದ್ಧ ಎಂದು ಹೇಳಿದರು.
ಅರಣ್ಯ ಸಂರಕ್ಷಣಾಧಿಕಾರಿ ಏಳುಕುಂಡಲು, ಉಪ ಅರಣ್ಯ ಅಧಿಕಾರಿ ಸೌರಭ್ ಕುಮಾರ್, ಸಹನ ಕುಮಾರ್ ಮಾತನಾಡಿ, ಇದೇ 27ರಂದು ಮೂರು ಜಿಲ್ಲೆಗಳ ಶಾಸಕರು ಎಲಿಫೆಂಟ್ ಟಾಸ್ಕ್‌ಫೋರ್ಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಆನೆಗಳ ತೆಲುಗು ಕಾರ್ಯಾಚರಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಕಾಫಿ ಬೆಳೆಗಾರರ ಸಂಘ ರೈತ ಸಂಘ ಹಾಗೂ ಇತರ ಸಂಘಸಂಸ್ಥೆಗಳು ಬಂದಿಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ಅರೇಹಳ್ಳಿ ಪಟ್ಟಣದ ಅಂಗಡಿ ಮುಂಗಟ್ಟುಗಳ ಬಾಗಿಲು ಸಂಪೂರ್ಣ ಮುಚ್ಚಲಾಗಿತ್ತು. ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಡಿವೈಎಸ್ಪಿ ಲೋಕೇಶ್, ತಹಸೀಲ್ದಾರ್ ಮಮತಾ ಎಂ, ರೈತ ಸಂಘ, ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಒಕ್ಕೂಟ, ಭೂಮಿಪುತ್ರ ಸಂಘ ಸೇರಿದಂತೆ ವಿವಿಧ ಸಂಘಸಂಸ್ಥೆ ಅಧ್ಯಕ್ಷರು, ಮುಖಂಡರು ಅರಣ್ಯಾಧಿಕಾರಿಗಳು, ಆರಕ್ಷಕ ಸಿಬ್ಬಂದಿ ಹಾಜರಿದ್ದರು.* ಬಾಕ್ಸ್‌ನ್ಯೂಸ್:
ಜನರ ಜೀವಗಳನ್ನು 15 ಲಕ್ಷಕ್ಕೆ ಒತ್ತೆ ಇಟ್ಟಿದ್ದಾರೆಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಸಕಲೇಶಪುರ, ಬೇಲೂರು ತಾಲೂಕಿನಲ್ಲಿ ಈಗಾಗಲೇ 80 ಜನ ಅಮಾಯಕರು ಆನೆ ದಾಳಿಗೆ ತುತ್ತಾಗಿದ್ದಾರೆ. ಇಷ್ಟಾದರೂ ಸರ್ಕಾರಕ್ಕಾಗಲಿ, ಅರಣ್ಯ ಸಚಿವರಿಗಾಗಲಿ, ಇಲಾಖೆಯ ಅಧಿಕಾರಿಗಳಿಗಾಗಲಿ ಈ ಬಗ್ಗೆ ಕನಿಕರ ಬಂದಿಲ್ಲ. ತೋಟದ ಕೆಲಸಗಾರರು, ಮಾಲೀಕರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಬೇಲೂರು ಸಕಲೇಶಪುರದಲ್ಲಿ ಜನರ ಜೀವಗಳನ್ನು 15 ಲಕ್ಷಕ್ಕೆ ಅರಣ್ಯ ಇಲಾಖೆಯವರು ಒತ್ತೆ ಇಟ್ಟಿದ್ದಾರೆ. ತಾವು ಮತ್ತು ಶಾಸಕ ಎಚ್. ಕೆ. ಸುರೇಶ್ ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಿ ಪರಿಹಾರ ಸಿಗದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.