ಸಾರಾಂಶ
ಗುರುವಾರದಂದು ಸಂಜೆ 5 ಗಂಟೆಗೆ ಪೂಜಾ ಕಾರ್ಯಗಳು ಪ್ರಾರಂಭಗೊಂಡು, 7 ಗಂಟೆಗೆ ಮಹಾಪೂಜೆ ನಡೆಯಿತು. ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ವಿವಿಧ ಪೂಜೆಗಳು ನಡೆದವು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಅರೆಕಾಡು ಬಳಂಜಿಗೆರೆಯ ಐದ್ರೋಡಮ್ಮ (ಚಾಮುಂಡೇಶ್ವರಿ) ದೇವಾಲಯದ 16ನೇ ವರ್ಷದ ದೀಪಾವಳಿ ಹಬ್ಬದ ವಾರ್ಷಿಕೋತ್ಸವ ಗುರುವಾರ ಮತ್ತು ಶುಕ್ರವಾರ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು.ಗುರುವಾರದಂದು ಸಂಜೆ 5 ಗಂಟೆಗೆ ಪೂಜಾ ಕಾರ್ಯಗಳು ಪ್ರಾರಂಭಗೊಂಡು, 7 ಗಂಟೆಗೆ ಮಹಾಪೂಜೆ ನಡೆಯಿತು. ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ವಿವಿಧ ಪೂಜೆಗಳು ನಡೆದವು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ಸಿದ್ದಾಪುರ ನೆಲ್ಯಹುದಿಕೇರಿ ಅರೆಕಾಡು ಮರಗೋಡು ಒಂಟಿಯಂಗಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ತಾವು ಹರಕೆಯೊತ್ತ ಕಾಣಿಕೆಗಳನ್ನು ನೀಡಿ ದೇವರ ದರ್ಶನ ಪಡೆದರು.
ಮಡಿಕೇರಿ ಶಾಸಕ ಮಂತರ್ ಗೌಡ ದೇವರ ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ 16 ವರ್ಷದಿಂದ ಚಾಮುಂಡೇಶ್ವರಿ ದೇವಿಯನ್ನು ಇಲ್ಲಿ ಪೂಜಿಸುತ್ತಾ ಬರುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿನ ಉತ್ಸವಕ್ಕೆ ಆಗಮಿಸುತ್ತಾರೆ. ದೇವಾಲಯಕ್ಕೆ ಸ್ಥಳದ ಕೊರತೆಯಿರುವುದಾಗಿ ಆಡಳಿತ ಮಂಡಳಿ ತಿಳಿಸಿದ್ದು, ಸಮೀಪದ ಜಾಗ ಖಾಸಗಿ ಸಂಸ್ಥೆಗೆ ಸೇರಿದ್ದು, ಅವರಲ್ಲಿ ಮಾತುಕತೆ ನಡೆಸಿ ದೇವಾಲಯಕ್ಕೆ ಜಾಗ ಒದಗಿಸಲು ಪ್ರಯತ್ನಿಸಲಾಗುವುದು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೂಡ ದೇವಾಸ್ಥಾನದ ಅಭಿವೃದ್ಧಿಗೆ ನೀಡಲಾಗುವುದೆಂದರು.ಈ ಸಂದರ್ಭ ದೇವಾಲಯದ ಅಧ್ಯಕ್ಷ ರವಿ, ಪ್ರಮುಖರಾದ ರಾಜನ್, ಜಯಣ್ಣ, ಹರ್ಷ ಮಂಜು, ಆನಂದ್ ರಘು, ದೇವಾಲಯದ ಆರ್ಚಕ ರಾಕೇಶ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಇದ್ದರು.