ತಾಲೂಕಿನ ಅರೇಮಲ್ಲೇನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಿಲ್ಲೆಗೆ ಮಾದರಿಯಾದ ಸಹಕಾರ ಸಂಘವಾಗಿದೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಕೊಡಗೀಹಳ್ಳಿ ಸಿದ್ದಲಿಂಗಪ್ಪ ಸಂತಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಅರೇಮಲ್ಲೇನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಿಲ್ಲೆಗೆ ಮಾದರಿಯಾದ ಸಹಕಾರ ಸಂಘವಾಗಿದೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಕೊಡಗೀಹಳ್ಳಿ ಸಿದ್ದಲಿಂಗಪ್ಪ ಸಂತಸ ವ್ಯಕ್ತಪಡಿಸಿದರು.ಅರೇಮಲ್ಲೇನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 25-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಈ ಸಂಘವು ತಾಲೂಕಿನಲ್ಲೇ ಮೊಟ್ಟ ಮೊದಲ ಗಣಕೀಕೃತ ಸಂಘವಾಗಿದೆ. ಎಲ್ಲಾ ವಹಿವಾಟುಗಳು ಡಿಜಿಟಲೀಕರಣವಾಗಿದೆ. ಸಂಘದ ಸದಸ್ಯರಿಗೆ ಉತ್ತಮ ಸೇವೆ ನೀಡಿದೆ. ಜನರ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲೆಂದು ಪ್ರಥಮವಾಗಿ ಎಟಿಎಂ ನ್ನು ಸಹ ಸ್ಥಾಪಿಸಿ ಇತರೆಯವರಿಗೆ ಮಾದರಿಯಾಗಿದೆ ಎಂದರು. ಉತ್ತಮ ವಹಿವಾಟು ನಡೆಸುತ್ತಿರುವ ಸಹಕಾರ ಸಂಘದ ಯಶಸ್ಸಿಗೆ ಕಾರಣವಾಗಿರುವ ಎಲ್ಲಾ ಪದಾದಿಕಾರಿಗಳನ್ನು ಅವರು ಅಭಿನಂದಿಸಿದರು.
ಸಂಘದ ಅಧ್ಯಕ್ಷ ಕೆಂಪೇಗೌಡರು ಮಾತನಾಡಿ, ತಮ್ಮ ಸಂಘ ಪ್ರಾರಂಭದ ದಿನದಿಂದಲೂ ಸಂಘದ ಸದಸ್ಯರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ತಮ್ಮ ಸಂಘದಲ್ಲಿ ಸಾಲ ಪಡೆದವರು ಪ್ರಾಮಾಣಿಕವಾಗಿ ಸಾಲವನ್ನು ಹಿಂತಿರುಗಿಸುತ್ತಿದ್ದಾರೆ. ಜನ ಸಾಮಾನ್ಯರು ಠೇವಣಿ ಹಣವನ್ನು ತಮ್ಮ ಸಹಕಾರ ಸಂಘದಲ್ಲೇ ಇಟ್ಟಲ್ಲಿ ಮತ್ತಷ್ಟು ರೈತರಿಗೆ ನೆರವಾಗಲು ಸಹಕಾರಿ ಆಗಲಿದೆ ಎಂದರು.ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರ್ ತಮ್ಮ ಸಂಘವು 6.85 ಕೋಟಿ ಸಾಲವನ್ನು ಸಂಘದ ಸದಸ್ಯರಿಗೆ ನೀಡಿದೆ. 3.19 ಕೋಟಿ ಠೇವಣಿಯನ್ನು ಹೊಂದಿದೆ. 8.99 ಲಕ್ಷ ಲಾಭದಲ್ಲಿದೆ ಎಂದು ಸಭೆಗೆ ತಿಳಿಸಿದರು.
ತಮ್ಮ ಸಂಘದ ನಿರ್ದೇಶಕರಾದ ಚಲುವೇಗೌಡರ ಮಗಳು ಯಮುನಾ ಪಿಯುಸಿ ಯಲ್ಲಿ ಶೇಕಡಾ 94.33 ಅಂಕಗಳಿಸಿದ ಹಿನ್ನೆಲೆಯಲ್ಲಿ ಅವರ ಪೋಷಕರನ್ನು ಗೌರವಿಸಲಾಯಿತು. ಈ ವೇಳೆ ಸಂಘದ ಉಪಾಧ್ಯಕ್ಷೆ ಕಮಲಮ್ಮ, ನಿರ್ದೇಶಕರಾದ ಚಲುವೇಗೌಡ, ಬಿ.ಎಸ್.ಯೋಗಾನಂದ್, ಬಿ.ಜೆ.ಶ್ರೀಧರ್, ಆದಿಶೇಷ, ಕೆ.ಬಿ.ಮಂಜಣ್ಣ, ಬಿ.ಸಿ.ಗಿರೀಶ್, ಬಿ.ಮಹಲಿಂಗಯ್ಯ, ಬಿ.ಕೆ.ಗಿರೀಶ್, ವಿಶಾಲಾಕ್ಷಿ, ಅನಿತಾ, ಸಿಡಿಓ ಆದಿನಾಥ ಕಣಕವಾಡಿ, ಮೇಲ್ವಿಚಾರಕರಾದ ಕೆ.ಎಚ್.ಹರೀಶ್, ಎಂ.ವಿ.ಭರತ್ ಉಪಸ್ಥಿತರಿದ್ದರು.