ಸಾರಾಂಶ
- ಎಸ್‌ಎಸ್ ಲೇಔಟ್‌ನ ರಾಘವೇಂದ್ರ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಭಾನುವಾರ ಘಟನೆ
- ಯುವತಿ ಕುಟುಂಬ ಸದಸ್ಯರು ಸಹ ಪರೀಕ್ಷಾ ಕೇಂದ್ರ ಬಳಿ ಬಂದು ವಾಗ್ವಾದ- ಅ.26, 27ರಂದು ಆಯೋಜಿಸಿದ್ದ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿ ಪರೀಕ್ಷೆ
- ಎಎಸ್‌ಪಿ ವಿಜಯಕುಮಾರ ಸಂತೋಷ್ ಜತೆ ಕೂಡ ಪರೀಕ್ಷಾರ್ಥಿ ಹಠ ಪ್ರದರ್ಶನ- ಅಂತಿಮವಾಗಿ ಎಎಸ್‌ಪಿ ಸೂಚನೆಗೆ ಮಣಿದು ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆದ ಯುವತಿ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಅ.26 ಮತ್ತು 27ರಂದು 5 ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರಿ ಹುದ್ದೆ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಿತು. ಆದರೆ, ಭಾನುವಾರ ಪರೀಕ್ಷೆ ಬರೆಯಲು ಬಂದಿದ್ದ ಯುವತಿಯೊಬ್ಬಳು ಹಿಜಾಬ್ ತೆಗೆಯಲು ಒಪ್ಪದೇ, ಪೊಲೀಸರ ಜೊತೆಗೆ ತೀವ್ರ ವಾಗ್ವಾದ ಮಾಡಿದ ಘಟನೆ ಎಸ್.ಎಸ್. ಲೇಔಟ್‌ನ ರಾಘವೇಂದ್ರ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.ನಗರದ ಎಸ್.ಎಸ್. ಲೇಔಟ್‌ನ ರಾಘವೇಂದ್ರ ಕಾಲೇಜಿನಲ್ಲಿ ಭಾನುವಾರ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ಹಿಜಾಬ್ ಧರಿಸಿ, ಪರೀಕ್ಷೆ ಬರೆಯಲು ಬಂದಿದ್ದ ಯುವತಿಗೆ ಹಿಜಾಬ್ ತೆಗೆಯಲು ಕೇಂದ್ರದ ಬಳಿ ಪೊಲೀಸರು ಹೇಳಿದ್ದಾರೆ. ಆದರೂ, ತಾನು ಹಿಜಾಬ್ ತೆಗೆಯುವುದಿಲ್ಲ ಎಂದು ಆಕೆ ಪಟ್ಟುಹಿಡಿದು, ವಾಗ್ವಾದ ನಡೆಸಿದ್ದಾಳೆ.
ಹಿಜಾಬ್ ತೆಗೆಯುವುದಿಲ್ಲ ಎಂದು ಪರೀಕ್ಷಾರ್ಥಿ ನಿರಾಕರಿಸಿದಾಗ, ಹಿಜಾಬ್ ತೆಗೆಯದೇ ಪರೀಕ್ಷಾ ಕೇಂದ್ರದೊಳಗೆ ಬಿಡುವುದಿಲ್ಲವೆಂದು ಪೊಲೀಸರು ಸಹ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ವೇಳೆ ಯುವತಿ ಕುಟುಂಬ ಸದಸ್ಯರು ಸಹ ಪರೀಕ್ಷಾ ಕೇಂದ್ರದ ಬಳಿ ಬಂದು, ಪೊಲೀಸರ ಜೊತೆಗೆ ವಾಗ್ದಾದ ನಡೆಸಿದರು.ವಿಷಯ ತಿಳಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ್, ಪರೀಕ್ಷಾ ಪ್ರಾಧಿಕಾರದ ಸೂಚನೆಯಂತೆ ಹಿಜಾಬ್ ಧರಿಸಲು ಅವಕಾಶ ಇಲ್ಲ. ಯಾವುದೇ ಅಭ್ಯರ್ಥಿ, ಪರೀಕ್ಷಾರ್ಥಿಗಳು ನಿಯಮಗಳನ್ನು ಪಾಲಿಸಬೇಕು. ಹಿಜಾಬ್ ಧರಿಸಿದರೆ ಕೇಂದ್ರದೊಳಗೆ ಪ್ರವೇಶ ನೀಡುವುದಿಲ್ಲ ಎಂದು ಪರೀಕ್ಷಾ ನಿಯಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಂತಿಮವಾಗಿ ಪರೀಕ್ಷಾರ್ಥಿ ಯುವತಿ ಹಿಜಾಬ್ ತೆಗೆದು, ಪರೀಕ್ಷೆ ಬರೆದಿದ್ದಾಳೆ ಎಂದು ತಿಳಿದುಬಂದಿದೆ.
- - - (ಸಾಂದರ್ಭಿಕ ಚಿತ್ರ)