ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಮತಕ್ಷೇತ್ರದ ಪಾಶ್ಚಾಪುರ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಮೊಹರಂ ನಿಮಿತ್ತ 6 ತಾಬೂತ್ ಹಾಗೂ ಬೇಬಿ ಫಾತಿಮಾ ದೇವರು (ಮುಲಾಖಾತ್) ಭೇಟಿಯ ಸಣ್ಣ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದ ಘಟನೆ ನಡೆದಿದೆ.ಮೊಹರಂ ನಿಮಿತ್ತ ಐದು ದಿನ ತಾಬೂತ್‌ಗಳನ್ನು ಪೂಜಿಸಲಾಗುತ್ತದೆ. ಕೊನೆಯ ದಿನ ಮುಲಾಖಾತ್ ನಡೆದು ಹೊಳೆಯಲ್ಲಿ ಸಂಜೆ ವಿಸರ್ಜನೆ ಕಾರ್ಯಕ್ರಮ ನೆರವೇರುತ್ತದೆ. ಅದರಂತೆ ಪಾಶ್ಚಾಪುರದಲ್ಲಿ ಮಂಗಳವಾರ ಬೆಳಗ್ಗೆ ತಾಬೂತ್‌ಗಳು ಹಾಗೂ ಬೇಬಿ ಫಾತಿಮಾ ಭೇಟಿ (ಮುಲಾಖಾತ್) ಕಾರ್ಯಕ್ರಮ ನಡೆದಿತ್ತು. ಮೆರವಣಿಯಲ್ಲಿ ತರುತ್ತಿದ್ದ ವೇಳೆ ಬೇಬಿ ಫಾತಿಮಾಗಿಂತ ಮಗ ಹಸನ್ ದೇವರು ಮುಂದೆ ಸಾಗಿದ್ದರಿಂದ ಕೆಲ ಮುಸ್ಲಿಮರು ಇದು ಧರ್ಮಕ್ಕೆ ವಿರುದ್ಧವಾದ ಆಚರಣೆ. ತಾಯಿ ಬೇಬಿ ಫಾತಿಮಾಗಿಂತ ಮಗ ಹಸನ್ ದೇವರನ್ನು ಮುಂದೆ ತೆಗೆದುಕೊಂಡು ಹೋಗಿದ್ದು ತಪ್ಪು ಎಂದು ತಕರಾರು ತೆಗೆದರು.ಈ ವೇಳೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೊಲೀಸರು ಮಧ್ಯ ಪ್ರವೇಶಿಸಿ ಜನರನ್ನು ಶಾಂತಗೊಳಿಸಲು ಯತ್ನಿಸಿದರೂ ಕೇಳದಿದ್ದಾಗ ಲಾಠಿ ಬೀಸಿ ಚದುರಿಸಿದರು. ಬಳಿಕ ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ತಾಯಿ ಬೇಬಿ ಫಾತಿಮಾ ದೇವರನ್ನು ಮುಂದೆ ತಂದು ಮುಲಾಖಾತ್ ನಡೆಯಿತು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಸಂಜೆ ನಡೆಯುವ ಅಂತಿಮ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಯಮಕನಮರಡಿ ಪಿಎಸ್‌ಐ ಎಸ್.ಕೆ. ಮಣ್ಣಿಕೇರಿ ನೇತೃತ್ವದಲ್ಲಿ ಪೊಲೀಸರ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಬಂದೋ ಬಸ್ತ್ ಒದಗಿಸಿದರು. ಸಂಜೆಯ ಮೆರವಣಿಗೆ ಶಾಂತಿಯುತವಾಗಿ ನಡೆದು ರಾತ್ರಿ ವೇಳೆಗೆ ದೇವರು ಹೊಳೆಗೆ ಹೋಗುವ ಕಾರ್ಯಕ್ರಮ ಸಾಂಗವಾಗಿ ನಡೆದು ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.