ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಜ.15ಕ್ಕೆ ನಗರಸಭೆ ಟೆಂಡರ್ ಕರೆಯಲಾಗಿದ್ದ ಕಾಮಗಾರಿಗೆ ಸಂಬಂದಿಸಿದಂತೆ ಪಟ್ಟಣ ಠಾಣೆಯ ಪಿಎಸ್ಐ ವರ್ಷ ಮತ್ತು ನಗರಸಭೆ ಸದಸ್ಯ ಜಿ.ಪಿ. ಶಿವಕುಮಾರ್ ನಡುವೆ ಜಟಾಪಟಿ ನಡೆದಿದೆ.ಈ ಪ್ರಕರಣ ದಾಖಲಾದ ಬೆಳವಣಿಗೆ ಬೆನ್ನಲ್ಲೆ ಜಿ.ಪಿ.ಶಿವಕುಮಾರ್ ಪಿಎಸ್ಐ ವರ್ತನೆ, ಜನಪ್ರತಿನಿಧಿಗಳ ವಿರುದ್ಧ ಲಘು ಪದ ಬಳಕೆ ಖಂಡಿಸಿ ವಿಡಿಯೋ ಸಮೇತ ದಕ್ಷಿಣ ವಲಯ ಐಜಿಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. 10ನೇ ವಾರ್ಡ್‌ನಲ್ಲಿ ಬಾಕಿ ಉಳಿದಿದ್ದ ರಸ್ತೆ, ಚರಂಡಿ ಕಾಮಗಾರಿ ನಡೆಸುವ ವೇಳೆ ಕೆಲವರಿಂದ ಆಕ್ಷೇಪ ಕಾಮಗಾರಿಗೆ ಬಂದ ವೇಳೆ ಜ.11ರಂದು ಕಾಮಗಾರಿ ಸ್ಥಗಿತಗೊಳಿಸುವಂತೆ ಪಿಎಸ್ಐ ವರ್ಷ ಸ್ಥಳಕ್ಕೆ ಆಗಮಿಸಿ ಸೂಚಿಸಿ ತೆರಳಿದ್ದರು, ಬಳಿಕವೂ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆ ಸ್ಥಳಕ್ಕಾಗಮಿಸಿ ಕಾಮಗಾರಿ ನಡೆಸುವ ಜೆಸಿಬಿ ಚಾಲಕನ ವಿರುದ್ಧ ಲಘುಪದ ಬಳಸಿದ್ದರು ಎನ್ನಲಾಗದೆ.
ಈ ವೇಳೆ ನಗರಸಭೆ ಸದಸ್ಯ ಶಿವಕುಮಾರ್ ಮತ್ತು ಪಿಎಸ್‌ಐ ವರ್ಷ ನಡುವೆ ವಾಕ್ಸಮರ ನಡೆದಿತ್ತು. ಬಳಿಕ ಇಲ್ಲಿನ ವಾಸಿ ಲೋಕೇಶ್ ಎಂಬವರು ತಮ್ಮ ಸ್ಥಳಕ್ಕೆ ನಗರಸಭೆ ಸದಸ್ಯ ಶಿವಕುಮಾರ್ ಆಗಮಿಸಿ ಅತಿಕ್ರಮ ಪ್ರವೇಶಿಸಿ ಶೆಡ್ ತೆರವುಗೊಳಿಸಿದ್ದಾರೆಂದು ದೂರು ನೀಡಿದ ಹಿನ್ನೆಲೆ ಜಿ.ಪಿ. ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತಮ್ಮ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಜಿ.ಪಿ. ಶಿವಕುಮಾರ್ ಲಿಖಿತ ರೂಪದಲ್ಲಿ ಪಿಎಸ್‌ಐ ವರ್ಷ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ.ದೂರಿನಲ್ಲೆನಿದೆ?:ವರ್ಷ ಅವರು ಲಘುವಾಗಿ ಜೆಸಿಬಿ ಚಾಲಕನ ವಿರುದ್ಧ, ನಗರಸಭೆ ಆಯುಕ್ತರು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ವಿರುದ್ಧ ಕೆಟ್ಟಪದ ಬಳಸಿದ್ದಾರೆ, ನಾನು ಜನಪ್ರತಿನಿಧಿ ಎಂದರೂ ಸಹಾ ಲಘು ಪದಬಳಿಸಿ ನಿಂದಿಸಿದ್ದಾರೆ. ಅವರನ್ನು ಕೂಡಲೆ ಅಮಾನತುಗೊಳಿಸಿ ಬಳಿಕ ಬೇರೆಡೆ ವರ್ಗಾವಣೆಗೊಳಿಸಬೇಕು, ಸಾರ್ವಜನಿಕರ ಜೊತೆ ಇವರ ವರ್ತನೆ ಎಲ್ಲೆಮೀರಿದ್ದು ಈ ಸಂಬಂಧ ಪರಿಶೀಲಿಸಬೇಕು ಎಂದು ಎಸ್ಪಿ ಹಾಗೂ ಐಜಿಪಿಯವರಿಗೆ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ದೂರಿನ ಜೊತೆ ಪಿಎಸ್‌ಐ ಸಂಭಾಷಿಸಿರುವ ಲಘುಪದದ ಕುರಿತ ಆಡಿಯೋ ತುಣುಕುಗಳ ಪೈನ್ ಡ್ರೈವ್ ಅನ್ನು ಉಲ್ಲೇಖಿಸಿ ನೀಡಿದ್ದಾರೆ.