ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುತನ್ನ ಜೊತೆಯಲ್ಲಿದ್ದವರ ಪ್ರಾಣ ರಕ್ಷಿಸಲು ಮದ ಬಂದ ಕಾಡಾನೆಯೊಂದಿಗೆ ವೀರಾವೇಶದಿಂದ ಹೋರಾಡಿ ತನ್ನ ಪ್ರಾಣವನ್ನೇ ಅರ್ಪಿಸಿದ ಅರ್ಜುನ ಆನೆಗೆ ಹುತಾತ್ಮ ಪಟ್ಟ ನೀಡುವುದರೊಂದಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ಆಗ್ರಹ ವ್ಯಕ್ತವಾಯಿತು.ಅರ್ಜುನ ಆನೆ ಮೃತಪಟ್ಟು ಬುಧವಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರು ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಎಂಜಿನಿಯರ್ ಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ಅರ್ಜುನ ಮರೆಯುವುದೆಂತು ನಿನ್ನ ಕಾರ್ಯಕ್ರಮದಲ್ಲಿ ಈ ಕುರಿತು ಸರ್ಕಾರವನ್ನು ಒತ್ತಾಯಿಸಲಾಯಿತು.ಕಾಡಾನೆ ಸೆರೆ ಕಾರ್ಯಚರಣೆ ಕೈ ಬಿಟ್ಟು ಹಿಂತಿರುಗುತ್ತಿದ್ದಾಗ ದಿಢೀರಾಗಿ ಮದ ಬಂದ ಕಾಡಾನೆ ದಾಳಿ ಮಾಡಿದೆ. ಈ ವೇಳೆ ಅಕಾಸ್ಮಿಕವಾಗಿ ಅರಿವಳಿಕೆ ತಗುಲಿ ಪ್ರಜ್ಞೆ ತಪ್ಪಿದ ಪ್ರಶಾಂತ ಆನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡುತ್ತಿತ್ತು. ಕಾಡಾನೆ ದಾಳಿಯಿಂದ ಭಾರೀ ಅನಾಹುತು ಸಂಭವಿಸುವ ಸಾಧ್ಯತೆ ಇತ್ತು. ಈ ಸಂದರ್ಭ ಅರ್ಜುನ ಆನೆ ಏಕಾಂಗಿಯಾಗಿ ಹೋರಾಡಿ ಎಲ್ಲರ ಜೀವ ಉಳಿಸಿದೆ. ಸಿಬ್ಬಂದಿ, ಅಧಿಕಾರಿಗಳು ಸೇವೆಯ ಸಂದರ್ಭದಲ್ಲಿ ಕೊನೆಯುಸಿರೆಳೆದರೆ ಅವರಿಗೆ ಹುತಾತ್ಮ ಪಟ್ಟ ನೀಡಲಾಗುತ್ತಿದೆ. ಅರ್ಜುನ ಕೂಡ ಸರ್ಕಾರಿ ನೌಕರ. ಆದರೆ, ಆತನಿಗೆ ಹುತಾತ್ಮ ಪಟ್ಟ ನೀಡುವುದಿರಲಿ, ಆತನ ವರ್ಷದ ನೆನಪು ಕೂಡ ಆಚರಿಸದೆ ಇಲಾಖೆ ಹಾಗೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜುನನಿಗೆ ಹುತಾತ್ಮ ಪಟ್ಟ ನೀಡಿ, ಅರಣ್ಯ ಇಲಾಖೆಯ ಹುತಾತ್ಮತರ ದಿನ ಆತನ ಹೆಸರನ್ನು ಕೂಡ ಓದಬೇಕು. ಮೈಸೂರಿನಲ್ಲಿ ಅರ್ಜುನನ ಸ್ಮಾರಕ ನಿರ್ಮಾಣ ಮಾಡಬೇಕು. ಬೀದಿಯೊಂದಕ್ಕೆ ಅಥವಾ ಅರಮನೆಯ ಭಾಗದಲ್ಲಿ ಅರ್ಜುನನ ಹೆಸರು ಇಡಬೇಕು. ಕಾಡಾನೆ ಸೆರೆ ಕಾರ್ಯಾಚರಣೆಯ ಹಳೆಯ ವಿಧಾನವನ್ನು ಬದಲಯಿಸಿ ವೈಜ್ಞಾನಿಕವಾಗಿ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ಸಭಿಕರ ಪರವಾಗಿ ಮೈಸೂರು ಕಲ್ಚರಲ್ ಅಸೋಸಿಯೇಶನ್ ಸಂಚಾಲಕ ಐತಿಚಂಡ ರಮೇಶ್ ಉತ್ತಪ್ಪ ನಿರ್ಣಯ ಮಂಡಿಸಿದರು.ಅಸೋಸಿಯೇಶನ್ ಅಧ್ಯಕ್ಷ ಎ.ಪಿ. ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಐಎಫ್ಎಸ್ ಅಧಿಕಾರಿ ಟಿ. ಬಾಲಚಂದ್ರ ಮಾತನಾಡಿ, ದೇಶದ ಯಾವುದೇ ರಾಜ್ಯದಲ್ಲಿ ಹುಲಿ, ಆನೆ ಬಂದರೆ ಕರ್ನಾಟಕ ಸಂಪರ್ಕಿಸುತ್ತಾರೆ. ಬೇರೆ ರಾಜ್ಯಗಳಿಗೆ ಆನೆಗಳನ್ನು ಕೊಟ್ಟ ಹೆಗ್ಗಳಿಕೆ ನಮ್ಮದು. ಅಂತೆಯೇ ನಮ್ಮಲ್ಲಿ ಸರ್ಕಾರಿ ಸಿಬ್ಬಂದಿಯಂತೆ ಪ್ರತೀ ಆನೆಗೆ ಸೇವಾ ವಿವರ ನಿರ್ವಹಣೆ ಮಾಡಲಾಗುತ್ತದೆ. ನಿವೃತ್ತಿ ನಂತರ ಪಿಂಚಿಣಿ ಕೊಡುವ ವ್ಯವಸ್ಥೆ ಇದೆ. ಇದೇ ರೀತಿ ಸೇವೆಯಲ್ಲಿ ಮೃತಪಟ್ಟ ಅರ್ಜುನನಿಗೆ ಹುತಾತ್ಮ ಪಟ್ಟ ನೀಡುವುದು ಸಮಂಜಸ ಎಂದರು.ಕಸಾಪ ನಗರಾಧ್ಯಕ್ಷ ಕೆ.ಎಸ್. ಶಿವರಾಮ್ ಮಾತನಾಡಿ, ಅರ್ಜುನನ ನೆನಪು ಶಾಶ್ವತ ಆಗಿಡುವಂತೆ ಮೈಸೂರು ಕಲ್ಚರಲ್ ಅಸೋಸಿಯೇಶನ್ ಬೇಡಿಕೆಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು. ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗುವುದು. ಇದೊಂದು ಉತ್ತಮವಾದ ಕಾರ್ಯ ಎಂದು ಪ್ರಶಂಸಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಆನೆ ಡಾಕ್ಟರ್ ಎಂದೇ ಪ್ರಸಿದ್ದಿಯಾದ ಪಶುವೈದ್ಯಾಧಿಕಾರಿ ಡಾ. ನಾಗರಾಜ್, ಅರಣ್ಯ ಇಲಾಖೆಯ ನನ್ನ 21 ವರ್ಷ ಸೇವೆಯಲ್ಲಿ 85 ಆನೆ ಸೆರೆ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಅದರಲ್ಲಿ 2014 ರಲ್ಲಿ ಹಾಸನ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 22 ಆನೆ ಸೆರೆ ಹಿಡಿಯಲಾಗಿದೆ. ಈ ಎಲ್ಲಾ ಕಾರ್ಯಚರಣೆಯನ್ನೂ ನಿರ್ಭಯದಿಂದ ಕೈಗೊಳ್ಳಲು ಬೆನ್ನೆಲುಬಾಗಿ ಅರ್ಜುನ ಆನೆ ನಿಂತಿದ್ದ. 2012 ರಲ್ಲಿ ಬಲರಾಮ ಬದಲಿಗೆ ಅರ್ಜುನನ್ನು ಅಂಬಾರಿ ಆನೆಯಾಗಿ ಆಯ್ಕೆ ಮಾಡಿದ್ದೆ ರೋಚಕ ಕಥೆಯಾಗಿದೆ. ಮುಂಗೋಪಿಯಾಗಿದ್ದ ಆತನನ್ನು ಮೈಕಟ್ಟು, ಅಣೆ, ರಾಜ ನಡಿಗೆಯಿಂದ ಮನಸೋತು ಆತನನ್ನು ಅಂಬಾರಿ ಆನೆಯಾಗಿ ಆಯ್ಕೆ ಮಾಡಲಾಯಿತು ಎಂದು ಅವರು ಸ್ಮರಿಸಿದರು.ಅರ್ಜುನನ ಮಾವುತರಾಗಿದ್ದ ದೊಡ್ಡಮಾಸ್ತಿ ಅವರ ಮಗ ಮಹೇಶ್ ಅವರನ್ನೂ ಸನ್ಮಾನಿಸಲಾಯಿತು.