ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಜರುಗಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯು ಭಾನುವಾರ ಜರುಗಿತು.ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಆವರಣದಲ್ಲಿನ ಯುದ್ಧ ಸ್ಮಾರಕಕ್ಕೆ ಮೇಜರ್ ಜನರಲ್ ಕಾಳೆಂಗಡ ಸಿ. ಕಾರ್ಯಪ್ಪ (ನಿವೃತ್ತ), ಏರ್ ಮಾರ್ಷಲ್ ನಂದಾ ಕಾರ್ಯಪ್ಪ(ನಿ), ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಗ್ರೂಪ್ ಕ್ಯಾಪ್ಟನ್ ಮನು ಭೀಮಯ್ಯ(ನಿ), ಏರ್ ಕಮಾಂಡರ್ ದೇವಯ್ಯ(ನಿ), ಲೆ.ಕರ್ನಲ್ ಕಾವೇರಪ್ಪ(ನಿ), ಕರ್ನಲ್ ನಾಚಪ್ಪ (ನಿ), ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಬಿ.ಆರ್.ಶೆಟ್ಟಿ, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ನಿವೃತ್ತ ಸೈನಾಧಿಕಾರಿಗಳು, ಎನ್‍ಸಿಸಿ ವಿದ್ಯಾರ್ಥಿಗಳು ಇತರರು ಯುದ್ಧ ಸ್ಮಾರಕಕ್ಕೆ ಪುಷ್ಪ ಗುಚ್ಛವಿರಿಸಿ, ಗೌರವ ನಮನ ಸಲ್ಲಿಸಿದರು.
ಕರ್ತವ್ಯ ಪಾಲನೆ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ ಯೋಧರ ಸ್ಮರಣಾರ್ಥ ಎರಡು ನಿಮಿಷಗಳ ಕಾಲ ಮೌನಾಚರಿಸಲಾಯಿತು. ಪೊಲೀಸ್ ತಂಡದವರು ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿದರು. ಮೇ.ಜ. ಕೆ.ಸಿ.ಕಾರ್ಯಪ್ಪ(ನಿ) ಅವರು ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಿದರು.ಪೊಲೀಸ್ ಇಲಾಖೆಯ ಎಆರ್‍ಎಸ್‍ಐ ತಂಡದ ಚೆನ್ನಕೇಶವ ಮತ್ತು ಪೊಲೀಸರು ಗೌರವ ವಂದನೆ ನಡೆಸಿಕೊಟ್ಟರು. ಹಾಗೆಯೇ ಪೊಲೀಸ್ ಬ್ಯಾಂಡ್ ತಂಡದವರು ಪೊಲೀಸ್ ವಾದ್ಯದೊಂದಿಗೆ ಗೌರವ ನಮನ ಸಲ್ಲಿಸಿದರು. ಮಾಜಿ ಸೈನಿಕರು, ಪೊಲೀಸರು, ಎನ್‍ಸಿಸಿ ವಿದ್ಯಾರ್ಥಿಗಳು, ಇತರರು ಗೌರವ ಸಲ್ಲಿಸಿದರು
ಬಳಿಕ ಮಾತನಾಡಿದ ಮೇ.ಜ.,ಕೆ.ಸಿ.ಕಾರ್ಯಪ್ಪ ಅವರು ರಾಷ್ಟ್ರದಲ್ಲಿ ಸೇನೆಗೆ ಸೇರುವವರಲ್ಲಿ ಪಂಜಾಬ್ ಪ್ರಥಮ ಸ್ಥಾನದಲ್ಲಿ, ರಾಜ್ಯದಲ್ಲಿ ಕೊಡಗು ಜಿಲ್ಲೆ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.ಈ ಹಿಂದೆ ಕೊಡಗು ಜಿಲ್ಲೆಯಿಂದ ಸೇನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಆಗುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಸೇನೆಗೆ ಸೇರ್ಪಡೆ ಆಗುವವರ ಸಂಖ್ಯೆ ಕಡಿಮೆ ಆಗಿದೆ ಎಂದು ಮೇ.ಜ., ಕೆ.ಸಿ.ಕಾರ್ಯಪ್ಪ ಅವರು ಹೇಳಿದರು.
ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರುವಂತಾಗಬೇಕು ಎಂದು ಅವರು ಕರೆ ನೀಡಿದರು.