ಹವಾಮಾನ ಇಲಾಖೆ ಮೇ ಅಂತ್ಯದಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಈ ಅವಧಿಯಲ್ಲಿ ಕುಡಿಯುಲು ನೀರಿನ ಸಮಸ್ಯೆಯಾಗದ ರೀತಿಯಲ್ಲಿ ಅಧಿಕಾರಿಗಳು ಸಮರೋಪಾದಿಯಲ್ಲಿ ತಾಲೂಕಿನ ಮೂಲೆಮೂಲೆಯ ಪ್ರತಿ ಗ್ರಾಮಗಳಲ್ಲಿ ವ್ಯವಸ್ಥೆ ಮಾಡಬೇಕು. ರೈತರಿಗೆ ಕೃಷಿ ಚಟುವಟಿಕೆಗೆ ಅಗತ್ಯವಿರುವ ಗೊಬ್ಬರ ಔಷದಿಗಳನ್ನು ನಿಗದಿತ ಸಮಯಕ್ಕೆ ಒದಗಿಸಬೇಕು ಎಂದು ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಹವಾಮಾನ ಇಲಾಖೆ ಮೇ ಅಂತ್ಯದಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಈ ಅವಧಿಯಲ್ಲಿ ಕುಡಿಯುಲು ನೀರಿನ ಸಮಸ್ಯೆಯಾಗದ ರೀತಿಯಲ್ಲಿ ಅಧಿಕಾರಿಗಳು ಸಮರೋಪಾದಿಯಲ್ಲಿ ತಾಲೂಕಿನ ಮೂಲೆಮೂಲೆಯ ಪ್ರತಿ ಗ್ರಾಮಗಳಲ್ಲಿ ವ್ಯವಸ್ಥೆ ಮಾಡಬೇಕು. ರೈತರಿಗೆ ಕೃಷಿ ಚಟುವಟಿಕೆಗೆ ಅಗತ್ಯವಿರುವ ಗೊಬ್ಬರ ಔಷದಿಗಳನ್ನು ನಿಗದಿತ ಸಮಯಕ್ಕೆ ಒದಗಿಸಬೇಕು ಎಂದು ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾ.ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸಮಸ್ಯೆಯಾಗದಂತೆ, ರೈತರು ಬೇಸಿಗೆ ಬೆಳೆಯಲು ಅನುಕೂಲವಾಗುವಂತೆ ಶಾಶ್ವತ ನೀರಾವರಿ ಯೋಜನೆ ಮಾಡಲಾಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರು ಕೇಳಿಬರುತ್ತಿದೆ. ಇದಕ್ಕೆ ಅವಕಾಶ ನೀಡದಂತೆ ತುರ್ತು ಕ್ರಮ ಕೈಗೊಳ್ಳಬೇಕು. ಮೇ ತಿಂಗಳ ಅಂತ್ಯದಲ್ಲಿ ಮುಂಗಾರು ಆರಂಭವಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ರಸ ಗೊಬ್ಬರ ಕಾಳಸಂತೆಗಳಲ್ಲಿ ಮಾರಾಟವಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಮಾರ್ಚ್‌ ಅಂತ್ಯದಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ತಾಲೂಕಿನ ಹೊಸೂರು ಹೋಬಳಿ ಅರಳಿಹಳ್ಳಿ ಮತ್ತು ಜಕ್ಕಿನಕೊಪ್ಪ ಗ್ರಾಮದಲ್ಲಿ ಅಂದಾಜು 50 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ನೆಲಕಚ್ಚಿದ್ದು ಈ ಸಂಬಂಧ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ರೈತರ ಪಟ್ಟಿಯೊಂದಿಗೆ ಅಂತಿಮ ವರದಿಯನ್ನು ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಬಗ್ಗೆ ಹೆಚ್ಚಿನ ಕಾಳಜಿಯಿಂದ ಸಕಾಲಕ್ಕೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.ಕೇಂದ್ರ ಸರ್ಕಾರದ ಆದೇಶದಂತೆ ರೈತರ ಪಹಣಿಗೆ ಎಫ್‌ಐಡಿ ಮೂಲಕ ಗೊಬ್ಬರ ವಿತರಿಸಲಾಗುವುದು ಎಂದು ತಿಳಿಸಿದರು.

ಕೆಡಿಪಿ ಸದಸ್ಯ ನಾಗರಾಜ್ ಗೌಡ ಮಾತನಾಡಿ, ತಾಲೂಕಿನ ಬಸವನಂದಿಹಳ್ಳಿ ಕೆರೆ ಕೋಡಿ ಒಡೆದು ಎರಡು ವರ್ಷ ಕಳೆದಿದ್ದು ಸರಿಪಡಿಸಲು ಸರ್ಕಾರದಿಂದ ಆದೇಶ ಬಂದಿದ್ದರೂ ಅಧಿಕಾರಿಗಳು ಪ್ರತಿ ಸಭೆಯಲ್ಲಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡುತ್ತಿದ್ದಾರೆ.ಇದುವರೆಗೂ ಪ್ರಗತಿಯಾಗಿಲ್ಲ ಎಂದರು.

ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 622 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನಗಳಿಸಿದ ಪಟ್ಟಣದ ಸೊಸೈಟಿ ಕೇರಿಯ ಜಿ.ಕೇಶವ್‌ಗೆ ಮತ್ತು ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಡಾ.ರವಿ ಅರವರನ್ನು ಸನ್ಮಾನಿಸಲಾಯಿತು.

ಕೆಡಿಪಿ ಸದಸ್ಯ ಚಂದ್ರಶೇಖರಗೌಡ, ಸುವರ್ಣ ಕೆ.ಎಚ್.ಸುನೀತಾ, ರೇವಣಸಿದ್ದಪ್ಪ, ವೀರನಗೌಡ, ಹುಲ್ಮಾರ್ ಶಿವು, ಇಒ ನಾಗರಾಜ್, ತಹಸೀಲ್ದಾರ್ ವಾಣಿ, ಬಿಇಒ ಲೋಕೇಶಪ್ಪ, ಅಧಿಕಾರಿಗಳು ಹಾಜರಿದ್ದರು.