ಸಾರಾಂಶ
ಬಿಎಂಟಿಸಿ ಸಿಬ್ಬಂದಿಗೆ ಘಟಕಗಳು, ಬಸ್ ನಿಲ್ದಾಣಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಈ ಸಂಬಂಧ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರೊಬ್ಬರು ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿರು ಬೇಸಿಗೆಯಿಂದಾಗಿ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜನರು ನೀರಿಗಾಗಿ ಖಾಸಗಿ ಬೋರ್‌ವೆಲ್, ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ಅದೇ ರೀತಿ ಇದೀಗ ಬಿಎಂಟಿಸಿ ಸಿಬ್ಬಂದಿಗೂ ನೀರಿನ ಸಮಸ್ಯೆ ಕಾಡುತ್ತಿದ್ದು, ಅವರಿಗೆ ಸಮರ್ಪಕ ನೀರು ಪೂರೈಸುವಂತೆ ಯೋಗೇಶ್ ಗೌಡ ಎಂಬುವವರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಜಲಮಂಡಳಿ ಜನರ ಬೇಡಿಕೆಗೆ ತಕ್ಕಂತೆ ನೀರು ಪೂರೈಸುತ್ತಿದೆ. ಆದರೆ, ಬಿಎಂಟಿಸಿ ಸಿಬ್ಬಂದಿಗೆ ಮಾತ್ರ ನೀರಿನ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ಬಿಎಂಟಿಸಿಯ 50ಕ್ಕೂ ಹೆಚ್ಚಿನ ಘಟಕಗಳಲ್ಲಿ ಕುಡಿಯುವ ನೀರಿನ ಘಟಕಗಳಿವೆ. ಆದರೆ, ಅವುಗಳಲ್ಲಿ ಕೆಲವು ಹಾಳಾಗಿದ್ದು ಬಿಎಂಟಿಸಿ ಸಿಬ್ಬಂದಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಅಲ್ಲದೆ, ಸಿಬ್ಬಂದಿಗೆ ನಿತ್ಯ 2ರಿಂದ 3 ಲೀಟರ್ ನೀರಿನ ಅವಶ್ಯಕತೆಯಿದ್ದು, ಅದನ್ನು ಮನೆಯಿಂದ ತರಲಾಗದು. ಹೀಗಾಗಿ ಬಿಎಂಟಿಸಿ ಘಟಕ ಹಾಗೂ ಬಸ್ ನಿಲ್ದಾಣಗಳಲ್ಲಿನ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡುವಂತೆ ಸಿಬ್ಬಂದಿ ಮನವಿ ಮಾಡಿಕೊಳ್ಳುತ್ತಿದೆ.
ಅದರ ನಡುವೆಯೇ ಯೋಗೇಶ್ ಗೌಡ ಎಂಬುವವರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಬಿಎಂಟಿಸಿ ಸಿಬ್ಬಂದಿಯ ನೀರಿನ ಸಮಸ್ಯೆ ನೀಗಿಸುವಂತೆ ಕೋರಿದ್ದಾರೆ. ಅದರಲ್ಲೂ ಬಿಸಿಲಿನಲ್ಲೇ ಬಸ್ ಸೇವೆ ನೀಡುವ ಚಾಲಕರು ಮತ್ತು ನಿರ್ವಾಹಕರಿಗೆ ಬಸ್ ನಿಲ್ದಾಣಗಳಲ್ಲಿ ನೀರು ಪೂರೈಸುವ ವ್ಯವಸ್ಥೆ ಮಾಡಬೇಕು. ಅವರು ನಿತ್ಯ 3 ಲೀ.ಗೂ ಹೆಚ್ಚಿನ ನೀರನ್ನು ಹೊತ್ತು ಬಸ್‌ಗಳಲ್ಲಿ ಸಂಚರಿಸಲು ಸಾಧ್ಯವಿಲ್ಲ. ಹೀಗಾಗಿ ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ.