ಗಣೇಶನ ಭಕ್ತರಿಗೆ ಮುಸ್ಲಿಂರಿಂದ ತಡರಾತ್ರಿ ಉಪಾಹಾರ ವ್ಯವಸ್ಥೆ

| Published : Sep 19 2024, 01:59 AM IST

ಗಣೇಶನ ಭಕ್ತರಿಗೆ ಮುಸ್ಲಿಂರಿಂದ ತಡರಾತ್ರಿ ಉಪಾಹಾರ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ಈದ್ ಮೀಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಹಿಂದೂಗಳು ಶರಬತ್‌ ನೀಡಿದರೆ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ತಡರಾತ್ರಿ ಮುಸ್ಲಿಂ ಸಮಾಜದವರು ಉಪಾಹಾರದ ವ್ಯವಸ್ಥೆ ಮಾಡಿ ಸೌರ್ಹಾದತೆಗೆ ಸಾಕ್ಷಿಯಾಗಿದ್ದಾರೆ.

ಪಲ್ಟನ್ ಓಣಿ ಪಂಚಕಮಿಟಿ, ನಮಾಜ ಸಮಿತಿ ಹಾಗೂ ಜಾಮೀಯಾ ಮಸೀದಿ ಸಮಿತಿಯಿಂದ ವ್ಯವಸ್ಥೆ

ರಾತ್ರಿ 11 ಗಂಟೆಯಿಂದ ಬೆಳಗ್ಗೆ 3 ಗಂಟೆಯವರೆಗೂ ಉಪಾಹಾರ ವ್ಯವಸ್ಥೆ

ಈದ್ ಮೀಲಾದ್ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಗಜಾನನ ಸಮಿತಿಯವರಿಂದ ಶರಬತ್‌ ವಿತರಣೆ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಈದ್ ಮೀಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಹಿಂದೂಗಳು ಶರಬತ್‌ ನೀಡಿದರೆ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ತಡರಾತ್ರಿ ಮುಸ್ಲಿಂ ಸಮಾಜದವರು ಉಪಾಹಾರದ ವ್ಯವಸ್ಥೆ ಮಾಡಿ ಸೌರ್ಹಾದತೆಗೆ ಸಾಕ್ಷಿಯಾಗಿದ್ದಾರೆ.

ಹೌದು, ಈದ್ ಮೀಲಾದ್ ಮೆರವಣಿಗೆಯ ವೇಳೆ, ಅಪ್ಪು ಸರ್ಕಲ್ ನಲ್ಲಿ ಕೊಪ್ಪಳ ಕಾ ರಾಜಾ ಗಜಾನನ ಸಮಿತಿಯವರು ಕೇಸರಿ ಶಾಲು ಹಾಕಿಕೊಂಡು, ಮೆರವಣಿಗೆಯಲ್ಲಿ ಭಾಗಿಯಾದವರಿಗೆ ಶರಬತ್‌ ವಿತರಣೆ ಮಾಡುವ ಮೂಲಕ ಗಮನ ಸೆಳೆದಿದ್ದರು. ಈಗ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ಮಂಗಳವಾರ ತಡರಾತ್ರಿ ಮುಸ್ಲಿಂ ಸಮಾಜದವರು ಉಪಾಹಾರ ಏರ್ಪಡಿಸಿದ್ದರು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರಿಗೆ ಮುಸ್ಲಿಂ ಸಮಾಜದವರು ಖುದ್ದು ತಾವೇ ಉಪ್ಪಿಟ್ಟು ಸಿದ್ಧ ಮಾಡಿ ಬಡಿಸಿದ್ದಾರೆ. ಮೆರವಣಿಗೆ ಇದ್ದಲ್ಲಿಗೆ ಹೋಗಿ ವಿತರಣೆ ಮಾಡುವ ಮೂಲಕ ಭಾರಿ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಕೊಪ್ಪಳ ನಗರದ ಸಾಲರಜಂಗ್ ರಸ್ತೆಯ ಪಲ್ಟನ್ ಓಣಿ ಮುಸ್ಲಿಂ ಸಮಾಜದವರು, ಜಾಮೀಯಾ ಮಸೀದಿ ಸಮಿತಿಯವರು, ನಮಾಜ್ ಸಮಿತಿಯವರು ಹಾಗೂ ಪಲ್ಟನ್ ಓಣಿಯ ಪಂಚಕಮಿಟಿಯ ಪದಾಧಿಕಾರಿಗಳು ಹಾಗೂ ಮುಖಂಡರು ಸೇರಿಕೊಂಡು ಸ್ವಯಂ ಪ್ರೇರಿತವಾಗಿ ತಡರಾತ್ರಿಯ ವೇಳೆಯಲ್ಲಿ ಉಪ್ಪಿಟ್ಟು, ಉಪ್ಪಿನಕಾಯಿ ಹಾಗೂ ಪುಡಿಚಟ್ನಿಯೊಂದಿಗೆ ಉಪಾಹಾರ ವಿತರಣೆ ಮಾಡಿದ್ದಾರೆ.

ಈ ಉಪಾಹಾರ ವ್ಯವಸ್ಥೆಗೆ ಯಾರಿಂದಲೂ ಹಣ ಕೇಳದೆ ಮುಸ್ಲಿಂ ಸಮಾಜದ ಮುಖಂಡರೇ ಹಣ ಸಂಗ್ರಹಿಸಿ ಉಪ್ಪಿಟ್ಟು ತಯಾರಿಸಿ ಬಡಿಸಿದ್ದಾರೆ. ಗಣೇಶ ವಿಸರ್ಜನಾ ಮೆರವಣಗೆ ತಡರಾತ್ರಿ ವರೆಗೆ ನಡೆಯುತ್ತದೆ, ಆ ಸಂದರ್ಭದಲ್ಲಿ ಆಹಾರ ಸಿಗುವುದಿಲ್ಲ ಎಂದು ಮುಸ್ಲಿಂರು ಸ್ವಯಂಪ್ರೇರಣೆಯಿಂದ ಉಪಾಹಾರ ತಯಾರಿಸಿದ್ದಾರೆ.

ಕೋಟೆ ಏರಿಯಾ ಗಣೇಶ, ಕೊಪ್ಪಳ ಕಾ ರಾಜಾ ಗಣೇಶ ಮೂರ್ತಿ ಸೇರಿದಂತೆ ಹತ್ತಾರು ಗಣೇಶ ಮೂರ್ತಿಗಳ ಮೆರವಣಿಗೆ ಸಾಲರಜಂಗ್ ರಸ್ತೆಯ ಮಾರ್ಗವಾಗಿಯೇ ಸಾಗಿದ್ದು, ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೂ ಉಪಾಹಾರ ವಿತರಿಸಿ ಗಮನ ಸೆಳೆದಿದ್ದಾರೆ.

ಉಪಾಹಾರದ ವ್ಯವಸ್ಥೆ ಮಾಡಿದ್ದು ಅಲ್ಲದೆ, ಬಳಿಕ ಆಯಾ ಗಜಾನನ ಸಮಿತಿಯ ಪದಾಧಿಕಾರಿಗಳಿಗೆ ಸನ್ಮಾನ ಮಾಡಿ, ಶಾಂತಿ ಮತ್ತು ಸೌರ್ಹಾದತೆಯಿಂದ ಇರೋಣ ಎಂದು ಪರಸ್ಪರ ಸಂದೇಶ ರವಾನೆ ಮಾಡಿದ್ದಾರೆ. ನೀವು ನಿಮ್ಮ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿ, ನಾವು ನಮ್ಮ ಹಬ್ಬ ಆಚರಣೆ ಮಾಡುತ್ತೇವೆ. ದ್ವೇಷ ಮಾಡದೇ ಪರಸ್ಪರರನ್ನು ಪ್ರೋತ್ಸಾಹಿಸೋಣ ಎನ್ನುವ ಸಂದೇಶ ನೀಡಿದ್ದಾರೆ.3 ಸಾವಿರ ಜನರಿಗೆ ಉಪಾಹಾರ:

ತಡರಾತ್ರಿಯ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಗಣೇಶ ಭಕ್ತರಿಗೆ ಮುಸ್ಲಿಂ ಸಮಾಜದ ಮುಖಂಡರು ಉಪಾಹಾರ ವ್ಯವಸ್ಥೆ ಮಾಡಿದ್ದಾರೆ.

ನಮಾಜ ಸಮಿತಿಯ ಅಧ್ಯಕ್ಷ ಪಿರೋಜ್ ಎಂ., ಪಲ್ಟನ್ ಓಣಿಯ ಪಂಚ ಕಮಿಟಿ ಅಧ್ಯಕ್ಷ ಜಾಫರ್ ಸಂಗಟಿ ಹಾಗೂ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಶಾ ಪಲ್ಟನ್ ನೇತೃತ್ವ ವಹಿಸಿದ್ದರು.