ಕನ್ನಡಪ್ರಭವಾರ್ತೆ ತಿಪಟೂರು

ನಗರದ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ೩೦ರ ಗುರುವಾರ ಮತ್ತು ಮೇ ೧ರಂದು ಸೋಮನಾಥ ಜ್ಯೋತಿರ್ಲಿಂಗ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ಸುದರ್ಶನ ಕ್ರಿಯಾ ಯೋಗ ತರಬೇತಿ ಶಿಕ್ಷಕ ಅವಿನಾಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮದ ಪ್ರಕಾರ ೧೨ ಜ್ಯೋತಿರ್ಲಿಂಗಗಳಲ್ಲಿ ಮೊದಲನೇ ಲಿಂಗವೇ ಸತ್ಯಯುಗದ ಸೋಮ ಅಂದರೆ ಚಂದ್ರನ ಪ್ರತಿಷ್ಠಾಪಿಸಿದ ಹಾಗೂ ಇಲ್ಲಿ ಶ್ರೀ ಕೃಷ್ಣನು ತಪಸ್ಸು ಮಾಡಿದ್ದ ಎಂಬ ಪ್ರತೀತಿ ಇರುವ ಈ ಮೂಲ ಜ್ಯೋತಿರ್ಲಿಂಗವು ಗಾಳಿಯಲ್ಲಿ ತೇಲುತ್ತಿರುತ್ತದೆ ಎಂಬುದು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಶಿಲೆಯ ಕೇಂದ್ರ ಭಾಗವು ಅತ್ಯಂತ ಪ್ರಬಲವಾದ ಕಾಂತಿಯ ಶಕ್ತಿಯಿಂದ ಕೂಡಿದ್ದು ಜ್ಯೋತಿರ್ಲಿಂಗದ ದರ್ಶನ ಹಿಂದುಗಳಿಗೆ ಪವಿತ್ರ ದರ್ಶನವಾಗಿತ್ತು. ಆದರೆ ಕ್ರಿಶ ೧೦೨೬ರಲ್ಲಿ ಘಜ್ನಿ ಮಹಮ್ಮದ್ ದೇವಾಲಯದ ಮೇಲೆ ಅತಿಕ್ರಮಣ ಮಾಡಿ ಲಿಂಗವನ್ನು ಚಿದ್ರಗೊಳಿಸಿದ. ಆ ಲಿಂಗದ ಭಾಗಗಳನ್ನು ಅಗ್ನಿಹೋತ್ರಿ ಪುರೋಹಿತರು ಸಂರಕ್ಷಿಸಿ, ಆ ಚೂರುಗಳಿಗೆ ಶಿವಲಿಂಗದ ಆಕಾರವನ್ನು ನೀಡಿ ಸಂರಕ್ಷಿಸಿಕೊಂಡು ಬಂದಿದ್ದರು. ವಿಜ್ಞಾನಕ್ಕೂ ಅಚ್ಚರಿಯ ಉಂಟುಮಾಡುವಂತಿದ್ದ ಲಿಂಗವನ್ನು ೧೯೨೪ರಲ್ಲಿ ಕಂಚಿ ಶಂಕರಾಚಾರ್ಯರು ಸಂರಕ್ಷಿಸಿದ್ದರು. ನಂತರದಲ್ಲಿ ಶ್ರೀ ರವಿಶಂಕರ್ ೨೦೨೫ರ ಜನವರಿಯಲ್ಲಿ ೧೦೦೦ ವರ್ಷಗಳ ನಂತರ ಮೊಟ್ಟಮೊದಲ ಬಾರಿಗೆ ಮಹಾಶಿವರಾತ್ರಿ ಎಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟರು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಯೋಗ ತರಬೇತುದಾರರಾದ ಅರ್ಚನಾ, ಪ್ರಕಾಶ್, ಡಾ ಅರ್ಪಿತ ಇದ್ದರು.