ಹರಿಪ್ರಸಾದರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ

| Published : Jan 04 2024, 01:45 AM IST

ಹರಿಪ್ರಸಾದರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಮಂದಿರ ಉದ್ಘಾಟನೆಗೆ ಇನ್ನೂ 20 ದಿನ ಬಾಕಿ ಇದೆ. ಜನ ಸಂತೋಷದಲ್ಲಿದ್ದಾರೆ. ಇದನ್ನು ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹರಿಪ್ರಸಾದ ಅವರ ಹೇಳಿಕೆ ನೋಡಿದರೆ ಇವರೇ ಗಲಭೆಗೆ ಪ್ಲಾನ್‌ ಮಾಡುತ್ತಿದ್ದಾರೆ ಎನ್ನುವ ಬಲವಾದ ಸಂಶಯ ಕಾಡುತ್ತದೆ.

ಗದಗ: ಗೋದ್ರಾ ಮಾದರಿಯಲ್ಲಿ ಘಟನೆಯಾಗುತ್ತದೆ ಎನ್ನುವುದರ ಬಗ್ಗೆ ಬಿ.ಕೆ. ಹರಿಪ್ರಸಾದ ಅವರಿಗೆ ಮಾಹಿತಿ ಇದೆ. ಎಲ್ಲೊ ಇವರಿಗೆ ಮಾಹಿತಿ ಸಿಕ್ಕಿದೆ. ತಕ್ಷಣ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ ಹೇಳಿಕೆ ಖಂಡನೀಯ. ಗಂಡಾಂತರ ನಿರ್ಮಾಣ ಮಾಡಿ, ಪ್ರಚೋದನೆ ಕೊಡುವ ಹೇಳಿಕೆ ಇದಾಗಿದೆ. ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಕಾಂಗ್ರೆಸ್‌ಗೆ ಹೊಟ್ಟೆ ಉರಿ ಹೆಚ್ಚಿಸಿದೆ. ಹೊಟ್ಟೆ ಕಿಚ್ಚಿನಿಂದ ಹತಾಶರಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಗೋದ್ರಾ ಘಟನೆಯಲ್ಲಿ 57 ಮುಸ್ಲಿಮರನ್ನು ಜೀವಂತ ಸುಟ್ಟು ಹಾಕಲಾಗಿದೆ. ಇಂತಹ ಹೇಳಿಕೆ ನೀಡಿ ಮುಸ್ಲಿಮರಿಗೆ ಪ್ರಚೋದನೆ ಕೊಡುತ್ತಿದ್ದಾರಾ? ಅಥವಾ ಮುಸ್ಲಿಮರು ಮಾಡುವ ಕೆಲಸ ಹರಿಪ್ರಸಾದ ಅವರಿಗೆ ಗೊತ್ತಾಗಿದೆಯಾ? ಕಾಂಗ್ರಸ್‌ನವರೇ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಗೃಹ ಸಚಿವರು ಬಿ.ಕೆ. ಹರಿಪ್ರಸಾದ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಏನಾದರೂ ಅಹಿತಕರ ಘಟನೆ ನಡೆದರೆ ಗೃಹ ಮಂತ್ರಿ ಹಾಗೂ ಸಿಎಂ ಸಿದ್ದರಾಮಯ್ಯನವರೆ ಕಾರಣವಾಗುತ್ತಾರೆ ಎಂದು ಹೇಳಿದರು.

ರಾಮಮಂದಿರ ಉದ್ಘಾಟನೆಗೆ ಇನ್ನೂ 20 ದಿನ ಬಾಕಿ ಇದೆ. ಜನ ಸಂತೋಷದಲ್ಲಿದ್ದಾರೆ. ಇದನ್ನು ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹರಿಪ್ರಸಾದ ಅವರ ಹೇಳಿಕೆ ನೋಡಿದರೆ ಇವರೇ ಗಲಭೆಗೆ ಪ್ಲಾನ್‌ ಮಾಡುತ್ತಿದ್ದಾರೆ ಎನ್ನುವ ಬಲವಾದ ಸಂಶಯ ಕಾಡುತ್ತದೆ. ಕೂಡಲೇ ಬಿ.ಕೆ. ಹರಿಪ್ರಸಾದ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.