ಗಿಡ ಮರಗಳ ತೆರವು ವಿರೋಧಿಸಿದ ರೈತರ ಬಂಧನ, ಬಿಡುಗಡೆ

| Published : Sep 15 2024, 02:00 AM IST

ಗಿಡ ಮರಗಳ ತೆರವು ವಿರೋಧಿಸಿದ ರೈತರ ಬಂಧನ, ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ಅರ್ಚಕರಹಳ್ಳಿಯಲ್ಲಿ ಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಿರುವ ಭೂಮಿಯಲ್ಲಿ ಬೆಳೆದಿದ್ದ ಗಿಡ ಮರಗಳ ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ರೈತರನ್ನು ಪೊಲೀಸರು ಶನಿವಾರ ಬಂಧಿಸಿ ಬಿಡುಗಡೆ ಮಾಡಿದರು.

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ಅರ್ಚಕರಹಳ್ಳಿಯಲ್ಲಿ ಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಿರುವ ಭೂಮಿಯಲ್ಲಿ ಬೆಳೆದಿದ್ದ ಗಿಡ ಮರಗಳ ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ರೈತರನ್ನು ಪೊಲೀಸರು ಶನಿವಾರ ಬಂಧಿಸಿ ಬಿಡುಗಡೆ ಮಾಡಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣದ ಗುತ್ತಿಗೆದಾರನ ಕಡೆಯವರು ಬೆಳಗ್ಗೆ ಪೊಲೀಸರ ಬಲ ಪ್ರಯೋಗಿಸಿ ನೂರಾರು ಗಿಡ ಮರಗಳನ್ನು ಹಿಟಾಚಿ, ಜೆಸಿಬಿಗಳನ್ನು ಏಕಾಏಕಿ ತೆರವುಗೊಳಿಸಲು ಮುಂದಾಗಿದ್ದಾರೆ.

ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಭೂ ಮಾಲೀಕರಾದ ರಾಜಶೇಖರಯ್ಯ, ಸುರೇಶ್, ನಿರಂಜನ್ ಸೇರಿದಂತೆ ಅನೇಕರು ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದರು. ಹಿಟಾಚಿ, ಜೆಸಿಬಿಗಳ ಘರ್ಜನೆಗೆ ಗಿಡ ಮರಗಳು ಕ್ಷಣ ಮಾತ್ರದಲ್ಲಿ ನೆಲಕ್ಕುರುತ್ತಿರುವುದನ್ನು ಕಂಡು ರೈತರು ಕಣ್ಣೀರಿಟ್ಟರು.

ಪೊಲೀಸರೊಂದಿಗೆ ರೈತರು ಮಾತಿನ ಚಕಮಕಿ ನಡೆಸಿದರು. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ರೈತರನ್ನು ಜಿಲ್ಲಾಧಿಕಾರಿಗಳ ಬಳಿಗೆ ಕರೆದೊಯ್ಯುವ ನೆಪ ಹೇಳಿ ಅವರೆಲ್ಲರನ್ನು ವಾಹನದಲ್ಲಿ ತುಂಬಿಕೊಂಡು ಪೊಲೀಸರು ಹೋದರು. ಗುತ್ತಿಗೆದಾರನ ಕಡೆಯವರು 5 ಎಕರೆಯಲ್ಲಿ ಬೆಳೆದಿದ್ದ ತೆಂಗು, ಅಡಿಕೆ , ಹುಣಸೆ, ತೇಗದ ನೂರಾರು ಮರಗಳನ್ನು ನೆಲಸಮ ಮಾಡಿದರು.

ಪೊಲೀಸರು ಬಿಡುಗಡೆ ಮಾಡಿದ ನಂತರ ಜಮೀನಿನ ಬಳಿಗೆ ಆಗಮಿಸಿದ ರೈತರಾದ ರಾಜಶೇಖರಯ್ಯ, ಸುರೇಶ್ , ನಿರಂಜನ್ ರವರು ನೆಲಕ್ಕುರಳಿದ ಮರಗಳನ್ನು ಕಂಡು ದುಖಿತರಾದರು. ಪೊಲೀಸರು ನಮ್ಮಗಳ ಮೇಲೆ ದೌರ್ಜನ್ಯ ಎಸಗಿ ಜಮೀನಿನಲ್ಲಿ ಬೆಳೆದಿದ್ದ ನೂರಾರು ಮರಗಳನ್ನು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು.

ನಮ್ಮ ಕುಟುಂಬದ 5 ಎಕರೆ ಭೂಮಿಯನ್ನು ರಾಜೀವ್ ಗಾಂಧಿ ವಿವಿಗಾಗಿ ಸ್ವಾಧೀನ ಪಡಿಸಿಕೊಳ್ಳಲು ಗುರುತಿಸಲಾಗಿದೆ. ನಾವು ಹೆಚ್ಚಿನ ಪರಿಹಾರ ಕೋರಿದ್ದು, ಈ ಸಂಬಂಧ ಸುಪ್ರಿಂ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿದೆ. ಹೀಗಿದ್ದರೂ ಗುತ್ತಿಗೆದಾರನ ಕಡೆಯವರು ಪೊಲೀಸರನ್ನು ಮುಂದಿಟ್ಟುಕೊಂಡು ಗಿಡ ಮರಗಳನ್ನು ತೆರವುಗೊಳಿಸಿ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ಶಾಸಕ ಇಕ್ಬಾಲ್ ಹುಸೇನ್ ಹಾಗೂ ಜಿಲ್ಲಾಧಿಕಾರಿ ಯಶವಂತ್ ರವರು ಗಿಡ ಮರಗಳು ಇರುವ ಜಮೀನಿನಲ್ಲಿ ಕಾಮಗಾರಿ ನಡೆಸದಂತೆ ಗುತ್ತಿಗೆದಾರನಿಗೆ ಸೂಚನೆ ನೀಡಿದ್ದರು. ಅಲ್ಲದೆ, ಸೋಮವಾರ ಸ್ಥಳ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ, 2ನೇ ಶನಿವಾರ ಸರ್ಕಾರಿ ರಜೆಯಾದ ಕಾರಣ ತೆರವು ಕಾರ್ಯಾಚರಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಜಮೀನಿನಲ್ಲಿ 1500 ಅಡಿಕೆ, 250 ತೆಂಗು, 50 ತೇಗ, 20 ಹಲಸು ಹಾಗೂ 10 ಹುಣಸೆ ಮರಗಳನ್ನು ಬೆಳೆದಿದ್ದೇವು. ಈ ಮರಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ಅವುಗಳನ್ನು ನೆಲಕ್ಕುರುಳಿಸಿದ್ದಾರೆ. ಭೂಮಿಯನ್ನೇ ನಂಬಿದ ನಮ್ಮ ಬದುಕು ಬೀದಿಗೆ ಬಂದಿದೆ ಎಂದು ರೈತರಾದ ರಾಜಶೇಖರಯ್ಯ, ಸುರೇಶ್, ನಿರಂಜನ್ ಕಣ್ಣೀರಿಟ್ಟರು.

14ಕೆಆರ್ ಎಂಎನ್ 4,5.ಜೆಪಿಜಿ

4.ಪೊಲೀಸರು ರೈತರನ್ನು ಎಳೆದೊಯ್ಯುತ್ತಿರುವುದು.

5.ನೆಲಕ್ಕುರಳಿರುವ ನೂರಾರು ಮರಗಳು.