ಬಂಧನದಿಂದ ದನಿ ಅಡಗಿಸಲು ಸಾಧ್ಯವಿಲ್ಲ: ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ

| Published : Jan 02 2024, 02:15 AM IST

ಬಂಧನದಿಂದ ದನಿ ಅಡಗಿಸಲು ಸಾಧ್ಯವಿಲ್ಲ: ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಕಾವೇರಿ ಪರವಾಗಿಯೂ ಇಲ್ಲ, ಕನ್ನಡ ಪರವಾಗಿಯೂ ಇಲ್ಲ, ಕನ್ನಡಪರ ಹೋರಾಟಗಾರರಿಗೆ ನಮ್ಮ ಸಂಪೂರ್ಣ ಬೆಂಬಲ, ಇಲ್ಲಿಯವರೆಗೆ ಸಮಿತಿಯ ಹೋರಾಟಗಾರರನ್ನು ಕರೆದು ಸಭೆ ಅಥವಾ ಸಮಾಲೋಚನೆ ಸಭೆ ನಡೆಸಿಲ್ಲ. ಇದರಲ್ಲಿಯೂ ಸರ್ಕಾರ ಕಾವೇರಿ, ರೈತರ ಪರವಾಗಿಲ್ಲ ಎನ್ನುವುದು ರಾಜ್ಯಕ್ಕೆ ಗೊತ್ತಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡಪರ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಕಳುಹಿಸುವ ಮೂಲಕ ಅವರ ದನಿ ಅಡಗಿಸುವ ಸರ್ಕಾರದ ನಡೆ ಸರಿಯಲ್ಲ. ಕಾವೇರಿ ಹೋರಾಟಕ್ಕೂ ಕಿಮ್ಮತ್ತು ಕೊಡದ ಕಾಂಗ್ರೆಸ್‌ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಗುಡುಗಿದರು.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತಹಿತರಕ್ಷಣಾ ಸಮಿತಿ ಕಾರ್ಯಕರ್ತರು ನಡೆಸುತ್ತಿರುವ ಧರಣಿಯಲ್ಲಿ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು.

ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಿರುವ ಸರ್ಕಾರದ ನಡೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಮತ್ತು ಸುದ್ದಿಗೋಷ್ಠಿ ನಡೆಸಲಾಗುವುದು. ಹೋರಾಟಗಾರರ ಬಂಧನದಿಂದ ಸರ್ಕಾರಕ್ಕೆ ಕನ್ನಡಪರ ಕಾಳಜಿ ಇಲ್ಲ ಎಂಬುದು ಗೊತ್ತಾಗುತ್ತದೆ. ಕೂಡಲೇ ಬಂಧಿತರನ್ನು ಬಿಡುಗಡೆ ಮಾಡಬೇಕು, ಇಲ್ಲವಾದರೆ ನಾವೂ ಕೂಡ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕನ್ನಡಪರ ಹೋರಾಟಗಾರರಿಗೆ ನಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇವೆ. ಸರ್ಕಾರ ಕಾವೇರಿ ಹೋರಾಟದ ಬಗ್ಗೆ ನಿರ್ಲ‌ಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ. ಇಲ್ಲಿಯವರೆಗೆ ಸಮಿತಿಯ ಹೋರಾಟಗಾರರನ್ನು ಕರೆದು ಸಭೆ ಅಥವಾ ಸಮಾಲೋಚನೆ ಸಭೆ ನಡೆಸಿಲ್ಲ. ಇದರಲ್ಲಿಯೂ ಸರ್ಕಾರ ಕಾವೇರಿ, ರೈತರ ಪರವಾಗಿಲ್ಲ ಎನ್ನುವುದು ರಾಜ್ಯಕ್ಕೆ ಗೊತ್ತಾಗಿದೆ. ಕಾವೇರಿ ವಿಷಯದಲ್ಲಿ ಶಾಶ್ವತ ಪರಿಹಾರಕ್ಕೂ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತುರ್ತು ಸಭೆ:

ರೈತರನ್ನು ನಿರ್ಲಕ್ಷ್ಯ ಮಾಡಿರುವ ಹಾಗೂ ಕಾವೇರಿ ಚಳವಳಿಗಾರರನ್ನು ಕಡೆಗಣಿಸಿರುವುದರ ತುರ್ತು ಸಭೆ ಕರೆಯಲಾಗಿದೆ. ಹಾಗೆಯೇ ಸಮಿತಿ ಮತ್ತು ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಆರಂಭಿಸಿರುವ ಧರಣಿಯು ಮುಂದುವರಿಯಲಿದೆ ಎಂದರು.

ರಾಜ್ಯ ಸರ್ಕಾರಕ್ಕೆ ಕೋರ್ಟಿನಲ್ಲಿ ಚರ್ಚೆ ಮಾಡಲು ಒಳ್ಳೆಯ ಅವಕಾಶವಿತ್ತು. ತಮಿಳುನಾಡಿನಲ್ಲಿ ಪ್ರವಾಹ ಬಂದರೆ ನಮ್ಮ ರಾಜ್ಯದಲ್ಲಿ ಬರ ಬಂದಿದೆ. ಇದನ್ನು ಕೂಡ ಕೋರ್ಟಿನಲ್ಲಿ ವಾದ ಮಾಡಲು ಮುಂದಾಗಲಿಲ್ಲ. ಸರ್ಕಾರದ ಬೇಜವಾಬ್ದಾರಿತನದಿಂದ ಇಂತಹ ಸೋಲು ನಮಗಾಗಿದೆ. ಹಾಗಾಗಿ ಹೋರಾಟ ಮುಂದುವರಿದಿದೆ ಎಂದರು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಮ್, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಕೆಂಪಣ್ಣ, ಮಹಂತಪ್ಪ, ಶಿವರತ್ಮಮ್ಮ, ಗೌರಮ್ಮ, ವೆಂಕಟೇಶ್, ಚಂದ್ರಶೇಖರ್, ಜಯಸ್ವಾಮಿ ಅವರು ಉಪವಾಸ ಮಾಡುವ ಮೂಲಕ ಬೆಂಬಲ ನೀಡಿದರು.

ಸಮಿತಿಯ ಕೆ.ಬೋರಯ್ಯ, ಮುದ್ದೇಗೌಡ, ಕೃಷ್ಣಪ್ರಕಾಶ್, ಪಯಾಜ್, ಸುಶೀಲಮ್ಮ, ಕರಿಯಪ್ಪ, ಸಿ.ಕೆ.ಗಂಗೇಗೌಡ, ಶಂಕರೇಗೌಡ, ನಾಗರಾಜು, ಜಯಪ್ರಕಾಶ್‌ ಭಾಗವಹಿಸಿದ್ದರು.