ಗೋದ್ರಾ ಘಟನೆ ಮರುಕಳಿಸುತ್ತದೆ ಎಂದ ಹರಿಪ್ರಸಾದ ಬಂಧಿಸಿ

| Published : Jan 04 2024, 01:45 AM IST

ಸಾರಾಂಶ

ಗೋದ್ರಾ ಘಟನೆ ಕರ್ನಾಟಕದಲ್ಲಿ ಆಗುತ್ತದೆ ಎಂದು ಹೇಳಿಕೆ ನೀಡಿದರೆ ಏನರ್ಥ. ಆಗ ಹಿಂದೂ ಕಾರ್ಯಕರ್ತರ ಸುಟ್ಟು ಜೀವಂತ ಸಮಾಧಿ ಮಾಡಿದ್ದರು. ಅದನ್ನು ನೆನಪು ಮಾಡಿ ಹಿಂದೂಗಳನ್ನು ಭಯ ಪಡಿಸುವ ಯತ್ನ ಮಾಡುತ್ತಿದ್ದಾರೆ

- ಹರಿಪ್ರಸಾದ್‌ ಅವರಿಂದ ಕೋಮು ಸೌಹಾರ್ದ ಕೆಡಿಸುವ ಕೆಲಸ: ಬೆಲ್ಲದ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಗೋದ್ರಾ ಘಟನೆ ಕರ್ನಾಟಕದಲ್ಲಿ ನಡೆಯುತ್ತದೆ ಎಂದು ಹೇಳಿಕೆ ನೀಡಿರುವ ಬಿ.ಕೆ. ಹರಿಪ್ರಸಾದ ಬಂಧಿಸಿ. ಅವರು ಕೋಮು ಸೌಹಾರ್ದ ಕೆಡಿಸುವ ಹುನ್ನಾರ ನಡೆಸಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋದ್ರಾ ಘಟನೆ ಕರ್ನಾಟಕದಲ್ಲಿ ಆಗುತ್ತದೆ ಎಂದು ಹೇಳಿಕೆ ನೀಡಿದರೆ ಏನರ್ಥ. ಆಗ ಹಿಂದೂ ಕಾರ್ಯಕರ್ತರ ಸುಟ್ಟು ಜೀವಂತ ಸಮಾಧಿ ಮಾಡಿದ್ದರು. ಅದನ್ನು ನೆನಪು ಮಾಡಿ ಹಿಂದೂಗಳನ್ನು ಭಯ ಪಡಿಸುವ ಯತ್ನ ಮಾಡುತ್ತಿದ್ದಾರೆ ಎಂದರು.

ಎಲ್ಲರನ್ನು ರಕ್ಷಣೆ ಮಾಡುವ ಜವಾಬ್ದಾರಿ ಸರಕಾರದ್ದು, ಹೀಗಿರುವಾಗ ಈ ರೀತಿಯ ಹೇಳಿಕೆ ನೀಡುವ ಹರಿಪ್ರಸಾದ ಅವರನ್ನು ಬಂಧಿಸಿ. ಗೋದ್ರಾದಲ್ಲಿ ಹಿಂದುಗಳನ್ನು ಸುಟ್ಟಿದ್ದು ಯಾರು? ಮುಸ್ಲಿಮರಲ್ಲವೇ? ಕುಕ್ಕರ ಬಾಂಬ್‌ ಹಾಕಿದ್ದು ಯಾರು? ಕುಕ್ಕರ್‌ ಬಾಂಬ್‌ ಹಾಕಿದವರನ್ನು ಬಿಟ್ಟು ಬಡಪಾಯಿಗಳನ್ನು ಬಂಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಆದಿಲ್‌ಶಾಹಿ, ಔರಂಗಜೇಬ್‌ ಹಾಗೂ ಟಿಪ್ಪು ಸುಲ್ತಾನ ಆಡಳಿತ ಆರಂಭವಾಗಿದೆ. ಹೀಗಾಗಿ, ಬಡಪಾಯಿ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಂಧನವಾಗಿದೆ. ಇಂತಹ ಕಾರಣದಿಂದಲೇ ಹಿಂದೂಗಳು ನಿಮಗೆ ಮತ ಹಾಕಿಲ್ಲ ಎಂದು ಬಂಧಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು. ಕೇವಲ ಒಂದೇ ಸಮುದಾಯಕ್ಕೆ ಕುಮ್ಮಕ್ಕು ನೀಡುವ ಸರಕಾರದ ಧೋರಣೆ ಹಾಗೂ ಹಿಂದೂ ವಿರೋಧಿ ನೀತಿಗೆ ತಕ್ಕಶಾಸ್ತಿಯಾಗಲಿದೆ. ಬರಗಾಲ ಬಿದ್ದಾಗ ರೈತರಿಗೆ ಏನು ಮಾಡಿದ್ದೀರಾ? ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ನೀಡಲು ರೈತರಿಗೆ ನೀಡಬೇಕಾದ ಹಣ ಬಳಸಲಾಗಿದೆ. ನೀವು ಕೇವಲ ಅಲ್ಪಸಂಖ್ಯಾತ ಸಿಎಂ? ಎಂದು ಆರೋಪಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಿಜೆಪಿ ಯಾರಿಗೂ ಪ್ರಚೋದನೆ ನೀಡುವ ಕೆಲಸ ಮಾಡಲಿಲ್ಲ. ಆದರೆ, ಕಾಂಗ್ರೆಸ್‌ನವರು ಹಳೇಹುಬ್ಬಳ್ಳಿ ಗಲಭೆ ಆರೋಪಿಗಳು ಅಮಾಯಕರು ಎಂದು ಅವರ ಮೇಲಿನ ಪ್ರಕರಣ ಹಿಂಪಡೆಯಲು ಪತ್ರ ಬರೆಯುತ್ತಾರೆ. ಆದರೆ, ಶ್ರೀಕಾಂತ ಅವರನ್ನು ಬಂಧಿಸುವ ಕೆಲಸ ಸರಕಾರ ಮಾಡುತ್ತಿದೆ ಎಂದರು.

ಬಂಧಿತ ಶ್ರೀಕಾಂತ ಅವರ ವಿರುದ್ಧ ಕೇಸ್‌ಗಳು ಇರಬಹುದು. ಸರಕಾರ ಬರುತ್ತೆ ಹೋಗುತ್ತದೆ. ಆದರೆ ಪೊಲೀಸರು ವಿವೇಚನೆಯಿಂದ ಕೆಲಸ ಮಾಡಬೇಕು. ಪ್ರಕರಣಗಳಿದ್ದರೆ ಆತ ಠಾಣೆಗೆ ಬಂದರೂ ತಾವು ಏಕೆ ಬಂಧಿಸಿಲ್ಲ? ರಾಮ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಬಂಧಿಸಿದ್ದರ ಹಿಂದೆ ಸರಕಾರದ ಕುಮ್ಮಕ್ಕಿದೆ. ಹೀಗಾಗಿಯೇ ಅವರನ್ನು ಬಂಧಿಸಲಾಗಿದೆ. ಕಾಂಗ್ರೆಸ್‌ ನಾಯಕರಿಗೆ ಹಿಂದೂ ಧರ್ಮದ ಮೇಲೆ ವಿಶ್ವಾಸವಿಲ್ಲ. ಗೋದ್ರಾ ರೀತಿ ಗಲಭೆಯಾಗಬಹುದು ಎಂಬ ಎಚ್ಚರಿಕೆ ಕೊಟ್ಟಿದ್ದಾರೆ. ಆ ರೀತಿಯಾದರೆ ಇದಕ್ಕೆ ನೇರವಾಗಿ ಕಾಂಗ್ರೆಸ್‌ ಹೊಣೆ. ಬಂಧಿತ ಶ್ರೀಕಾಂತ ಪೂಜಾರಿ ವಿರುದ್ಧ ದಾಖಲಾದ ಎಫ್‌ಐಆರ್‌ ಕಾಫಿ ಸಹ ಪೊಲೀಸರ ಬಳಿ ಇಲ್ಲ. ಮುಗಿದಿರುವ ಪ್ರಕರಣಕ್ಕೆ ಮರ ಜೀವ ನೀಡಲಾಗುತ್ತಿದೆ. ಆದ್ದರಿಂದ ಅಧಿಕಾರಿ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.