ಗಂಗೊಳ್ಳಿ ಠಾಣೆಯ ಪೊಲೀಸರು ಶುಕ್ರವಾರ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅವರಿಂದ ಒಟ್ಟು 36,000 ರು. ನಗದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಬೈಕ್‌ ಹಾಗೂ 3 ಮೊಬೈಲ್‌ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಕುಂದಾಪುರ ಮತ್ತು ಬೈಂದೂರು ತಾಲೂಕುಗಳಲ್ಲಿ 7 ಅಂಗಡಿ, ಬಾರ್, ಮೆಡಿಕಲ್ ಶಾಪ್‌ಗಳಲ್ಲಿ ಕಳ್ಳತನ ಮಾಡಿದ್ದ 3 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಮಂಗಳೂರಿನ ನಂತೂರು ನಿವಾಸಿ ಹರ್ಷಿತ್ ಅವಿನಾಶ್ ದೋಡ್ರೆ (23) ಬೈಂದೂರು ತಾಲೂಕಿನ ಪಡುವರಿ ಗ್ರಾಮದ ರಿಲ್ವಾನ್ ಯಾನೆ ರಿಝ್ವಾನ್ (24) ಮತ್ತು ಯಡ್ತರೆ ಗ್ರಾಮದ ಮಹಮ್ಮದ್ ಅರ್ಬಾಝ್ (23).

ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಗುಡ್ಡೆಯಂಗಡಿ, ಬೈಂದೂರು ಠಾಣಾ ವ್ಯಾಪ್ತಿಯ ನಾಗೂರು ಮತ್ತು ಕೋಟಾ ಠಾಣಾ ವ್ಯಾಪ್ತಿಯ ಮೂರುಕೈಯಲ್ಲಿರುವ ಮೆಡಿಕಲ್ ಶಾಪ್‌ಗಳು, ಕುಂದಾಪುರ ಠಾಣಾ ವ್ಯಾಪ್ತಿಯ ಖಾರ್ವಿಕೇರಿ ರಸ್ತೆಯ ಜನರಲ್ ಸ್ಟೋರ್ ಹಾಗೂ ಹಳ್ಳಾಡಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಬೇಕರಿ, ಸಾಯಿಬ್ರಕಟ್ಟೆಯ ಹೊಟೇಲ್‌ಗಳಲ್ಲಿ ನಡೆದ ಕಳವು ಪ್ರಕರಣದಲ್ಲಿ ಈ ಆರೋಪಿಗಳು ಪೊಲೀಸರಿಗೆ ಬೇಕಾಗಿದ್ದರು.

ಅವರನ್ನು ಗಂಗೊಳ್ಳಿ ಠಾಣೆಯ ಪೊಲೀಸರು ಶುಕ್ರವಾರ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅವರಿಂದ ಒಟ್ಟು 36,000 ರು. ನಗದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಬೈಕ್‌ ಹಾಗೂ 3 ಮೊಬೈಲ್‌ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಗಂಗೊಳ್ಳಿ ಠಾಣೆಯ ಪಿಎಸ್‌ಐಗಳಾದ ಹರೀಶ್ ಆರ್. ಮತ್ತು ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿ ಮೋಹನ, ನಾಗರಾಜ, ಚಂದ್ರಶೇಖರ, ಸಂದೀಪ್, ನಾಗರಾಜ, ದಿನೇಶ್ ಹಾಗೂ ನಿತಿನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.