ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಪೊಲೀಸರು ನಾಲ್ಕು ಜನರನ್ನು ಬಂಧಿಸಿ ಅವರಿಂದ ಒಟ್ಟು ₹ 1.22 ಲಕ್ಷ ಮೊತ್ತದ 245 ಖೋಟಾ ನೋಟುಗಳನ್ನು ಜಪ್ತಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಪೊಲೀಸರು ನಾಲ್ಕು ಜನರನ್ನು ಬಂಧಿಸಿ ಅವರಿಂದ ಒಟ್ಟು ₹ 1.22 ಲಕ್ಷ ಮೊತ್ತದ 245 ಖೋಟಾ ನೋಟುಗಳನ್ನು ಜಪ್ತಿ ಮಾಡಿದ್ದಾರೆ.ನಗರದ ವಜ್ರ ಹನುಮಾನ ನಗರದ ನಿವಾಸಿ ರಿಯಾಜ್ ಕಾಶೀಮಸಾಬ ವಾಲಿಕಾರ(44), ಲಿಂಗಸೂರಿನ ದುರಗಪ್ಪ ಶಿವಣಪ್ಪ ರಾಮರಟ್ಟಿ(44), ಮಹಾಲಿಂಗಪೂರದ ಭೀಮಪ್ಪ ರಾಮಪ್ಪ ಹರಿಜನ(25), ಕೋಲಾರ ಹತ್ತಿರದ ಹೊಳೆಹಂಗರಗಿ ಗ್ರಾಮದ ರಮೇಶ ಹಣಮಂತ ಸವಳತೋಟ(44) ಬಂಧಿತ ಆರೋಪಿಗಳು.
ಕಳೆದ ಡಿ.28 ರಂದು ₹500 ಮುಖ ಬೆಲೆಯ ಖೋಟಾ ನೋಟು ನೀಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಮಾಹಿತಿ ಆಧಾರದ ಮೇಲೆ ಗಾಂಧಿ ಚೌಕ್ ಪಿಎಸ್‌ಐ ಹಾಗೂ ಸಿಬ್ಬಂದಿ ಜನರು ಸೇರಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ರಿಯಾಜ್ ವಾಲಿಕಾರನನ್ನು ವಿಚಾರಣೆ ನಡೆಸಿದಾಗ ವಿಜಯಪುರದ ವಾಟರ್ ಟ್ಯಾಂಕ್ ಹತ್ತಿರದ ಹಾಲಿನ ಅಂಗಡಿಯಲ್ಲಿ ₹500 ಮುಖ ಬೆಲೆಯ ಖೋಟಾ ನೋಟು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಆತನ ಹತ್ತಿರ ₹500 ಮುಖ ಬೆಲೆಯ 5 ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲಿಂಗಸೂರಿನ ದುರಗಪ್ಪ ಶಿವಣಪ್ಪ ರಾಮರಟ್ಟಿನಿಂದ ₹500 ಮುಖ ಬೆಲೆಯ 20 ಖೋಟಾ ನೋಟುಗಳು, ಮಹಾಲಿಂಗಪೂರದ ಭೀಮಪ್ಪ ರಾಮಪ್ಪ ಹರಿಜನನಿಂದ ₹ 500 ಮುಖ ಬೆಲೆಯ 100 ಖೋಟಾ ನೋಟುಗಳು ಹಾಗೂ ಕೋಲಾರ ಹತ್ತಿರದ ಹೊಳೆಹಂಗರಗಿ ಗ್ರಾಮದ ರಮೇಶ ಹಣಮಂತ ಸವಳತೋಟ ₹ 500 ಮುಖಬೆಲೆಯ 120 ಖೋಟಾ ನೋಟುಗಳು ವಶಕ್ಕೆ ಪಡೆದಿದ್ದಾರೆ. 4 ಜನ ಆರೋಪಿಗಳಿಂದ ₹ 500 ಮುಖ ಬೆಲೆಯ ಒಟ್ಟು ₹ 1.22 ಲಕ್ಷ ಮೊತ್ತದ 245 ಖೋಟಾ ನೋಟುಗಳನ್ನು ಜಪ್ತು ಮಾಡಿದ್ದಾರೆ. ಈ ಕುರಿತು ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.