ಸುಶೀಲ್‌ಗೆ ಚೂರಿ ಇರಿದ ಪ್ರಕರಣದಲ್ಲಿ ಎಲ್ಲರ ಆರೋಪಿಗಳ ಬಂಧಿಸಿ

| Published : Feb 08 2024, 01:31 AM IST

ಸುಶೀಲ್‌ಗೆ ಚೂರಿ ಇರಿದ ಪ್ರಕರಣದಲ್ಲಿ ಎಲ್ಲರ ಆರೋಪಿಗಳ ಬಂಧಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲ ಮುಸ್ಲಿಮರಿಂದ ಹಿಂದೂಗಳ ವಿರುದ್ಧ ಹಲ್ಲೆ ಕೊಲೆ ಯತ್ನದ ಪ್ರಕರಣ ಹೆಚ್ಚಾಗುತ್ತಿದೆ. ಮಂಗಳವಾರ ರಾತ್ರಿ ಪಟ್ಟಣದ ದೊಡ್ಡಪೇಟೆಯಲ್ಲಿ 7.30ರ ಹೊತ್ತಿಗೆ ಮೂರ್ನಾಲ್ಕು ಮುಸ್ಲಿಂ ಯುವಕರು ಬೈಕ್‌ ವ್ಹೀಲಿಂಗ್‌ನಲ್ಲಿ ತೊಡಗಿದ್ದರು. ಇದರಿಂದ ಮಕ್ಕಳು, ಮಹಿಳೆಯರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಬೇಕಿದ್ದರೆ ಹೊರವಲಯದಲ್ಲಿ ವ್ಹೀಲಿಂಗ್ ಮಾಡುವಂತೆ ಸುಶೀಲ್ ಎಂಬಾತ ತಿಳಿಸಿದ್ದಾನೆ. ಇದೇ ಕಾರಣಕ್ಕೆ ರಾತ್ರಿ 9 ಗಂಟೆವರೆಗೆ ಹಿಂಬಾಲಿಸಿ, ಸುಶೀಲ್‌ ವಾಯುವಿಹಾರಕ್ಕೆ ತೆರಳಿದ್ದಾಗ ಆತನಿಗೆ ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. ಇದು ಆತಂಕಕಾರಿ ಘಟನೆಯಾಗಿದ್ದು, ಖಂಡನೀಯ. ಈ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಶಿಕಾರಿಪುರ ಪ್ರತಿಭಟನೆಯಲ್ಲಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವದಲ್ಲಿದೆ, ಎಂಥಾ ಅಪರಾಧ ಕೃತ್ಯವನ್ನೂ ಜೀರ್ಣಿಸಿಕೊಳ್ಳಬಹುದು ಎಂಬ ಅಹಂಕಾರದಲ್ಲಿ ಕೆಲ ಮುಸ್ಲಿಮರಿಂದ ಹಿಂದೂಗಳ ವಿರುದ್ಧ ಹಲ್ಲೆ ಕೊಲೆ ಯತ್ನದ ಪ್ರಕರಣ ಹೆಚ್ಚಾಗುತ್ತಿದೆ. ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ವಿಫಲವಾದಲ್ಲಿ ಪ್ರತಿಭಟನೆ ಸ್ಪರೂಪ ಬದಲಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಎಚ್ಚರಿಸಿದರು.

ಬುಧವಾರ ಪಟ್ಟಣ ಪೊಲೀಸ್ ಠಾಣೆ ಎದುರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಮಂಗಳವಾರ ರಾತ್ರಿ ಪಟ್ಟಣದ ದೊಡ್ಡಪೇಟೆಯಲ್ಲಿ 7.30ರ ಹೊತ್ತಿಗೆ ಮೂರ್ನಾಲ್ಕು ಮುಸ್ಲಿಂ ಯುವಕರು ಬೈಕ್‌ ವ್ಹೀಲಿಂಗ್‌ನಲ್ಲಿ ತೊಡಗಿದ್ದರು. ಇದರಿಂದ ಮಕ್ಕಳು, ಮಹಿಳೆಯರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಬೇಕಿದ್ದರೆ ಹೊರವಲಯದಲ್ಲಿ ವ್ಹೀಲಿಂಗ್ ಮಾಡುವಂತೆ ಸುಶೀಲ್ ಎಂಬಾತ ತಿಳಿಸಿದ್ದಾನೆ. ಇದೇ ಕಾರಣಕ್ಕೆ ರಾತ್ರಿ 9 ಗಂಟೆವರೆಗೆ ಹಿಂಬಾಲಿಸಿ, ಸುಶೀಲ್‌ ವಾಯುವಿಹಾರಕ್ಕೆ ತೆರಳಿದ್ದಾಗ ಆತನಿಗೆ ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. ಇದು ಆತಂಕಕಾರಿ ಘಟನೆಯಾಗಿದ್ದು, ಖಂಡನೀಯ. ಈ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಮುಸ್ಲಿಂ ಯುವಕರ ವರ್ತನೆ ಮಿತಿಮೀರುತ್ತಿದೆ. ಶಿರಾಳಕೊಪ್ಪದಲ್ಲಿ ಉರುಸ್ ಆಚರಣೆಗೆ ಸಂಬಂಧಿಸಿದಂತೆ ಬೆಂಗಳೂರು ಎಸ್‌ಪಿ ಕಚೇರಿಯಲ್ಲಿ ಹೊಡೆದಾಟ, ಹೊಳೆಹೊನ್ನೂರಿನ ಮಸೀದಿಯಲ್ಲಿನ ಮರ ಕಡಿದ ಕಾರಣಕ್ಕೆ ಹಿಂದೂ ಯುವಕನ ವಿರುದ್ಧ ಹಲ್ಲೆಗಳು ನಡೆದಿವೆ. ದುಷ್ಟಶಕ್ತಿಗಳಿಗೆ ಇನ್ನು ಎಷ್ಟು ನಿರಪರಾಧಿ ಹಿಂದೂಗಳ ಹತ್ಯೆಯಾಗಬೇಕು. ಕುಟ್ಟಪ್ಪ, ವಾಮನ ಪೂಜಾರಿ, ರಾಜು, ಪ್ರವೀಣ್‌ ನೆಟ್ಟಾರು, ಹರ್ಷ ಸಹಿತ ಹಲವರ ಹತ್ಯೆಯಾಗಿದೆ. ಇದರಿಂದ ಹಿಂದೂ ಸಮಾಜವನ್ನು ಹೆದರಿಸಲು ಸಾಧ್ಯ ಎಂಬುದು ಕನಸು ಮಾತ್ರ ಎಂದರು.

ಈ ಸಂದರ್ಭ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿ, ಚೂರಿ ಇರಿತ ಘಟನೆಯಿಂದ ಸಮಾಜ ಆಘಾತಗೊಂಡಿದೆ. ಪ್ರಕರಣ ಬಗ್ಗೆ ನಿಷ್ಪಕ್ಷವಾತ ತನಿಖೆ, ಇಲಾಖೆ ಬಗೆಗಿನ ನಿರೀಕ್ಷೆ ಹುಸಿಯಾಗದ ರೀತಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರನ್ನು ಶೀಘ್ರ ಬಂಧಿಸಲಾಗುವುದು. ಪಾರದರ್ಶಕ ತನಿಖೆ ಮೂಲಕ ಸಮಾಜದಲ್ಲಿ ಶಾಂತಿ- ನೆಮ್ಮದಿ ನೆಲೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಬಿಜೆಪಿ ತಾಲೂಕು ಉಪಾಧ್ಯಕ್ಷ ವಸಂತಗೌಡ, ನಗರಾಧ್ಯಕ್ಷ ರಾಘವೇಂದ್ರ ಎಸ್.ಎಸ್., ಯುವ ಮೋರ್ಚಾ ಅಧ್ಯಕ್ಷ ವೀರಣ್ಣಗೌಡ, ಮುಖಂಡ ಅಂಬಾರಗೊಪ್ಪ ಶೇಖರಪ್ಪ, ಡಿ.ಎಲ್. ಬಸವರಾಜ್, ರುದ್ರಮುನಿ, ಬೆಣ್ಣೆ ಪ್ರವೀಣ್‌, ಯುವರಾಜ, ಶಿವರಾಜ, ಫಕೀರಪ್ಪ, ಎಸ್,ವಿ.ಕೆ. ಮೂರ್ತಿ, ರಮೇಶ್, ಎಸ್.ಎಂ. ರಮೇಶ್, ವಿನಯ, ಮಲ್ಲೇಶಪ್ಪ ಮತ್ತಿತರರು ಹಾಜರಿದ್ದರು.

- - -

ಕೋಟ್‌ ಸುಶೀಲ್ ಮೇಲೆ ಹಲ್ಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ, ಉಳಿದ ಇಬ್ಬರು ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಮೂಲಕ ಜೈಲಿನಲ್ಲಿ ಕೊಳೆಯುವ ರೀತಿ ಐಪಿಸಿ ಸೆಕ್ಷನ್ ದೂರು ದಾಖಲಿಸಬೇಕು. ಬಾಲಾಪರಾಧಿ ಎಂಬ ಕಥೆ ಕಟ್ಟಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದಲ್ಲಿ ಹಿಂದೂ ಸಮಾಜ ಎದ್ದು ನಿಲ್ಲಲಿದೆ

- ಬಿ.ವೈ.ರಾಘವೇಂದ್ರ, ಸಂಸದ

- - - -7ಕೆಎಸ್.ಕೆಪಿ1:

ಕ್ಷುಲ್ಲಕ ಕಾರಣಕ್ಕೆ ಹಿಂದೂ ಯುವಕನಿಗೆ ಚೂರಿ ಇರಿದ ಘಟನೆ ಖಂಡಿಸಿ ಬುಧವಾರ ಶಿಕಾರಿಪುರ ಪೊಲೀಸ್ ಠಾಣೆ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಸಂಸದ ರಾಘವೇಂದ್ರ ಮಾತನಾಡಿದರು.