ಸಾರಾಂಶ
ಕನ್ನಡಪ್ರಭ ವಾರ್ತೆ, ದಾವಣಗೆರೆ, ಜು. 12,ಮುಡಾ ಹಗರಣದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದ ಬಿಜೆಪಿ ಮುಖಂಡರ ಬಂಧನ ಅತ್ಯಂತ ಖಂಡನೀಯ. ಪ್ರಜಾಪ್ರಭುತ್ವದ ಕಗ್ಗೊಲೆ, ಹೋರಾಟ ಹತ್ತಿಕ್ಕುವ ಹತಾಶ ಪ್ರಯತ್ನ ಎಂದು ಆರೋಪಿಸಿ ಶುಕ್ರವಾರ ಬಿಜೆಪಿ ಮುಖಂಡರು, ಕಾರ್ಯಕರ್ತರು ಜಿಲ್ಲಾಡಳಿತ ಭವನ ಬಳಿ ದಿಢೀರ್ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಮಾತನಾಡಿ, ಮುಡಾ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಶುಕ್ರವಾರ ಮುಡಾ ಕಚೇರಿಗೆ ಮುತ್ತಿಗೆ, ಪ್ರತಿಭಟನೆಗೆ ಮುಂದಾಗಿದ್ದ ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ವೈ. ವಿಜಯೇಂದ್ರ ಇತರೆ ಮುಖಂಡ ರನ್ನು ಮನೆ ಬಳಿ, ರಸ್ತೆಯಲ್ಲೇ ಪ್ರತಿಭಟನಾಕಾರರ ಬಂಧನ ಅತ್ಯಂತ ಖಂಡನೀಯ ಎಂದು ದೂರಿದರು.
ಅಂಗೈ ಹುಣ್ಣಿಗೆ ಕನ್ನಡಿ ಎನ್ನುವಂತೆ ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲ ಸಾಕ್ಷ್ಯಗಳಿದ್ದರೂ ಸಿದ್ದರಾಮಯ್ಯ ಅವರು ತಾವೇನು ಮಾಡಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಕಾನೂನುಬದ್ಧವಾಗಿಯೇ ಹೋರಾಟಕ್ಕೆ ಅನುಮತಿ ಪಡೆದಿ ದ್ದರೂ ಬಿಜೆಪಿಯ ನಾಯಕರನ್ನು ಬಂಧಿಸಿರುವುದ ನೋಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೆದರಿಕೆ ಉಂಟಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ದೂರಿದರು.ಅಂಬೇಡ್ಕರ್ ಅವರು ಹೇಳಿರುವಂತೆ ಹೋರಾಟ ಎಲ್ಲರ ಹಕ್ಕು. ಆದರೆ, ಕಾಂಗ್ರೆಸ್ ಸರ್ಕಾರ ಜನರ ಹೋರಾಟದ ಮೂಲಭೂತ ಹಕ್ಕನ್ನೇ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದಕ್ಕೆ ನಾಚಿಕೆಯಾಗಬೇಕು. ಮುಂದಿನ ದಿನಗಳಲ್ಲಿ ಈ ಹೋರಾಟ ಜನಾಂದೋಲನ ಆಗುತ್ತದೆ ಎಂಬ ಭಯದಿಂದ ನಾಯಕರು, ಹೋರಾಟಗಾರರನ್ನು ಬಂಧಿಸುವ ಗೊಡ್ಡು ಬೆದರಿಕೆ ಬಿಜೆಪಿ ಹೆದರುವುದೇ ಇಲ್ಲ ಎಂದರು.
ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳ ಮೇಲೆ ಹಗರಣ ನಡೆಯುತ್ತಿರುವುದನ್ನು ನೋಡಿದರೆ ಹಗರಣ ಮಾಡಲಿಕ್ಕೇ ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದಿದ್ದರೋ ಎಂದು ಜನರು ಭಯ ಪಡುವ ವಾತಾವರಣ ಇದೆ. ಮೈಸೂರು ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರವಧಿಯ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆ ಆಗಲಿದೆ ಎಂದು ದೂರಿದರು.ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ನಾನು ಸಹ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದೆ. ಈಗ ನಡೆದಿರುವಂತಹ ಹಗರಣದಿಂದ ರಾಜ್ಯದ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಲೂಟಿ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ಕೆ. ಪ್ರಸನ್ನ ಕುಮಾರ್, ಬಿ.ಎಸ್. ಜಗದೀಶ, ಪಿ.ಸಿ. ಶ್ರೀನಿವಾಸ್ ಭಟ್, ಶ್ರೀನಿವಾಸ ದಾಸಕರಿಯಪ್ಪ, ಭಾಗ್ಯ ಪಿಸಾಳೆ, ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ, ಧನಂಜಯ ಕಡ್ಲೇಬಾಳು, ಆರ್. ಶಿವಾನಂದ, ಜಿ.ಎಸ್. ಶ್ಯಾಂ ಇತರರು ಇದ್ದರು.- - - -12ಕೆಡಿವಿಜಿ39ಃ:
ದಾವಣಗೆರೆಯಲ್ಲಿ ಮುಡಾ ಹಗರಣದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದ ಬಿಜೆಪಿ ಮುಖಂಡರ ಬಂಧನ ಅತ್ಯಂತ ಖಂಡನೀಯ ಎಂದು ಬಿಜೆಪಿ ಅಧ್ಯಕ್ಷರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.